Karnataka Budget 2023: ರಾಜ್ಯ ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಾಳೆ ವಿಧಾನಸಭೆಯಲ್ಲಿ ವರ್ಷ 2023-24ನೇ ಸಾಲಿನ ಆರ್ಥಿಕ ಆಯವ್ಯಯ ಮಂಡಿಸಲಿದ್ದಾರೆ. ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯಬೇಕಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆ ಈ ಬಾರಿಯ ಬಜೆಟ್ ಜನಪರ ಬಜೆಟ್ ಆಗಿರುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಎಲ್ಲೆಡೆಯಿಂದ ವ್ಯಕ್ತವಾಗುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಕಚೇರಿಯ ಮೂಲಗಳು, ಪ್ರಸ್ತುತ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬೊಮ್ಮಾಯಿ ಸರ್ಕಾರದ ಎರಡನೇ ಬಜೆಟ್ ಇದಾಗಿದ್ದು. ಬಜೆಟ್ ಹಿನ್ನೆಲೆ ಬೊಮ್ಮಾಯಿ ಹಲವು ಬಾರಿ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಾರಿಯ ಬಜೆಟ್ ಗಾತ್ರ 3 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಾಗಿರುವ ಸಾಧ್ಯತೆಯನ್ನು ಮೂಲಗಳು ವ್ಯಕ್ತಪಡಿಸಿವೆ. 2022-23ನೇ ಆರ್ಥಿಕ ವರ್ಷಕ್ಕೆ ಬೊಮ್ಮಾಯಿ ಅವರು 2.5 ಲಕ್ಷ ಕೋಟಿ ರೂ.ಗಳ ಬಜೆಟ್ ಅನ್ನು ಮಂಡಿಸಿದ್ದು ಇಲ್ಲಿ ಉಲ್ಲೇಖನೀಯ.
ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳುಗಳು ಬಾಕಿ ಇರುವಾಗ ಮಂಡನೆಯಾಗುತ್ತಿರುವ ಈ ಬಜೆಟ್ ಆಡಳಿತಾರೂಢ ಬಿಜೆಪಿಗೆ ನಿರ್ಣಾಯಕ ಅಂಶವಾಗಿರುವ ಸಾಧ್ಯತೆ ಇದೆ. ರಾಜ್ಯದ ಕೇಸರಿ ಪಡೆಯ ಚುನಾವಣಾ ಭವಿಷ್ಯವನ್ನು ಹೆಚ್ಚಿಸುವ ಜನಪರ ಯೋಜನೆಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕೃತ ಬಜೆಟ್ ಇದಾಗಿರಲಿದೆ ಎಂದು ಬಿಜೆಪಿ ಆಂತರಿಕ ಮೂಲಗಳು ಈಗಾಗಲೇ ಮಾಹಿತಿಯನ್ನು ನೀಡಿವೆ. ಪ್ರಸ್ತುತ ರಾಜ್ಯ ಕೊವಿಡ್ ಸಾಂಕ್ರಾಮಿಕ ಆಘಾತದಿಂದ ಸಾಕಷ್ಟು ಹೊರಬಂದಿದ್ದು, ತೆರಿಗೆ ಸಂಗ್ರಹದ ನಿಗದಿತ ಗುರಿಯನ್ನು ಕೂಡ ಮೀರಿದೆ ಎನ್ನಲಾಗಿದೆ.
ಈ ಬಾರಿಯ ಬಜೆಟ್ ನಲ್ಲಿ ಸರ್ಕಾರ ರೈತರಿಗೆ ಸಬ್ಸಿಡಿ ಮತ್ತು ಗ್ರಾಮೀಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಸಾಧ್ಯತೆ ಇದೆ. ಇನ್ನೊಂದೆಡೆ ನಿರಾವರಿ ಯೋಜನೆಗಳಿಗೂ ಕೂಡ ಉತ್ತಮ ಪ್ಯಾಕೇಜ್ ಸಿಗುವ ನಿರೀಕ್ಷೆ ಇದೆ. ಇದೇ ವೇಳೆ ರಾಜ್ಯದ ಮೇಲಿನ ಸಾಲದ ಕುರಿತು ಆತಂಕ ವ್ಯಕ್ತಪಡಿಸಿರುವ ರಾಜ್ಯ ಪ್ರತಿಪಕ್ಷದ ನಾಯಕರು ಈ ಬಾರಿ ಒಟ್ಟು ಸಾಲ 80 ಸಾವಿರ ಕೋಟಿ ದಾಟುವ ಸಾಧ್ಯತೆ ಇದೆ ಎಂದಿದ್ದಾರೆ.
ಇದನ್ನೂ ಓದಿ-ರಾಜ್ಯದ 4 ಕೋಟಿ ಜನರಿಗೆ ಆರೋಗ್ಯ ಕಾರ್ಡ್ : ಸಿಎಂ ಬೊಮ್ಮಾಯಿ
ಬಜೆಟ್ 2023-24 ನಿಂದ ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಗಳೇನು?
