ಮೋಟರು ವಾಹನ ವಿಧೇಯಕ ವಿರೋಧಿಸಿ ಇಂದು ರಾಷ್ಟ್ರವ್ಯಾಪಿ ಸಾರಿಗೆ ಬಂದ್

ರಾಜ್ಯದಲ್ಲಿಲ್ಲ ಬಂದ್ ಬಿಸಿ, ಎಂದಿನಂತೆ ಮುಂದುವರೆದ ರಸ್ತೆ ಸಂಚಾರ.

Last Updated : Aug 7, 2018, 08:54 AM IST
ಮೋಟರು ವಾಹನ ವಿಧೇಯಕ ವಿರೋಧಿಸಿ ಇಂದು ರಾಷ್ಟ್ರವ್ಯಾಪಿ ಸಾರಿಗೆ ಬಂದ್ title=

ಬೆಂಗಳೂರು: ಮೋಟಾರು ವಾಹನ ತಿದ್ದುಪಡಿ ವಿಧೇಯಕ-2017 ನ್ನು ಕೈ ಬಿಡುವಂತೆ ಒತ್ತಾಯಿಸಿ ಇಂದು  ದೇಶಾದ್ಯಂತ ಸಾರಿಗೆ ಮುಷ್ಕರ ನಡೆಸಲು ಕೇಂದ್ರ ಕಾರ್ಮಿಕ ಸಂಘಟನೆಗಳು ನಿರ್ಧರಿಸಿವೆ. ಆದರೆ ರಾಜ್ಯದಲ್ಲಿ ಬಂದ್ ಗೆ ಬೆಂಬಲ ಸಿಗದ ಹಿನ್ನೆಲೆಯಲ್ಲಿ ರಸ್ತೆ ಸಂಚಾರ ಎಂದಿನಂತೆ ಮುಂದುವರೆದಿದೆ. ಆದರೆ ಕೆಲವು ಸಾರಿಗೆ ಸಂಘಟನೆಗಳು ಬೆಂಬಲ ಸೂಚಿಸಿದ್ದು ಇಂದು ಆಟೋ,ಟ್ಯಾಕ್ಸಿ ಸಿಗದೆ ಸಾರ್ವಜನಿಕರು ತಕ್ಕಮಟ್ಟಿಗೆ ಪರದಾಡಬೇಕಾದ ಸ್ಥಿತಿ ಎದುರಾಗಬಹುದು.

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೆಎಸ್ಆರ್​ಟಿಸಿ, ಖಾಸಗಿ ಬಸ್, ಆಟೋ, ಟ್ಯಾಕ್ಸಿಗಳು ಎಂದಿನಂತೆ ತಮ್ಮ ಸೇವೆ ಆರಂಭಿಸಿವೆ. ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಒಕ್ಕೂಟ (ಸಿಐಟಿಯು), ಸಿಪಿಎಂ, ರಾಷ್ಟ್ರೀಯ ಚಾಲಕರ ಒಕ್ಕೂಟ ಸೇರಿದಂತೆ ಇನ್ನು ಕೆಲ ಸಂಘಟನೆಗಳು ಮುಷ್ಕರವನ್ನು ಬೆಂಬಲಿಸಿವೆ. ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರುಗಳ ಸಂಘದ ಒಕ್ಕೂಟ, ಖಾಸಗಿ ಬಸ್‌ ಮಾಲೀಕರ ಸಂಘ, ಮ್ಯಾಕ್ಸಿ ಕ್ಯಾಬ್‌, ಪ್ರವಾಸಿ ವಾಹನ ಮಾಲೀಕರ ಸಂಘ, ಕೆಲ ಆಟೊ ಚಾಲಕರ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಕೊಟ್ಟಿಲ್ಲ. ಹೀಗಾಗಿ ಪ್ರಯಾಣಿಕರಿಗೆ ಮುಷ್ಕರದ ಬಿಸಿ ತಟ್ಟುವ ಸಾಧ್ಯತೆ ಕಡಿಮೆ.

