ಬಿಬಿಎಂಪಿ ಮೇಯರ್ ಚುನಾವಣೆ: ದೊಸ್ತಿಗಳಿಗೆ ಒಲಿದ 'ಮೇಯರ್-ಉಪಮೇಯರ್' ಪಟ್ಟ

ಕಾಂಗ್ರೆಸ್ ಅಭ್ಯರ್ಥಿ ಗಂಗಾಂಬಿಕೆ ಮಲ್ಲಿಕಾರ್ಜುನ 52ನೇ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

Last Updated : Sep 28, 2018, 12:55 PM IST
ಬಿಬಿಎಂಪಿ ಮೇಯರ್ ಚುನಾವಣೆ: ದೊಸ್ತಿಗಳಿಗೆ ಒಲಿದ 'ಮೇಯರ್-ಉಪಮೇಯರ್' ಪಟ್ಟ title=

ಬೆಂಗಳೂರು: ಪ್ರತಿಷ್ಠಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮೇಯರ್, ಉಪಮೇಯರ್ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ದೊಸ್ತಿಗಳಿಗೆ ಮೇಯರ್-ಉಪಮೇಯರ್' ಪಟ್ಟ ಒಲಿದಿದೆ. ಕಾಂಗ್ರೆಸ್ ಅಭ್ಯರ್ಥಿ ಗಂಗಾಂಬಿಕೆ ಮಲ್ಲಿಕಾರ್ಜುನ ಬಿಬಿಎಂಪಿಯ 52ನೇ ಮೇಯರ್ ಆಗಿ ಆಯ್ಕೆಯಾದರೆ, ಜೆಡಿಎಸ್ ಅಭ್ಯರ್ಥಿ ರಮೀಳಾ ಉಮಾಶಂಕರ್  ಉಪಮೇಯರ್ ಆಗಿ  ಆಯ್ಕೆಯಾಗಿದ್ದಾರೆ.

ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಗಂಗಾಂಬಿಕೆ ಹಾಗೂ ಬಿಜೆಪಿಯಿಂದ ಶೋಭಾ ಅವರು ನಾಮಪತ್ರ ಸಲ್ಲಿಸಿದ್ದರು. ಉಪಮೇಯರ್ ಸ್ಥಾನಕ್ಕೆ ಜೆಡಿಎಸ್‌ನ ರಮೀಳಾ ಉಮಾಶಂಕರ್ ಹಾಗೂ ಬಿಜೆಪಿಯಿಂದ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ಸದಸ್ಯೆ ಪ್ರತಿಭಾ ಧನರಾಜ್ ನಾಮಪತ್ರ ಸಲ್ಲಿಸಿದ್ದರು.

ಬಿಬಿಎಂಪಿ ವೆಬ್​ಸೈಟ್​ನಲ್ಲಿ ನೇರಪ್ರಸಾರ:
ಮೇಯರ್ ಆಯ್ಕೆಗೆ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಇಂದು ನಡೆದ ಮತದಾನ ಪ್ರಕ್ರಿಯೆಯನ್ನು ಸಾರ್ವಜನಿಕರು ಮನೆಯಲ್ಲೇ ಕುಳಿತು ವೀಕ್ಷಿಸಲು, ಈ ಇಡೀ ಪ್ರಕ್ರಿಯೆಯನ್ನು ಬಿಬಿಎಂಪಿ ವೆಬ್​ಸೈಟ್​ನಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಪ್ರಸಾರ ಮಾಡಲು ಪಾಲಿಕೆ ಕ್ರಮ ವಹಿಸಿತ್ತು.

ಕಾಂಗ್ರೆಸ್ ಮೇಯರ್ ಅಭ್ಯರ್ಥಿ ಆಯ್ಕೆಗಾಗಿ ಹಲವು ಕಸರತ್ತು ನಡೆಸಿತ್ತು. ಜಯನಗರ ವಾರ್ಡ್​ನ ಗಂಗಾಂಬಿಕೆ ಮತ್ತು ಶಾಂತಿನಗರ ವಾರ್ಡ್​ನ ಸೌಮ್ಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಗಂಗಾಂಬಿಕೆ ಪರವಾಗಿ ಪ್ರಭಾವಿ ಶಾಸಕ ರಾಮಲಿಂಗಾರೆಡ್ಡಿ ಮತ್ತು ಸೌಮ್ಯಾ ಪರ ಶಾಸಕ ಹ್ಯಾರಿಸ್ ಲಾಬಿ ನಡೆಸಿದ್ದರು. ಇದರಿಂದಾಗಿ ಮೇಯರ್ ಅಭ್ಯರ್ಥಿ ಆಯ್ಕೆಯೇ ಕಗ್ಗಂಟಾಗಿ ಪರಿಣಮಿಸಿತ್ತು.

ಗುರುವಾರ ಬೆಳಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮನೆಯಲ್ಲಿ ಸಭೆ ನಡೆಸಿದ ಕಾಂಗ್ರೆಸ್ ಮುಖಂಡರು, ಮೇಯರ್ ಅಭ್ಯರ್ಥಿ ಆಯ್ಕೆಗೆ ಕಸರತ್ತು ನಡೆಸಿದರು. ಅಲ್ಲೂ ಅಭ್ಯರ್ಥಿ ಆಯ್ಕೆ ಕುರಿತು ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ ಮತ್ತು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೋಟೆಲೊಂದರಲ್ಲಿ ಸಭೆ ನಡೆಸಿದರು. ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಹೊಣೆಯನ್ನು ದಿನೇಶ್ ಹಾಗೂ ರಾಮಲಿಂಗಾ ರೆಡ್ಡಿ ಅವರ ಹೆಗಲಿಗೆ ಹೊರಿಸಲಾಗಿತ್ತು. ನಂತರ ಅಂತಿಮವಾಗಿ ಗಂಗಾಂಬಿಕೆ ಮಲ್ಲಿಕಾರ್ಜುನ ಅವರನ್ನು ಮೇಯರ್ ಅಭ್ಯ್ರಥಿಯಾಗಿ ಆಯ್ಕೆ ಮಾಡಲಾಗಿತ್ತು.

 

Trending News