ಬೆಂಗಳೂರು: ದೇಶಾದ್ಯಂತ ಹೆಚ್ಚಾಗುತ್ತಿರುವ ಕೊರೊನಾ ಪ್ರಕೋಪದ ನಡುವೆ, ಈ ಮಾರಕ ರೋಗಕ್ಕೆ ಔಷಧಿ ಅಥವಾ ಲಸಿಕೆ ಕಂಡುಹಿಡಿಯುವ ಪ್ರಯತ್ನಗಳು ಮುಂದುವರೆದಿವೆ. ಆದರೆ, ಇನ್ನೊಂದೆಡೆ ಪ್ಲಾಸ್ಮಾ ಥೆರಪಿ ಚಿಕಿತ್ಸೆಯ ಮೂಲಕ ರೋಗಿಗಳ ಚಿಕಿತ್ಸೆ ಮುಂದುವರೆದಿದೆ. ಕೊರೊನಾ ರೋಗದಿಂದ ಗುಣಮುಖರಾಗಿರುವ ರೋಗಿಗಳನ್ನು ನಿರಂತರವಾಗಿ ಬ್ಲಡ್ ಪ್ಲಾಸ್ಮಾ ದಾನ ಮಾಡಲು ಕೇಳಿಕೊಳ್ಳಲಾಗುತ್ತಿದೆ ಮತ್ತು ಇತರೆ ಕೊರೊನಾ ರೋಗಿಗಳು ಚೇತರಿಸಿಕೊಳ್ಳಲು ಇದು ಸಹಾಯಕಾರಿಯಾಗಿದೆ ಎಂಬುದರ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸರ್ಕಾರದ ಈ ಮನವಿಗೆ ಸ್ಪಂದಿಸುತ್ತಿರುವ ಹಲವರು ಮುಂದೆ ಬಂದು ಪ್ಲಾಸ್ಮಾ ಡೊನೇಟ್ ಮಾಡುತ್ತಿದ್ದಾರೆ. ಇದೀಗ ಇದೇ ಸರಣಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಪ್ಲಾಸ್ಮಾ ದಾನ ಮಾಡುವವರಿಗೆ ರೂ.5000 ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದೆ.
ಪ್ರತಿಯೊಬ್ಬ ಪ್ಲಾಸ್ಮಾ ದಾನಿಗೆ ಐದು ಸಾವಿರ ರೂಪಾಯಿಗಳನ್ನು ಪ್ರೋತ್ಸಾಹನೆಯ ರೂಪದಲ್ಲಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಕೆ ಹೇಳಿದ್ದಾರೆ.
ಹಾಸಿಗೆ ಹಂಚಿಕೆ ಕುರಿತು ಪ್ರೈವೇಟ್ ಆಸ್ಪತ್ರೆಗಳು ಬೋರ್ಡ್ ನೇತುಹಾಕುವುದು ಅನಿವಾರ್ಯ
ರಾಜ್ಯದಲ್ಲಿ ಕೊವಿಡ್ 91 ರೋಗಿಗಳಿಗೆ ಹಾಸಿಗೆ ಪಡೆಯಲು ಉಂಟಾಗುತ್ತಿರುವ ಅಡಚಣೆಯನ್ನು ನಿವಾರಿಸಲು ರಾಜ್ಯ ಸರ್ಕಾರ ಅಧಿಸೂಚನೆಯೊಂದನ್ನು ಸಹ ಬಿಡುಗಡೆ ಮಾಡಿದ್ದು, ರಾಜ್ಯದ ಖಾಸಗಿ ಆಸ್ಪತ್ರೆಗಳು ತಮ್ಮ ಆಸ್ಪತ್ರೆಯಲ್ಲಿ ಹಾಸಿಗೆ ಹಂಚಿಕೆಯ ಕುರಿತು ಫಲಕಗಳನ್ನು ನೇತು ಹಾಕುವುದು ಅನಿವಾರ್ಯ ಎಂದು ಹೇಳಿದೆ. "ಕರ್ನಾಟಕ ರಾಜ್ಯ ಕೆಪಿಎಂಇ (ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆ) ಕಾಯ್ದೆ ಅಡಿಯಲ್ಲಿ ನೋಂದಾಯಿಸಲಾದ ಎಲ್ಲಾ ಆಸ್ಪತ್ರೆಗಳು ತಮ್ಮ ಆಸ್ಪತ್ರೆಯ ಮುಖ್ಯದ್ವಾರದ ಬಳಿ ಹಾಸಿಗೆ ಹಂಚಿಕೆ ಡಿಸ್ಪ್ಲೆ ಫಲಕ ಪ್ರದರ್ಶಿಸಬೇಕು" ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವ್ಯಾಸ್ ಭಾಸ್ಕರ್ ಅವರು ಸಹಿ ಮಾಡಲಾಗಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲ ಹಾಸಿಗೆಗಳ ಕುರಿತಾತ ವಿಸ್ತೃತ ಮಾಹಿತಿಯನ್ನು ಇದರಲ್ಲಿ ಪ್ರದರ್ಶಿಸಬೇಕು. ಇದರಲ್ಲಿ, ಆಸ್ಪತ್ರೆಯ ಹೆಸರು, ಒಟ್ಟು ಹಾಸಿಗೆಗಳ ಸಂಖ್ಯೆ ಮತ್ತು ಕೋವಿಡ್ ರೋಗಿಗಳಿಗೆ ನಿಗದಿಪಡಿಸಿದ ಹಾಸಿಗೆಗಳ ಸಂಖ್ಯೆಯನ್ನು ಹೊರತುಪಡಿಸಿ ಇತರ ಮಾಹಿತಿಯನ್ನು ಸಹ ಪ್ರದರ್ಶಿಸುವುದು ಆಸ್ಪತ್ರೆಗಳಿಗೆ ಕಡ್ಡಾಯವಾಗಲಿದೆ.
ಅಧಿಸೂಚನೆಯಲ್ಲಿ ನೀಡಲಾಗಿರುವ ಸೂಚನೆಗಳ ಪ್ರಕಾರ ಜುಲೈ 16ರವರೆಗೆ ಡಿಸ್ಪ್ಲೆ ಬೋರ್ಡ್ ವ್ಯವಸ್ಥೆಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ ಹಾಗೂ ಒಂದು ವೇಳೆ ಈ ಸೂಚನೆಯನ್ನು ಪಾಲಿಸದೆ ಹೋದಲ್ಲಿ ನೈಸರ್ಗಿಕ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಇಂಡಿಯನ್ ಪಿನಲ್ ಕೋಡ್ ನ ವಿಭಿನ್ನ ಸೆಕ್ಷನ್ ಗಳ ಅಡಿ ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ. ಇದಕ್ಕೂ ಮೊದಲು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಖಾಸಗಿ ಆಸ್ಪತ್ರೆಗಳು ತಮ್ಮ ಆಸ್ಪತ್ರೆಗಳಲ್ಲಿರುವ ಒಟ್ಟು ಹಾಸಿಗೆಗಳಲ್ಲಿ ಶೇ.50 ರಷ್ಟು ಹಾಸಿಗೆಗಳನ್ನು ಕೊವಿಡ್-19 ರೋಗಿಗಳಿಗೆ ಮೀಸಲಿಡಬೇಕು ಎಂದು ಸೂಚಿಸಲಾಗಿತ್ತು.