ನವದೆಹಲಿ: ತೆರಿಗೆ ಪಾವತಿದಾರರಿಗೆ ಸರ್ಕಾರ ಭಾರಿ ನೆಮ್ಮದಿಯ ಸುದ್ದಿಯೊಂದನ್ನೇ ಪ್ರಕಟಿಸಿದೆ. ಹೌದು, ಸರ್ಕಾರ ನೇರ ತೆರಿಗೆ, ಬೇನಾಮಿ ಕಾನೂನಿಗೆ ಸಂಬಂಧಿಸಿದ ಗಡುವನ್ನು ವಿಸ್ತರಿಸಿದೆ. ಕೋವಿಡ್ -19 ಮಹಾಮಾರಿಯ ಸಮಯದಲ್ಲಿ ವೈಯಕ್ತಿಕ ತೆರಿಗೆದಾರರು ಮತ್ತು ವ್ಯವಹಾರಗಳು ಎದುರಿಸುತ್ತಿರುವ ಕಷ್ಟವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಆದಾಯ ತೆರಿಗೆ ಅನುಸರಣೆ ಅಗತ್ಯತೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಈ ಕ್ರಮವು ತೆರಿಗೆದಾರರು ಮತ್ತು ವ್ಯವಹಾರಗಳಿಗೆ ಭಾರಿ ನೆಮ್ಮದಿ ನೀಡುವ ಗುರಿ ಹೊಂದಿದೆ. ಇದರ ಜೊತೆಗೆ ವಿಭಿನ್ನ ಶಾಸನಬದ್ಧ ಮತ್ತು ನಿಯಂತ್ರಕ ಅನುಸರಣೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಗಡುವು ನೀಡುವುದು ಕೂಡ ಇದರ ಉದ್ದೇಶವಾಗಿದೆ. ಇದರಲ್ಲಿ 2019 ರ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಪಾವತಿಸುವ ದಿನಾಂಕ ವಿಸ್ತರಣೆಯ ಜೊತೆಗೆ ಪ್ಯಾನ್-ಆಧಾರ್ ಇಂಟರ್ ಲಿಂಕಿಂಗ್ ಕೂಡ ಶಾಮೀಲಾಗಿವೆ.
ಆದಾಯ ತೆರಿಗೆ ರಿಟರ್ನ್ (ITR) ಪಾವತಿಸುವ ದಿನಾಂಕ
2018-19ರ ಆರ್ಥಿಕ ವರ್ಷಕ್ಕೆ ಅನ್ವಯಿಸುವಂತೆ ಮೂಲ ಅಥವಾ ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ ಪಾವತಿಸುವ ದಿನಾಂಕವನ್ನು 31 ಜುಲೈ 2020 ರವರೆಗೆ ವಿಸ್ತರಿಸಲಾಗಿದೆ. ಜೊತೆಗೆ 2019-20ರ ಹಣಕಾಸು ವರ್ಷಕ್ಕೆ ತೆರಿಗೆ ರಿಟರ್ನ್ಸ್ ಪಾವತಿಸುವ ದಿನಾಂಕವನ್ನು 2020 ರನವೆಂಬರ್ 30 ಕ್ಕೆ ವಿಸ್ತರಿಸಲಾಗಿದೆ. ಅಂದರೆ ಜುಲೈ 31 ಮತ್ತು 2020 ರ ಅಕ್ಟೋಬರ್ 31 ರೊಳಗೆ ತೆರಿಗೆ ಪಾವತಿದಾರರು ಸಲ್ಲಿಸಬೇಕಾಗಿದ್ದ ರಿಟರ್ನ್ಸ್ ಅನ್ನು ಇದೀಗ ನವೆಂಬರ್ 30 ರೊಳಗೆ ಸಲ್ಲಿಸಬಹುದಾಗಿದೆ.
ತೆರಿಗೆ ವಿನಾಯಿತಿ ಪಡೆಯಲು ಹೂಡಿಕೆ ಮಾಡಲು ಹೆಚ್ಚಿನ ಕಾಲಾವಕಾಶ
ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) 2019-20ನೇ ಸಾಲಿನಲ್ಲಿ ತೆರಿಗೆ ವಿನಾಯಿತಿ ಪಡೆಯಲು ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡುವ ಗಡುವನ್ನು ಸಹ 2020 ಜುಲೈ 31 ರವರೆಗೆ ವಿಸ್ತರಿಸಿದೆ. ಇದರಿಂದ, ತೆರಿಗೆ ಪಾವತಿದಾರರಿಗೆ 2019-20ರ ಆರ್ಥಿಕ ವರ್ಷದಲ್ಲಿ ಜುಲೈ 31, 2020 ರವರೆಗೆ ಹೂಡಿಕೆ ಮಾಡಿ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ (ಜೀವ ವಿಮೆ, ಪಿಂಚಣಿ ನಿಧಿ, ಉಳಿತಾಯ ಪತ್ರ ಇತ್ಯಾದಿ), 80 ಡಿ (ವೈದ್ಯಕೀಯ ವಿಮೆ) ಮತ್ತು 80 ಜಿ (ದೇಣಿಗೆ) ಅಡಿಯಲ್ಲಿ ತೆರಿಗೆ ವಿನಾಯ್ತಿಯನ್ನು ಪಡೆಯಬಹುದಾಗಿದೆ.
