ನವದೆಹಲಿ: ತಮ್ಮ ಶಾಸಕತ್ವ ಅನರ್ಹತೆಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಭಿನ್ನ ನಿಲುವು ತಳೆದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಸುಪ್ರೀಂಕೋರ್ಟ್ ಗೆ ವರ್ಗಾಯಿಸಬೇಕು ಎಂದು ಎಐಎಡಿಎಂಕೆಯ 18 ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ಕೈಗೆತ್ತಿಕೊಳ್ಳಲು ಸರ್ವೋಚ್ಚ ನ್ಯಾಯಾಲಯ ಇಂದು ಒಪ್ಪಿಗೆ ಸೂಚಿಸಿದ್ದು, ಜೂನ್ 27ರಂದು ಅರ್ಜಿ ವಿಚಾರಣೆ ನಡೆಸಲು ನ್ಯಾಯಾಲಯ ಒಪ್ಪಿಕೊಂಡಿದೆ.
ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ನ್ಯಾ. ಎಸ್.ಕೆ. ಕೌಲ್ ಅವರನ್ನೊಳಗೊಂಡ ರಜಾಕಾಲದ ಪೀಠವು ಎಐಎಡಿಎಂಕೆ 18 ಶಾಸಕರ ಅನರ್ಹತೆಯ ಅರ್ಜಿಯನ್ನು ಜೂನ್ 27ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಈ ವಿಷಯದಲ್ಲಿ ಕಳೆದ ಜೂನ್ 14ರಂದು ಮದ್ರಾಸ್ ಹೈಕೋರ್ಟ್ ವಿಭಜಿತ ತೀರ್ಪು ನೀಡಿರುವುದರಿಂದ, ಮೂರನೇ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ. ವಿಚಾರಣೆಯ ನಂತರ ನ್ಯಾಯಾಧೀಶರು ತೀರ್ಪು ಪ್ರಕಟಿಸಲಿದ್ದಾರೆ.
ಆದರೆ ಇದು ಒಂದು ಗಂಭೀರ ವಿಷಯವಾಗಿರುವುದರಿಂದ ಸರ್ವೋಚ್ಚ ನ್ಯಾಯಾಲಯವು ಇದರ ವಿಚಾರಣೆ ನಡೆಸಬೇಕು ಎಂದು 18 ಶಾಸಕರ ಪರವಾಗಿ ಹಾಜರಿದ್ದ ಹಿರಿಯ ನ್ಯಾಯವಾದಿ ವಿಕಾಸ್ ಸಿಂಗ್ ಹೇಳಿದರು.