ಮಕ್ಕಳ ಹಸಿವು ನೀಗಿಸಲು ಈ ತಾಯಿ ಮಾಡಿದ್ದೇನು?

ಮಹಿಳೆ ತನ್ನ ಮೂವರು ಮಕ್ಕಳ ಹಸಿವು ನೀಗಿಸಲು ಮಾಡಿರುವ ಈ ಕೆಲಸ ಎಲ್ಲರನ್ನೂ ಭಾವುಕರನ್ನಾಗಿ ಮಾಡುತ್ತದೆ.

Updated: Jan 13, 2020 , 09:30 AM IST
ಮಕ್ಕಳ ಹಸಿವು ನೀಗಿಸಲು ಈ ತಾಯಿ ಮಾಡಿದ್ದೇನು?

ಚೆನ್ನೈ: ಸಾಲ ಬಾಧೆ ತಾಳದೆ ಪತಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಈ ಕುಟುಂಬ ಅಕ್ಷರಶಃ ಬೀದಿಗೆ ಬಂದಿದೆ. ಪತಿಯ ಮರಣದ ನಂತರ, ಮೂವರು ಮಕ್ಕಳಿಗೆ ಒಂದೊತ್ತು ಊಟ ಹಾಕಲು ಕೂಡ ಪರದಾಡುತ್ತಿದ್ದ ಈ 31 ವರ್ಷದ ಮಹಿಳೆ, ಮಕ್ಕಳ ಹೊಟ್ಟೆ ಹಸಿವು ನೀಗಿಸಲು ತನ್ನ ತಲೆಯನ್ನೇ ಬೋಳಿಸಿದ್ದಾರೆ. ಆ ಕೂದಲು ಮಾರಿ ಬಂದ 150 ರೂಪಾಯಿಯಿಂದ ಮಕ್ಕಳಿಗೆ ಊಟ ಹಾಕಿದ್ದಾರೆ. ತಮಿಳುನಾಡಿನ ಸೇಲಂನಲ್ಲಿ ಈ ಮನಕಲಕುವ ಘಟನೆ ನಡೆದಿದೆ.

ವಿಶೇಷವೆಂದರೆ, ಈ ಘಟನೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿಯವರ ಸ್ವ ಕ್ಷೇತ್ರದಿಂದ ಬಂದಿದೆ. ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ, ಈ ಮಹಿಳೆಗೆ ಸಹಾಯ ಮಾಡಲು ಅನೇಕ ಜನರು ಮುಂದೆ ಬರುತ್ತಿದ್ದಾರೆ. ಪ್ರೇಮಾ ಮತ್ತು ಪತಿ ಸೆಲ್ವಂ ಇಟ್ಟಿಗೆ ಗೂಡು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಸೆಲ್ವಂ ಅವರು ತಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಕೆಲವು ಜನರಿಂದ 2.5 ಲಕ್ಷ ರೂಪಾಯಿಗಳನ್ನು ಸಾಲ ಪಡೆದಿದ್ದರು.

ಆದರೆ ಸ್ವಂತ ಉದ್ಯಮದಲ್ಲಿ ನಷ್ಟ ಅನುಭವಿಸಿದ್ದ ಸೆಲ್ವಂ ಸಾಲಗಾರರಿಗೆ ಉತ್ತರ ನೀಡಲಾಗದೆ ಆತ್ಮಹತ್ಯೆ ಮಾಡಿಕೊಂಡರು. ಪತಿಯ ಮರಣದ ನಂತರ ಕುಟುಂಬದ ಜವಾಬ್ದಾರಿ ಪ್ರೇಮಾ ಹೆಗಲಿಗೆ ಬಿದ್ದಿತು. ಕುಟುಂಬ ಸದಸ್ಯರು ಕೆಲವು ದಿನಗಳವರೆಗೆ ಅವರಿಗೆ ಸಹಾಯ ಮಾಡಿದರು, ಆದರೆ ಎಷ್ಟು ದಿನ ಬೇರೆಯವರು ಸಹಾಯ ಮಾಡಲು ಸಾಧ್ಯ...

ದುರದೃಷ್ಟವಶಾತ್ ಪ್ರೇಮಾ ಅವರ ಬಳಿ ತನ್ನ ಮಕ್ಕಳಿಗೆ ಒಂದೊತ್ತು ಊಟ ಹಾಕುವಷ್ಟೂ ಸೌಲಭ್ಯ ಇರಲಿಲ್ಲ. ಇನ್ನೊಂದೆಡೆ ತಾನೆತ್ತ ಮಕ್ಕಳ ಹಸುವಿನ ರೋಧನವನ್ನೂ ನೋಡಲು ಆಗುತ್ತಿರಲಿಲ್ಲ. ಏನು ಮಾಡಲೂ ತೋಚದ ಈಕೆಗೆ ಕೂದಲು ಮಾರಿದರೆ ಹಣ ದೊರೆಯುತ್ತದೆ ಎಂಬ ಮಾಹಿತಿ ಲಭ್ಯವಾಯಿಟು. ಇದನ್ನು ತಿಳಿದ ಬಳಿಕ ಪ್ರೇಮಾ  ತಮ್ಮ ಕೂದಲನ್ನು ಮಾರಾಟ ಮಾಡಲು ಮನಸ್ಸು ಮಾಡಿದರು.

ಪ್ರೇಮಾ ಅವರ ಈ ಅಸಹಾಯಕ ಸ್ಥಿತಿಯ ಬಗ್ಗೆ ಮಾಧ್ಯಮಗಳಲ್ಲಿ ವೈರಲ್ ಆದ ನಂತರ, ಅನೇಕ ಜನರು ಅವರಿಗೆ ಸಹಾಯ ಮಾಡಲು ಮುಂದೆ ಬಂದರು ಮತ್ತು ಈಗ ಅವರಿಗೆ ಒಂದೊತ್ತಿನ ಊಟಕ್ಕೆ ದಾರಿ ಸಿಕ್ಕಿದೆ. ಇದರಿಂದ ಅವರು ತಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಸೇಲಂನ ಜಿಲ್ಲಾಧಿಕಾರಿ ಎಸ್.ಎ.ರಾಮನ್ ಮಾತನಾಡಿ, ಈ ಘಟನೆಯ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಸಿಕ್ಕ ಬಳಿಕ ತಕ್ಷಣವೇ ಪ್ರೇಮಾ ಅವರಿಗೆ ವಿಧವೆ ಪಿಂಚಣಿ ಸೌಲಭ್ಯ ದೊರೆಯುವಂತೆ ಮಾಡಿದ್ದೇವೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಪರವಾಗಿ ನಗರದಲ್ಲಿ ಆವಿನ್ ಮಿಲ್ಕ್ ಪಾರ್ಲರ್ ಸ್ಟಾಲ್ ಸಹ ನೀಡಲಾಗುವುದು ಎಂದು ತಿಳಿಸಿದ ಅವರು, ಈ ಬಗ್ಗೆ ಮುಖ್ಯಮಂತ್ರಿಯವರಿಗೂ ಮಾಹಿತಿ ನೀಡಲಾಗಿದ್ದು, ಇದಕ್ಕಾಗಿ ಮುಖ್ಯಮಂತ್ರಿಯವರು ಸ್ವತಃ ಕಾಗದ ಪತ್ರಗಳನ್ನು ಹಸ್ತಾಂತರಿಸಲಿದ್ದಾರೆ ಎಂದರು.