ನವದೆಹಲಿ : ಆನ್ಲೈನ್ ಹಗರಣ ಅಥವಾ ಡಿಜಿಟಲ್ ವಂಚನೆಗೆ ಸಂಬಂಧಿಸಿದಂತೆ ಮತ್ತೊಂದು ಹೊಸ ಹಗರಣ ಬೆಳಕಿಗೆ ಬಂದಿದೆ.ಗ್ರಾಹಕರ ಹಣವನ್ನು ದ್ವಿಗುಣಗೊಳಿಸುವಂತಹ ನಕಲಿ ಆಫರ್ ಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಪೇಟಿಎಂ (Paytm) ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಈ ಬಗ್ಗೆ ಎಚ್ಚರಿಕೆವಹಿಸುವಂತೆ ಬಳಕೆದಾರರನ್ನು ಕೇಳಿಕೊಂಡಿದ್ದಾರೆ.
ಡಿಜಿಟಲ್ ವಂಚನೆಯ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ಸಂದೇಶ ರವಾನಿಸಿರುವ ವಿಜಯ್ ಶೇಖರ್ ಶರ್ಮಾ ಇಂತಹ ವಂಚನೆಗಳ ಬಗ್ಗೆ ಗ್ರಾಹಕರು ಜಾಗರೂಕರಾಗಿರಬೇಕು. ಇಂತಹ ಹಗರಣಗಳಿಂದ ದೂರವಿರಬೇಕು ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಆನ್ಲೈನ್ ವಂಚನೆಗೆ ಬಲಿಯಾದ ಬಳಕೆದಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ವಿಜಯ್ ಶೇಖರ್ ಶರ್ಮಾ ಟ್ವಿಟರ್ನಲ್ಲಿ ಹೊಸ ಹಗರಣದ ಬಗ್ಗೆ ಬಳಕೆದಾರರಿಗೆ ತಿಳಿಸಿದ್ದಾರೆ. ಇದರಲ್ಲಿ ಪೇಟಿಎಂ ಬಳಕೆದಾರರು ಹಣವನ್ನು ದ್ವಿಗುಣಗೊಳಿಸಲಾಗುವುದು ಎಂದು ವಂಚಕರು ಸುಳ್ಳು ಹೇಳುತ್ತಾರೆ ಎಂದು ಮಾಹಿತಿ ನೀಡಿರುವ ಶರ್ಮಾ ಈ ವಂಚನೆಗೆ ಬಲಿಯಾದ ಬಳಕೆದಾರರಿಂದ ಪಡೆದ ಸ್ಕ್ರೀನ್ಶಾಟ್ ಅನ್ನು ತಮ್ಮ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
And here, someone’s priorities are so wrong ‼️
Why would you send money to someone , and expect double in return 🙄😑⁉️
Never fall for such illogical baits❌ https://t.co/X9QGNzXRI2 pic.twitter.com/VdxiWvmO7h— Vijay Shekhar Sharma (@vijayshekhar) May 2, 2020
ಹಣವನ್ನು ದ್ವಿಗುಣಗೊಳಿಸುವ ಹೊಸ ಹಗರಣ ಯಾವುದು?
ವಿಜಯ್ ಶೇಖರ್ ಶರ್ಮಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಸ್ಕ್ರೀನ್ಶಾಟ್ ಪ್ರಕಾರ ಟೆಲಿಗ್ರಾಮ್ ಬಳಕೆದಾರರ ಗ್ರೂಪ್ ಮೂಲಕ ಪೇಟಿಎಂ ಹಣವನ್ನು ಕಳುಹಿಸುವಂತೆಯೂ ಹಾಗೂ ಗ್ರಾಹಕರು ಖಾತೆಗೆ ಕಳುಹಿಸಿದ ಹಣವವನ್ನು Paytm ಮೂಲಕ ದ್ವಿಗುಣವಾಗಿ ಹಿಂದಿರುಗಿಸಲಾಗುವುದು ಎಂದು ಮೋಸದ ಸಂದೇಶ ರವಾನೆಯಾಗುತ್ತಿದೆ. ಬಳಕೆದಾರರು ಹಣವನ್ನು ಕಳುಹಿಸಿದ ತಕ್ಷಣ ಅವರು ಈ ವಂಚಕರ ಬಲೆಗೆ ಬಿದ್ದು ತಮ್ಮ ಖಾತೆ ಖಾಲಿ ಮಾಡಿಕೊಳ್ಳುತ್ತಾರೆ.
ಈ ಮೊದಲು ಕೂಡ Paytm ಹೆಸರಿನಲ್ಲಿ ನಡೆದಿದೆ ವಂಚನೆ:
Paytm KYC ಹೆಸರಿನಲ್ಲಿ ಆನ್ಲೈನ್ ವಂಚನೆ ಪ್ರಕರಣಗಳು ಈ ಹಿಂದೆ ವರದಿಯಾಗಿವೆ. KYC ಯ ಆನ್ಲೈನ್ ಪರಿಶೀಲನೆಯ ಸಮಯದಲ್ಲಿ, ಹ್ಯಾಕರ್ಗಳು ಮೊಬೈಲ್ಗೆ ಲಿಂಕ್ ಅನ್ನು ಕಳುಹಿಸುತ್ತಾರೆ. ಒಂದೊಮ್ಮೆ ಗ್ರಾಹಕರು ಆ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಹ್ಯಾಕರ್ಗಳು ಅವರ ಖಾತೆಯ ವಿವರಗಳನ್ನು ಕದ್ದು ಖಾತೆಯಿಂದ ಹಣವನ್ನು ಡ್ರಾ ಮಾಡಿಕೊಳ್ಳಲಾಗುತ್ತದೆ. ಈ ಮೋಸದ ಬಗ್ಗೆ ತಿಳಿದು ಗ್ರಾಹಕರು ದೂರು ನೀಡುವ ಹೊತ್ತಿಗೆ ಅವರ ಖಾತೆ ಸಂಪೂರ್ಣವಾಗಿ ಖಾಲಿಯಾಗಿರುತ್ತದೆ. ಹಾಗಾಗಿ ಇಂತಹ ವಂಚನೆಗಳ ಬಗ್ಗೆ ಜಾಗರೂಕರಾಗಿರುವುದು ಬಹಳ ಮುಖ್ಯ.
ಈ ಹಿನ್ನೆಲೆಯಲ್ಲಿ ಈ ಮೊದಲೂ ಸಹ ಟ್ವೀಟ್ ಮೂಲಕ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದ ಪೇಟಿಎಂ (Paytm) ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ನಕಲಿ ಕರೆಗಳು ಮತ್ತು ಎಸ್ಎಂಎಸ್ ಮೂಲಕ ಹ್ಯಾಕರ್ ಗಳು ಕೆವೈಸಿ ಹೆಸರಿನಲ್ಲಿ ಪೇಟಿಎಂಗೆ ಮೋಸ ಮಾಡಿದ್ದಾರೆ. ಗ್ರಾಹಕರು Paytm ಗೆ ಸಂಬಂಧಿಸಿದ ನಕಲಿ ಕರೆಗಳು ಮತ್ತು ಸಂದೇಶಗಳ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಮನವಿ ಮಾಡಿದ್ದರು.