ಓಲಾ, ಉಬರ್‌ ಟ್ಯಾಕ್ಸಿ ಚಾಲಕರು ಮತ್ತು ಕೆಲ ಆಟೊ ಚಾಲಕರ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಘೋಷಿಸಿವೆ. ಹೀಗಾಗಿ, ಓಲಾ, ಉಬರ್‌ ಟ್ಯಾಕ್ಸಿ ಸೇವೆ ಸಂಪೂರ್ಣ ಸ್ಥಗಿತಗೊಳ್ಳಲಿದೆ. 

ಮೋಟರು ವಾಹನ ವಿಧೇಯಕ?
ಮೋಟಾರು ವಾಹನ(ತಿದ್ದುಪಡಿ) ವಿಧೇಯಕ- 2017 ರಸ್ತೆ ಸಂಚಾರ ಮಾನದಂಡಗಳನ್ನು ಉಲ್ಲಂಘಿಸುವವರಿಗೆ ಅಧಿಕ ದಂಡ ವಿಧಿಸುತ್ತದೆ. ಆದರೆ ರಸ್ತೆ ಸುರಕ್ಷತೆ ಮತ್ತು ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶಕ್ಕಿಂತ ಅಧಿಕ ದಂಡ ವಸೂಲಿ ಮಾಡುವ ಸಲುವಾಗಿ ಜಾರಿಗೆ ತರುತ್ತಿರುವ ಈ ವಿಧೇಯಕ ಬಡ ಸಾರಿಗೆ ಕಾರ್ಮಿಕರಿಗೆ ಮರಣ ಶಾಸನವಾಗಲಿದೆ ಎಂದು ಸಾರಿಗೆ ಕಾರ್ಮಿಕ ಸಂಘಟನೆಗಳು ಈ ವಿಧೇಯಕವನ್ನು ವಿರೋಧಿಸುತ್ತಿವೆ.

ನೂತನ ವಿಧೇಯಕದನ್ವಯ ವಿಧಿಸುವ ದಂಡ ಈ ರೀತಿ ಇದೆ
* ಸಾಮಾನ್ಯ ತಪ್ಪಿಗೆ ವಿಧಿಸುತ್ತಿದ್ದ ದಂಡವನ್ನು ರೂ. 100 ನಿಂದ 500 ರಿಂದ 1,500 ರೂ.ವರೆಗೆ ಹೆಚ್ಚಿಸಲಾಗಿದೆ.
* ರಸ್ತೆ ನಿಯಂತ್ರಣ ನಿಯಮ ಉಲ್ಲಂಘನೆ ಈ ಹಿಂದೆ ವಿಧಿಸುತ್ತಿದ್ದ ದಂಡ ರೂ. 100, ಇದನ್ನು ರೂ. 500 ರಿಂದ 1,000 ರೂ.ವರೆಗೆ ಹೆಚ್ಚಿಸಲಾಗಿದೆ.
* ಅಧಿಕಾರಿಗಳ ಆದೇಶ ಪಾಲಿಸದೆ ಇರುವುದಕ್ಕೆ ರೂ. 500 ರಿಂದ 2,000 ರೂ. ವರೆಗೆ ದಂಡ 
* ಅತಿ ವೇಗದ ಚಾಲನೆಗೆ 400 ರೂ. ನಿಂದ 1,000 ರೂ. ವರೆಗೆ ದಂಡ.
* ವಾಹನಗಳ ಅಪಘಾತವಾದರೆ ಚಾಲಕರಿಗೆ 10 ಲಕ್ಷದ ವರೆಗೆ ದಂಡ
* ಸಿಗ್ನಲ್ ಜಂಪ್ ಅಪರಾಧಕ್ಕೆ 1,500ರೂ. ದಂಡ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮೋಟಾರು ವಾಹನ ತಿದ್ದುಪಡಿ ವಿಧೇಯಕ-2017 ನ್ನು ಕೈ ಬಿಡುವಂತೆ ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಇಂದು ಮುಷ್ಕರ ನಡೆಸುತ್ತಿವೆ.

Trending News