ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಾರ್ಷಿಕ 6,000 ರೂ.ಗಳ ನಗದು ಹಣವನ್ನು ಈ ಯೋಜನೆಯಡಿ ವರ್ಗಾಯಿಸಲಾಗುತ್ತಿದ್ದು, ಮೂರು ಕಂತುಗಳಲ್ಲಿ 2,000 ರೂ.ಗಳಂತೆ ಈ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ವರ್ಗಾಯಿಸಲಾಗುತ್ತದೆ. 

Last Updated : Feb 24, 2019, 04:54 PM IST
ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ title=

ಗೋರಖ್ ಪುರ: ಮಹಾತ್ವಾಕಾಂಕ್ಷಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಉತ್ತರಪ್ರದೇಶದ ಗೋರಖ್ ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು. ಈ ಮೂಲಕ ಒಂದು ಕೋಟಿಗೂ ಅಧಿಕ ರೈತರಿಗೆ ತಲಾ 2,000 ರೂ.ಗಳ ಮೊದಲ ಕಂತಿನ ಹಣವನ್ನು ಖಾತೆಗೆ ನೇರ ವರ್ಗಾವಣೆ ಮಾಡಿದರು.

ಬಳಿಕ ರೈತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರಕೃತಿ ವಿಕೋಪ ಸಂಧರ್ಭಗಳಲ್ಲಿ ರೈತರಿಗೆ ನೆರವಾಗಲು ಈ ಯೋಜನೆಯನ್ನ ಜಾರಿಗೆ ತಂದಿದ್ದೇವೆ. ಸ್ವತಂತ್ರ್ಯಾ ನಂತರ ರೈತರಿಗೆ ಸಿಕ್ಕ ಅತೀ ದೊಡ್ಡ ಯೋಜನೆ ಇದು. ಈ ಯೋಜನೆ ಸಂಪೂರ್ಣ ಕೇಂದ್ರ ಸರ್ಕಾರದ್ದೇ ಹೊರತು, ಇದರಲ್ಲಿ ರಾಜ್ಯ ಸರ್ಕಾರಗಳ ಪಾತ್ರವಿಲ್ಲ. ಕೇವಲ ಫಲಾನುಭಾವಿಗಳನ್ನು ಗುರುತಿಸಿ ಅವರ ಖಾತೆಗೆ ಹಣ ಜಮಾ ಮಾಡುವುದಷ್ಟೇ ಕೆಲಸ. ಈ ಯೋಜನೆ ದೇಶದ ರೈತರ ಹಕ್ಕೂ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳ ಮತ್ತು ವಿರೋಧ ಪಕ್ಷಗಳಿಗೆ ಚಾಟಿ ಬೀಸಿದ ನರೇಂದ್ರ ಮೋದಿ, ಈ ಹಿಂದಿನ ಸರ್ಕಾರಗಳು ರೈತರ ಉದ್ಧಾರದ ಬಗ್ಗೆ ಮಾತ್ರ ಮಾತನಾಡುತ್ತಿದ್ದವು, ಯೋಜನೆಗಳನ್ನು ಕಾಗದಕ್ಕೆ ಅಷ್ಟೇ ಸೀಮಿತಗೊಳ್ಳುತ್ತಿದ್ದವು. ಆದರೆ ನಮ್ಮ ಸರ್ಕಾರ ರೈತರ ಖಾತೆಗೆ ನೇರ ಹಣ ವರ್ಗಾವಣೆ ಮಾಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ರೈತರಿಗೆ ಅರ್ಪಿಸಿದೆ. ಜಾತಿ ಧರ್ಮದ ಆಧಾರದಲ್ಲಿ ನಾವು ಈ ಹಣ ನೀಡುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಇನ್ನೂ ವಿಸ್ತರಿಸಲಿದ್ದೇವೆ. ರೈತ ಫಸಲು ಹೆಚ್ಚಿಸಿ ಲಾಭ ಗಳಿಸಲು ನೆರವಾಗುತ್ತೇವೆ. ರೈತ ಅನ್ನದಾತನೂ ಹೌದು ದೇಶದ ತಾಕತ್ತೂ ಹೌದು ಎಂದು ನುಡಿದರು.

ಏನಿದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ?
ಕೇಂದ್ರ ಬಜೆಟ್‌ನಲ್ಲಿ ರೈತರ ಬಂಡವಾಳ ಬೆಂಬಲ ಯೋಜನೆಯಡಿ ಮೋದಿ ಸರಕಾರ ಒಟ್ಟು 2 ಕೋಟಿ ರೈತರಿಗೆ ತಲಾ 25,000 ರೂ.ಗಳ ನೇರ ನಗದು ವರ್ಗಾವಣೆ ಮಾಡಲು ಮುಂದಾಗಿದೆ. ಇದಕ್ಕಾಗಿ ಒಟ್ಟು 75,000 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದ್ದು, ಈ ವರೆಗಿನ ಇತಿಹಾಸದಲ್ಲೇ ಅತಿ ದೊಡ್ಡ ನೇರ ನಗದು ವರ್ಗಾವಣೆಯಾಗಲಿದೆ. ಎರಡು ಹೆಕ್ಟೇರ್‌ ವರೆಗೆ ಕೃಷಿಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಾರ್ಷಿಕ 6,000 ರೂ.ಗಳ ನಗದು ಹಣವನ್ನು ಈ ಯೋಜನೆಯಡಿ ವರ್ಗಾಯಿಸಲಾಗುತ್ತಿದ್ದು, ಮೂರು ಕಂತುಗಳಲ್ಲಿ 2,000 ರೂ.ಗಳಂತೆ ಈ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ವರ್ಗಾಯಿಸಲಾಗುತ್ತದೆ. ನರೇಗಾ ಕೂಲಿ ಹಣವನ್ನು ವರ್ಗಾಯಿಸುವ ಮಾದರಿಯಲ್ಲೇ ಸರಕಾರಿ ನಾಮಾಂಕಿತ ಖಾತೆ ಮೂಲಕ ಕೇಂದ್ರ ಸರಕಾರ ಈ ಹಣವನ್ನು ಫಲಾನುಭವಿಗಳಿಗೆ ವರ್ಗಾಯಿಸುತ್ತದೆ. 

ಯಾರಿಗೆ ಅನುಕೂಲ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ಮಧ್ಯಮ ಮತ್ತು ಬಡ ವರ್ಗದ ರೈತರಿಗೆ ಅನುಕೂಲವಾಗಲಿದೆ. ಮಾರ್ಚ್​ 31 ರೊಳಗೆ ಎಲ್ಲಾ ರೈತರ ಖಾತೆಗೆ ಮೊದಲ ಕಂತಿನ ಹಣ ಜಮಾ ಆಗುತ್ತದೆ. ಇಂದು ಒಂದು ಕೋಟಿ ರೈತರಿಗೆ ಮೊದಲ ಕಂತಿನ ಹಣ ಜಮಾ ಆಗುತ್ತಿದೆ. ಈ ಯೋಜನೆಯಲ್ಲಿ 12 ಕೋಟಿ ರೈತರು ಫಲಾನುಭವಿಗಳಾಗಿದ್ದಾರೆ. 2018 ಡಿಸೆಂಬರ್​ 1 ರಿಂದಲೇ ಈ ಯೋಜನೆ ಅನ್ವಯವಾಗಲಿದೆ. ಈ ಯೋಜನೆಯ ಲಾಭ ಪಡೆಯಲು ಆಧಾರ್​ ಕಾರ್ಡ್ ಕಡ್ಡಾಯ.

Trending News