ಆಧಾರ್-ಪ್ಯಾನ್ ಇಂಟರ್ ಲಿಂಕಿಂಗ್ ಅವಧಿ ವಿಸ್ತರಣೆ
ಇದಲ್ಲದೆ ಸರ್ಕಾರ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಇಂಟರ್ ಲಿಂಕಿಂಗ್ ಗಾಗಿ ನಿಗದಿ ಪಡಿಸಿದ್ದ ಅಂತಿಮ ಗಡುವನ್ನು ಮಾರ್ಚ್ 31, 2021 ರವರೆಗೆ ವಿಸ್ತರಿಸಿದೆ. ಇದಕ್ಕೂ ಮೊದಲು ಈ ಕೆಲಸಕ್ಕಾಗಿ ಜೂನ್ 30, 2020 ಅಂತಿಮ ಗಡುವು ನೀಡಲಾಗಿತ್ತು. ಈ ಕೆಲಸ ಮಾಡದೆ ಹೋದ ಸಂದರ್ಭದಲ್ಲಿ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗುವ ಸಾಧ್ಯತೆ ಇತ್ತು ಮತ್ತು 10 ಸಾವಿರವರೆಗೆ ದಂಡ ಬೀಳುವ ಸಾಧ್ಯತೆ ಕೂಡ ಇತ್ತು.
ವಿಳಂಬವಾಗಿ ತೆರಿಗೆ ಪಾವತಿಯ ನಿಯಮ
ಈ ಕುರಿತು ಸುಗ್ರೀವಾಜ್ಞೆ ಹೊರಡಿಸಿರುವ ಸರ್ಕಾರ ತಡವಾಗಿ ತೆರಿಗೆ ಪಾವತಿ ಮಾಡುವವರಿಗೆ ಈ ಮೊದಲು ವಿಧಿಸಲಾಗುತ್ತಿದ್ದ ಶೇ. 12ರಷ್ಟು ಬಡ್ಡಿಯನ್ನು ಶೇ. 9ಕ್ಕೆ ಇಳಿಕೆ ಮಾಡಿತ್ತು. ಈ ಸುಗ್ರೀವಾಜ್ಞೆ ಇದೀಗ ಜೂನ್ 30, 2020ರ ಬಳಿಕ ತೆರಿಗೆ ಪಾವತಿಸುವವರಿಗೆ ಅನ್ವಹಿಸುವುದಿಲ್ಲ.
ತೆರಿಗೆಯ ಆಡಿಟ್ ರಿಪೋರ್ಟ್ ಸಲ್ಲಿಸಲು ಹೆಚ್ಚಿನ ಕಾಲಾವಕಾಶ
ತೆರಿಗೆಯ ಆಡಿಟ್ ರಿಪೋರ್ಟ್ ಸಲ್ಲಿಸುವ ಗಡುವನ್ನು ಕೂಡ ಅಕ್ಟೋಬರ್, 31, 2020ರವರೆಗೆ ವಿಸ್ತರಿಸಲಾಗಿದೆ.
ಬೇನಾಮಿ ಕಾನೂನು
ಇದಲ್ಲದೆ, ವಿವಿಧ ನೇರ ತೆರಿಗೆ ಮತ್ತು ಬಿನಾಮಿ ಕಾನೂನುಗಳ ಅಡಿಯಲ್ಲಿ ವಿವಿಧ ಅನುಸರಣೆಗೆ ಸಂಬಂಧಿಸಿದಂತೆ ಆದೇಶಗ ರವಾನಿಸಲು ಅಥವಾ ಪ್ರಾಧಿಕಾರದಿಂದ ನೋಟಿಸ್ ನೀಡುವ ಗಡುವನ್ನು 2020 ಡಿಸೆಂಬರ್ 31 ನಿಂದ 2021 ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ.
ಈ ಬದಲಾವಣೆಯನ್ನೂ ಕೂಡ ಮಾಡಲಾಗಿದೆ
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 54 ರಿಂದ 54 ಜಿಬಿ ಅಡಿಯಲ್ಲಿ ಬಂಡವಾಳ ಲಾಭದ ದೃಷ್ಟಿಯಿಂದ, 'ರೋಲ್‌ಓವರ್' ಲಾಭ, ಹೂಡಿಕೆ, ನಿರ್ಮಾಣ ಅಥವಾ ವಿನಾಯ್ತಿ ಪಡೆಯಲು ಖರೀದಿಯ ಗಡುವನ್ನು 2020 ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ಹೀಗಾಗಿ, ಇದೀಗ 2020 ರ ಸೆಪ್ಟೆಂಬರ್ 30 ರವರೆಗೆ ಮಾಡಿದ ಹೂಡಿಕೆ, ನಿರ್ಮಾಣ ಅಥವಾ ಖರೀದಿಯು ಬಂಡವಾಳ ಲಾಭದ ಅಡಿಯಲ್ಲಿ ವಿನಾಯ್ತಿ ಪಡೆಯಲು ಅವಕಾಶ ಮತ್ತು ಆಧಾರ ಎರಡೂ ಇರಲಿವೆ.
ಅಂತೆಯೇ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10 ಎಎ ಅಡಿಯಲ್ಲಿ ವಿನಾಯ್ತಿ ಪಡೆಯಲು ವಿಶೇಷ ಆರ್ಥಿಕ ವಲಯ (SEZ) ನಲ್ಲಿರುವ ಘಟಕಗಳಿಂದ ಕೆಲಸ ಪ್ರಾರಂಭಿಸುವ ದಿನಾಂಕವನ್ನು 2020 ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. 31 ಮಾರ್ಚ್ 2020 ರೊಳಗೆ ಅಗತ್ಯ ಅನುಮತಿ ಪಡೆದ ಘಟಕಗಳಿಗೆ ಇದರ ಲಾಭ ಸಿಗಲಿದೆ.