ವಿಶ್ವಾಸಮತ ಯಾಚನೆ: ಮೈತ್ರಿ ಸರ್ಕಾರದ ಭವಿಷ್ಯ ಇಂದು ನಿರ್ಧಾರ!

ರಾಜ್ಯದಲ್ಲಿ ಸೃಷ್ಟಿಯಾಗಿರುವ ರಾಜಕೀಯ ಬಿಕ್ಕಟ್ಟಿಗೆ ಬಹುತೇಕ ಇಂದು ತೆರೆ ಬೀಳಲಿದೆ.

Last Updated : Jul 18, 2019, 08:27 AM IST
ವಿಶ್ವಾಸಮತ ಯಾಚನೆ: ಮೈತ್ರಿ ಸರ್ಕಾರದ ಭವಿಷ್ಯ ಇಂದು ನಿರ್ಧಾರ! title=

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ವಿಧಾನಸಭೆಯಲ್ಲಿಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡಲಿದ್ದು, ಮೈತ್ರಿ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ.

ಇಂದು ಬೆಳಿಗ್ಗೆ 11 ಗಂಟೆಗೆ ವಿಶ್ವಾಸಮತ ಯಾಚನೆ ನಡೆಯಲಿದ್ದು, ಮೈತ್ರಿ ಸರ್ಕಾರ ಉಳಿಯುತ್ತದೆಯೋ? ಉರುಳುತ್ತದೆಯೋ? ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ 15 ಅತೃಪ್ತ ಶಾಕರು ರಾಜೀನಾಮೆ ನೀಡಿದ್ದಾರೆ. ಮೈತ್ರಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದ ಇಬ್ಬರು ಪಕ್ಷೇತರ ಶಾಸಕರು ತಮ್ಮ ಬೆಂಬಲ ವಾಪಸ್ ಪಡೆದಿದ್ದಾರೆ. 

ಕಾಲಮಿತಿಯೊಳಗೆ 15 ಶಾಸಕರ ರಾಜೀನಾಮೆ ಸ್ವೀಕರಿಸಬೇಕು ಮತ್ತು ರಾಜೀನಾಮೆ ನೀಡಿರುವ ಶಾಸಕರು ಸದನಕ್ಕೆ ಹಾಜರಾಗಲೇಬೇಕೆಂದು ಕಡ್ಡಾಯ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಬುಧವಾರ ನೀಡಿದ ಮಧ್ಯಂತರ ಆದೇಶದಲ್ಲಿ ಹೇಳಿದೆ. ಸುಪ್ರೀಂ ತೀರ್ಪಿನ ಬಳಿಕ ಪ್ರತಿಕ್ರಿಯಿಸಿದ್ದ ಬಂಡಾಯ ಶಾಸಕರು ಇಂದಿನ(ಗುರುವಾರ) ಕಲಾಪಕ್ಕೆ ಯಾವುದೇ ಕಾರಣಕ್ಕೂ ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ.  ಒಂದು ವೇಳೆ ಈ 15 ಅತೃಪ್ತ ಶಾಸಕರು ಕಲಾಪಕ್ಕೆ ಗೈರಾದರೆ ವಿಶ್ವಾಸ ಮತದಲ್ಲಿ ದೋಸ್ತಿ ಸರ್ಕಾರ ಪತನವಾಗುವುದು ನಿಶ್ಚಿತವಾಗಲಿದೆ. 

ಏತನ್ಮಧ್ಯೆ, ಬಿಟಿಎಂ ವಿಧಾನಸಭಾ ಕ್ಷೇತ್ರದ ಶಾಸಕ ರಾಮಲಿಂಗರೆಡ್ಡಿ ಮನಸ್ಸು ಬದಲಿಸಿದ್ದು, ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಹಿಂಪಡೆದು, ವಿಶ್ವಾಸಮತದ ಪರವಾಗಿ ಮತ ಚಲಾಯಿಸುತ್ತೇನೆ ಎಂದು ಹೇಳಿದ್ದಾರೆ. ಇದರಿಂದ ಮೈತ್ರಿ ಸರ್ಕಾರಕ್ಕೆ ಕೊಂಚ ಬಲ ಬಂದಂತಾಗಿದ್ದು ಮೈತ್ರಿ ಸರ್ಕಾರಕ್ಕೆ 103 ಮತಗಳಾಗುತ್ತವೆ. ಪಕ್ಷೇತರರು ಅಥವಾ ರಿವರ್ಸ್ ಆಪರೇಷನ್ ಮೂಲಕ ಒಂದಿಬ್ಬರನ್ನು ಸೆಳೆದರೆ ಮೈತ್ರಿ ಸದಸ್ಯ ಬಲ 105ಕ್ಕೆ ಏರಲಿದ್ದು, ಟೈ ಆಗಲಿದೆ. ಆಗ ಸಭಾಪತಿಯ ಮತ ನಿರ್ಣಾಯಕವಾಗಿರುತ್ತದೆ.

ಒಟ್ಟಿನಲ್ಲಿ ರಾಜ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕ್ಲೈಮಾಕ್ಸ್ ಹಂತ ತಲುಪಿದ್ದು, ಯಾರ ಕೈ ಮೇಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
 

Trending News