ತಿನ್ನಲು ಬರೀ ಲಡ್ಡು ಕೊಡ್ತಾಳೆ ಅಂತ ವಿಚ್ಚೇದನ ಕೇಳಿದ ಪತಿ!

ಮನೆಯಲ್ಲಿ ಹೆಂಡತಿ ಪ್ರತಿನಿತ್ಯ ತಿನ್ನಲು ಲಡ್ಡು ಹೊರತುಪಡಿಸಿ ಬೇರೇನನ್ನೂ ಕೊಡುವುದಿಲ್ಲ. ಇದನ್ನು ತಿಂದು ಸಾಕಾಗಿದೆ. ದಯವಿಟ್ಟು ನನಗೆ ಈಕೆಯಿಂದ ವಿಚ್ಚೇದನ ಕೊಡಿಸಿ ಎಂದು ಪತಿಯೋರ್ವ ನ್ಯಾಯಾಲಯದ ಮೊರೆ ಹೋಗಿದ್ದಾನೆ.

Updated: Aug 20, 2019 , 06:57 PM IST
ತಿನ್ನಲು ಬರೀ ಲಡ್ಡು ಕೊಡ್ತಾಳೆ ಅಂತ ವಿಚ್ಚೇದನ ಕೇಳಿದ ಪತಿ!

ಮೀರತ್: ಸಂಸಾರ ಅಂದ್ಮೇಲೆ ಜಗಳ, ಭಿನ್ನಾಭಿಪ್ರಾಯ ಇದ್ದೇ, ಇರುತ್ತೆ... ಇದನ್ನೆಲ್ಲಾ ಸಹಿಸಲು ಸಾಧ್ಯವೇ ಇಲ್ಲ ಅಂತ ಅನ್ನಿಸಿದಾಗ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗೋದು ಸಾಮಾನ್ಯ. ಆದರೆ, ಇಲ್ಲೊಬ್ಬ ಪತಿ ತನ್ನ ಪತ್ನಿಯಿಂದ ವಿಚ್ಚೇದನ ಕೊಡಿಸಿ ಅಂತ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾನೆ. ಆದರೆ, ವಿಚ್ಛೇದನಕ್ಕೆ ಕಾರಣ ಏನ್ ಗೊತ್ತಾ? ಲಡ್ಡು!

"ಮನೆಯಲ್ಲಿ ಹೆಂಡತಿ ಪ್ರತಿನಿತ್ಯ ತಿನ್ನಲು ಲಡ್ಡು ಹೊರತುಪಡಿಸಿ ಬೇರೇನನ್ನೂ ಕೊಡುವುದಿಲ್ಲ. ಇದನ್ನು ತಿಂದು ಸಾಕಾಗಿದೆ. ದಯವಿಟ್ಟು ನನಗೆ ಈಕೆಯಿಂದ ವಿಚ್ಚೇದನ ಕೊಡಿಸಿ" ಎಂದು ಉತ್ತರಪ್ರದೇಶದ ಮೀರತ್ ಜಿಲ್ಲೆಯ ನಿವಾಸಿ ಕೌಟುಂಬಿಕ ನ್ಯಾಯಾಲಯದಲ್ಲಿ ಅಳಲು ತೋಡಿಕೊಂಡಿದ್ದಾನೆ.

ಅಷ್ಟಕ್ಕೂ ಆಕೆ ಬರೀ ಲಡ್ಡು ಕೊಡಲು ಕಾರಣ ಕೇಳಿದ್ರೆ ನಿಜಕ್ಕೂ ಹುಚ್ಚುತನ ಅನ್ಸುತ್ತೆ.  ಈ ಬಗ್ಗೆ ಪತಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದು, "ಕೆಲ ದಿನಗಳ ಹಿಂದೆ ನಾನು ಅನಾರೋಗ್ಯದಿಂದ ಬಳಲುತ್ತಿದ್ದೆ. ಹೀಗಾಗಿ ನನ್ನ ಹೆಂಡತಿ ತಾಂತ್ರಿಕನ ಬಳಿ ಹೋಗಿ ಸಲಹೆ ಕೇಳಿದಾಗ, ಕೇವಲ ಲಡ್ಡು ಕೊಡುವಂತೆ ಹೇಳಿದ್ದಾರೆ. ಹಾಗಾಗಿ ಈಕೆ ದಿನ ಬೆಳಿಗ್ಗೆ 4, ಸಂಜೆ 4 ಲಡ್ಡು ಮಾತ್ರ ತಿನ್ನಲು ಕೊಡುತ್ತಿದ್ದಾಳೆ. ಇದನ್ನು ಬಿಟ್ಟು ಬೇರೇನನ್ನೂ ಕೊಡುತ್ತಿಲ್ಲ" ಎಂದು ದೂರಿದ್ದಾನೆ.

ಇದರಿಂದ ಗೊಂದಲಕ್ಕೊಳಗಾದ ನ್ಯಾಯಾಲಯ, ಅವರಿಬ್ಬರನ್ನೂ ಕೌನ್ಸಿಲಿಂಗ್ ಕರೆದು ವಿಚಾರಣೆ ಮಾಡಿದ್ದಾರೆ. ಅಲ್ಲದೆ, ಆಕೆ ಗಂಡನ ಆರೋಗ್ಯ ಸುಧಾರಿಸಲೆಂದು ಲಡ್ಡು ನೀಡಿದ್ದಾಳೆ. ಇದನ್ನು ಮೂಢನಂಬಿಕೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೌನ್ಸಿಲರ್ ತಿಳಿಸಿದ್ದಾರೆ.