ಇನ್ನು ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಗಳ ಕುರಿತು ಹೇಳುವುದಾದರೆ. ಈ ಬಾರಿಯ ಬಜೆಟ್ ನಿಂದ ಉತ್ತರ ಕರ್ನಾಟಕದ ಜನರಿಗೆ ಭಾರಿ ನಿರೀಕ್ಷೆಗಳಿವೆ. ಜನರ ಈ ಆಶೋತ್ತರಗಳಿಗೆ ಮುಖ್ಯಮಂತ್ರಿಗಳು ಎಷ್ಟರ ಮಟ್ಟಿಗೆ ನ್ಯಾಯ ಒದಗಿಸಲಿದ್ದಾರೆ ಎಂಬುದು ಕಾಲವೇ ನಿರ್ಧರಿಸಲಿದೆ. ಜನರ ನಿರೀಕ್ಷೆಗಳ ಕುರಿತು ಹೇಳುವುದಾದರೆ ಗಡಿಭಾಗದ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಲು ಬೆಳಗಾವಿಯಲ್ಲಿ ಸುವರ್ಣ ಸೌಧವನ್ನು ನಿರ್ಮಿಸಲಾಗಿದ್ದು, ಅದರ ಸರಿಯಾದ ಬಳಕೆಯಾಗುತ್ತಿಲ್ಲ ಎಂಬ ಕೂಗು ಹಲವೆಡೆಯಿಂದ ಕೇಳಿಬರುತ್ತಿದೆ. ಅಷ್ಟೇ ಅಲ್ಲ ಬೆಳಗಾವಿ ಜಿಲ್ಲೆಯಲ್ಲಿ ಸೂಕ್ತ ಪ್ರಮಾಣದ ಶೀತಲೀಕರಣ ಘಟಕಗಳಿಲ್ಲದ ಕಾರಣ ಜಿಲ್ಲೆಯ ರೈತರು ತಮ್ಮ ತರಕಾರಿ, ದ್ರಾಕ್ಷಿ ಇತ್ಯಾದಿ ಬೆಳೆಗಳಿಗಾಗಿ ನೆರೆ ರಾಜ್ಯದ ಮೇಲೆ ಅವಲಂಭಿತರಾಗುವ ಪರಿಸ್ಥಿತಿ ಇದೆ. ಬೆಳಗಾವಿ ಜಿಲ್ಲಾ ವಿಭಜನೆಯ ಕೂಗು ಒಂದೆಡೆ ಇದ್ದರೆ, ಹುಬ್ಬಳ್ಳಿ-ಧಾರವಾಡ-ಬೆಳಗಾವಿ ತ್ರಿವಳಿ ನಗರ ರಚನೆ, ಬೆಂಗಳೂರನ್ನೇ ತನ್ನ ಪ್ರಮುಖ ಕೈಗಾರಿಕಾ ನಗರವನ್ನಾಗಿ ಆಯ್ದುಕೊಂಡ ಬೃಹತ್ ಉದ್ಯಮಗಳ ಗಮನ ಉತ್ತರ ಕರ್ನಾಟಕದತ್ತ ಸೆಳೆಯುವುದು ಒಂದು ಪ್ರಮುಖ ಸವಾಲಾಗಿದೆ. ಇದಕ್ಕಾಗಿ ಸೂಕ್ತ ಮೂಲಭೂತ ಸೌಕರ್ಯ ಅಭಿವೃದ್ಧಿ ಆಗಬೇಕು ಎಂಬುದು ಜನರ ಬೇಡಿಕೆಯಾಗಿದೆ.
ಇದನ್ನೂ ಓದಿ-ಕಾಡಾನೆ ಹಾವಳಿ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಸಿಎಂ ಬೊಮ್ಮಾಯಿ
ನಿರಾವರಿ ಯೋಜನೆಗಳ ಕುರಿತು ಹೇಳುವುದಾದರೆ, ಸರ್ಕಾರ ಈ ಬಾರಿಯ ತನ್ನ ಬಜೆಟ್ ನಲ್ಲಿ ಮಹದಾಯಿ ಯೋಜನೆ ಕಾಮಗಾರಿ ಆರಂಭ ಸೇರಿದಂತೆ ಇತರ ಸಣ್ಣಪುಟ್ಟ ಯೋಜನೆಗಳಿಗೆ ಹೆಚ್ಚಿನ ಹಣವನ್ನು ಮೀಸಲಿರಿಸಬೇಕು ಎಂಬುದು ಜನರ ಮತ್ತೊಂದು ಬೇಡಿಕೆಯಾಗಿದೆ. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣ, ಎಫ್ಎಂಜಿಸಿ, ಹೆಚ್ಚುವರಿ ಕೈಗಾರಿಕಾ ಪ್ರದೇಶಗಳ ನಿರ್ಮಾಣ, ಕುಮಟಾ ಮತ್ತು ಕಾರವಾರಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮೆಡಿಕಲ್ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ, ಮೀನುಗಾರಿಕೆಯ ಬಂದರುಗಳ ಜೀರ್ಣೋದ್ಧಾರ, ಶಿರಶಿಯಲ್ಲಿ ಪರಿಸರ ವಿವಿ ಸ್ಥಾಪನೆ, ಭತ್ತಕೃಷಿಗೆ ಉತ್ತೇಜನ, ಗುಡ್ಡಗಾಡು ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಶಾಮೀಲಾಗಿವೆ.
