ಚೆನ್ನೈ : ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ತಮಿಳುನಾಡು ಸರ್ಕಾರ ನಿಯೋಜಿಸಿರುವ ತನಿಖಾ ಆಯೋಗವು ವಿ.ಕೆ.ಶಶಿಕಲಾ ಮತ್ತು ಅಪೊಲೋ ಆಸ್ಪತ್ರೆ ಮುಖ್ಯಸ್ಥ ಪ್ರತಾಪ್ ರೆಡ್ಡಿಗೆ ಸಮನ್ಸ್ ಜಾರಿ ಮಾಡಿದೆ.
ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎ.ಆರ್ಮುಗಸ್ವಾಮಿ ನೇತೃತ್ವದ ತನಿಖಾ ಆಯೋಗವನ್ನು ರಾಜ್ಯ ಸರ್ಕಾರ ರಚಿಸಿದ್ದು, ಜಯಾ ಅವರ ಸಾವಿಗೆ ಕಾರಣವಾದ ಅಂಶಗಳು, ಸನ್ನಿವೇಶಗಳ ಕುರಿತು ತನಿಖೆ ನಡೆಸಲಿದೆ.
ಆರ್.ಕೆ.ನಗರ ಉಪ ಚುನಾವಣೆ ಮುನ್ನಾ ದಿನವಾದ ಡಿ.20ರಂದು ಟಿಟಿವಿ ದಿನಕರನ್ ಆಪ್ತ ಪಿ.ವೆಟ್ರಿವಲ್ ಜಯಲಲಿತಾ ಆಸ್ಪತ್ರೆಯಲ್ಲಿರುವ ವೀಡಿಯೋ ಬಿಡುಗಡೆಗೊಳಿಸಿದ್ದರು. ಇದು ರಾಜಿ ರಾಜಕಾರಣದಲ್ಲಿ ಬಹಳಷ್ಟು ತಲ್ಲಣ ಉಂಟುಮಾಡಿತ್ತು.
ಇದಕ್ಕೆ ಸಂಬಂಧಿಸಿದಂತೆ ಏಕ ವ್ಯಕ್ತಿ ಆಯೋಗವು ದಿನಕರನ್ ಆಪ್ತನ ವಿರುದ್ಧ ಪೋಲಿಸ್ ದೂರು ದಾಖಲಿಸಿದೆ. ನಿವೃತ್ತ ನ್ಯಾಯಾಧೀಶ ಎ.ಆರ್ಮುಗಸ್ವಾಮಿ ಆಯೋಗವು ತನ್ನ ವ್ಯಾಪ್ತಿಯಲ್ಲಿ ತನಿಖೆ ಆರಂಭಿಸಿರುವುದಾಗಿ ಪೋಲಿಸ್ ಮೂಲಗಳು ತಿಳಿಸಿವೆ.