ಗೋರಖ್‌ಪುರ: ಮಹಿಳೆಯೊಬ್ಬರು ತನ್ನ 3 ತಿಂಗಳ ಗಂಡು ಮಗುವನ್ನು 50 ಸಾವಿರ ರೂ.ಗೆ ಮಾರಾಟ ಮಾಡಿ, ಬಳಿಕ ಕಿಡ್ನಾಪ್ ನಾಟಕವಾಡಿರುವ ಘಟನೆ ಉತ್ತರಪ್ರದೇಶ(Uttar Pradesh)ದ ಗೋರಖ್‌ಪುರದಲ್ಲಿ ನಡೆದಿದೆ.
ಸಿಸಿಟಿವಿ ಫೂಟೇಜ್(CCTV Footage) ಸಹಾಯದಿಂದ ಪೊಲೀಸರು ಕೇವಲ ಎರಡೇ ಗಂಟೆಯಲ್ಲಿ ಮಗುವನ್ನು ಪತ್ತೆಹಚ್ಚಿದ್ದಾರೆ. ಮಗು ಮಾರಾಟ ಮಾಡಿದ್ದ ತಾಯಿ ಮತ್ತು ಮತ್ತೊಬ್ಬ ಮಹಿಳೆಯನ್ನು ವಿಚಾರಣೆ ನಡೆಸಲು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಸಂಜೆ ತನ್ನ ಮಗುವನ್ನು ಅಪಹರಿಸಲಾಗಿದೆ ಎಂದು ಗೋರಖನಾಥ್ ಪೊಲೀಸ್ ಠಾಣೆ ವ್ಯಾಪ್ತಿಯ ಇಲಾಹಿಬಾಗ್ ಪ್ರದೇಶದ ನಿವಾಸಿ ಸಲ್ಮಾ ಖತೂನ್ ಎಂಬುವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ರಸೂಲ್‌ಪುರ ಪ್ರದೇಶದ ಮದುವೆ ಮಂಟಪವೊಂದರ ಬಳಿ ತನ್ನ 3 ತಿಂಗಳ ಮಗುವನ್ನು ಕೆಂಪು ಸೀರೆ ಧರಿಸಿದ್ದ ಮಹಿಳೆಯೊಬ್ಬರು ಕಸಿದುಕೊಂಡ ಎಸ್‌ಯುವಿ ಕಾರಿ(SUV Car)ನಲ್ಲಿ ಪರಾರಿಯಾಗಿದ್ದಾಳೆಂದು ಸಲ್ಮಾ ಪೊಲೀಸರಿಗೆ ತಿಳಿಸಿದ್ದರು. ಕೂಡಲೇ ನಗರ ಪೊಲೀಸ್ ಅಧೀಕ್ಷಕ ಸೋನಮ್ ಕುಮಾರ್ ಅವರು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: "ಉತ್ತರ ಪ್ರದೇಶದ ನೂತನ ಜನಸಂಖ್ಯಾ ಕಾಯ್ದೆ ಇಡೀ ದೇಶಕ್ಕೂ ಅಳವಡಿಸಲಿ"
ಮಗು ಕಾಣೆಯಾಗಿರುವ ವಿಚಾರವಾಗಿ ತಾಯಿ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಾ, ಅಪಹರಣದ ಬಗ್ಗೆ ಕಥೆ ಕಟ್ಟುತ್ತಿರುವುದು ಪೊಲೀಸರ ಅರಿವಿಗೆ ಬಂದಿತ್ತು. ಬಳಿಕ ತನ್ನ ಮಗು ಕಿಡ್ನಾಪ್(Child Kidnapped) ಆಗಿದೆ ಎನ್ನುತ್ತಿದ್ದ ತಾಯಿಯ ಮೇಲೆಯೇ ಪೊಲೀಸರಿಗೆ ಅನುಮಾನ ಹೆಚ್ಚಾಗಿದೆ. ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾದ ನಿಜಾಂಶ ಗೊತ್ತಾಗಿದೆ. ಸಲ್ಮಾ ತನ್ನ ಮಗುವನ್ನು ಇನ್ನೊಬ್ಬ ಮಹಿಳೆಗೆ ನೀಡಿ ಇ-ರಿಕ್ಷಾದಲ್ಲಿ ಹತ್ತಿ ಹೋಗಿರುವುದು ಪೊಲೀಸರಿಗೆ ಕಂಡುಬಂದಿದೆ.
ಸಿಸಿಟಿವಿ ದೃಶ್ಯಾವಳಿ(CCTV Footage) ಸಹಾಯದಿಂದ ಪೊಲೀಸರು ಮಗು ತೆಗೆದುಕೊಂಡು ಹೋಗಿದ್ದ ಮಹಿಳೆಯನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಸಿದರು. ಹುಮಾಯೂನ್ಪುರ ರಸ್ತೆಯಲ್ಲಿ ಕೊನೆಗೂ ಆಕೆಯ ಮನೆಯನ್ನು ಪತ್ತೆ ಹಚ್ಚಿ ಮಗುವನ್ನು ವಶಪಡಿಸಿಕೊಳ್ಳಲಾಯಿತು ಎಂದು ಎಸ್ಪಿ ತಿಳಿಸಿದ್ದಾರೆ. ಮಗುವಿನ ತಂದೆ ಚಿಂದಿ ಆಯುವ ಕೆಲಸ ಮಾಡುತ್ತಿದ್ದು, ತೀವ್ರ ಬಡತನದ ಪರಿಸ್ಥಿತಿಯಿಂದ ಮಹಿಳೆ ತಮ್ಮ ಮಗುವನ್ನು ಮಾರಾಟ ಮಾಡಿದ್ದರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Flipkart Sale ನಲ್ಲಿ ಈ ಫೋನ್ ಗಳ ಮೇಲೆ ಸಿಗಲಿದೆ ಮೂರು ಸಾವಿರ ರೂಪಾಯಿಗಳ ರಿಯಾಯಿತಿ
ಇದು ದತ್ತು ಪ್ರಕರಣವೆಂದು ಒಬ್ಬರು ವಾದಿಸಿದರೆ, ಮಗುವನ್ನು 50 ಸಾವಿರ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಮತ್ತೊಬ್ಬರು ಹೇಳುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಬಳಿಕವಷ್ಟೇ ಪ್ರಕರಣದ ನಿಜಾಂಶ ತಿಳಿದುಬರಲಿದೆ. ಆದರೆ ಮಗುವನ್ನು ಅಪಹರಿಸಲಾಗಿದೆ ಎಂದು ಸುಳ್ಳು ಹೇಳಿ ಕಿಡ್ನಾಪ್ ನಾಟಕವಾಡಿದ ತಾಯಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಮೂಲಗಳ ಪ್ರಕಾರ ತಾಯಿ ತನ್ನ ಪತಿಗೂ ತಿಳಿಸದೆ ಮಗುವನ್ನು ಮಾರಿದ್ದಳು. ಮಗುವಿನ ಬಗ್ಗೆ ಆತ ವಿಚಾರಿಸಿದಾಗ ಅಪಹರಣದ ಕಥೆ ಕಟ್ಟುವ ಮೂಲಕ ನಂಬಿಸಲು ಪ್ರಯತ್ನಿಸಿದ್ದಳು ಎಂದು ತಿಳಿದು ಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.