ಇದನ್ನೂ ಓದಿ-ಹೊಸಪೇಟೆ-ಹಂಪಿ-ಗಂಗಾವತಿ ಮಾರ್ಗದಲ್ಲಿ ಬರಲಿದೆ ಚತುಷ್ಪಥ ರಸ್ತೆ..!
ಮುಖ್ಯಮಂತ್ರಿಗಳ ತವರು ಜಿಲ್ಲೆಯ ಕುರಿತು ಹೇಳುವುದಾದರೆ. ಹಾವೇರಿ ಜಿಲ್ಲೆಯ ಜನರು ತಮ್ಮ ಜಿಲ್ಲೆಯವರೇ ಆದ ಮುಖ್ಯಮಂತ್ರಿಗಳಿಂದ ಈ ಬಾರಿ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಜಿಲ್ಲೆಯಲ್ಲಿ ಮಾವು, ಹತ್ತಿ, ಮೆಕ್ಕೆಜೋಳ ಬೆಳೆಗಳಿಗೆ ಸಂಸ್ಕರಣಾ ಘಟಕ ಸ್ಥಾಪನೆಯ ಜೊತೆಗೆ ಜಗತ್ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಮಾರಾಟಕ್ಕೆ ಎಪಿಎಂಸಿ ಅಭಿವೃದ್ದಿ, ಶಿಗ್ಗಾವಿ-ಸವಣೂರ ವಿಳ್ಯದೆಲೆಗೆ ಮಾರುಕಟ್ಟೆ ಸೌಲಭ್ಯ ವಿಸ್ತರಣೆ ಶಾಮೀಲಾಗಿವೆ. ಇನ್ನೊಂದೆಡೆ ಗದಗ ಜಿಲ್ಲೆಯ ಜನರು ಕೂಡ ಈ ಬಾರಿಯ ಬಜೆಟ್ ನಿಂದ ಭಾರಿ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್, ಟೆಕ್ಸ್ಟೈಲ್ ಪಾರ್ಕ್, ಮಲಪ್ರಭಾ, ತುಂಗಾಭದ್ರಾ ಸೇರಿದಂತೆ ಬಾಕಿ ಉಳಿದಿರುವ ಇತರ ಏತನಿರಾವರಿ ಯೋಜನೆಗಳಿಗೆ ಅನುದಾನ, ಕಪ್ಪತಗುಡ್ಡದಲ್ಲಿ ಆಯುರ್ವೇದಿಕ ಸಂಶೋಧನಾ ಕೇಂದ್ರ ಸ್ಥಾಪನೆಯ ಬೇಡಿಕೆಗಳು ಶಾಮೀಲಾಗಿವೆ. ಬಿಜಾಪುರ ಬಾಗಲಕೋಟೆ ಜಿಲ್ಲೆಗಳ ಕುರಿತು ಹೇಳುವುದಾದರೆ, ಈ ಭಾಗದ ಜನರು ಕೂಡ ಈ ಬಾರಿಯ ಬೊಮ್ಮಾಯಿ ಬಜೆಟ್ ನಿಂದ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. ಈ ಜಿಲ್ಲೆಗಳ ನಿರೀಕ್ಷೆಗಳಲ್ಲಿ ಈ ಭಾಗದಲ್ಲಿ ವೈದ್ಯಕೀಯ ಕಾಲೇಜು ಆರಂಭ ಹೃದ್ರೋಗ ಸಂಸ್ಥೆಯ ಶಾಖೆ, ಕ್ಯಾನ್ಸರ್ ಚಿಕಿತ್ಸಾ ಘಟಕ, ತೋಟಕಾರಿಕಾ ಕಾಲೇಜು ಆರಂಭ, ದ್ರಾಕ್ಷಿ ಬೆಳೆಗಾರರಿಗೋಸ್ಕರ ಕೋಲ್ಡ್ ಸ್ಟೋರೇಜ್, ವೈನ್ ಪಾರ್ಕ್ ಸೌಲಭ್ಯದ ಜೊತೆಗೆ ಈ ಬೆಳೆಯ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್, ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಿಸುವುದು, ಕೃಷ್ಣಾ ರಾಷ್ಟ್ರೀಯ ಯೋಜನೆ ಘೋಷಣೆ, ಪುನರ್ವಸತಿ-ಪುನರ್ನಿರ್ಮಾಣಕ್ಕೆ ಅನುದಾನ ಇತ್ಯಾದಿಗಳು ಶಾಮೀಲಾಗಿವೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.