ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಶಾಸಕ ಹಾಗೂ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ನಡುವಿನ ವಾಕ್ಸಮರ ಮುಂದುವರೆದಿದೆ. ಒಂದು ಕಾಲದಲ್ಲಿ ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಅವರೇ ಕಾಣುತ್ತಾರೆ ಎನ್ನುತ್ತಿದ್ದ ಎಂಟಿಬಿ ನಾಗರಾಜ್ ಇತ್ತೀಚಿಗೆ ಸಿದ್ದರಾಮಯ್ಯ ದ್ರೋಹಿ, ಅವರು ಕುರುಬ ಸಮುದಾಯಕ್ಕೆ ದ್ರೋಹ ಮಾಡಿದ್ದಾರೆ ಎದು ಹರಿಹಾಯ್ದಿದ್ದರು.
ಉಪಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಲೆಕ್ಕಕ್ಕಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಹೊಸಕೋಟೆಯಲ್ಲಿಂದು ಪ್ರತಿಕ್ರಿಯಿಸಿರುವ ಎಂಟಿಬಿ, ಮಾಜಿ ಸಿಎಂ ಸಿದ್ದರಾಮಯ್ಯ ಉಪಚುನಾವಣೆಯಲ್ಲಿ ನಾನು ಲೆಕ್ಕಕ್ಕಿಲ್ಲ ಎಂದಿದ್ದಾರೆ. ಉಪಚುನಾವಣೆಯ ಫಲಿತಾಂಶ ಹೊರಬಂದ ಬಳಿಕ ಯಾರು ಲೆಕ್ಕಕ್ಕಿಲ್ಲ, ಮೂರನೇ ಸ್ಥಾನಕ್ಕೆ ಹೋಗುವವರು ಯಾರೆಂದು ನೋಡೋಣ ಎನ್ನುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಕ್ಷೇತ್ರದ ಅಭಿವೃದ್ಧಿ ಹಾಗೂ ಸ್ವಾಭಿಮಾನಕ್ಕಾಗಿ ರಾಜೀನಾಮೆ ನೀಡಿ ಚುನಾವಣೆ ಎದುರಿಸುತ್ತಿದ್ದೇನೆ ಎಂದು ಹೇಳಿದ ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್, ಜನ ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗಮನಾರ್ಹವಾಗಿ ಈ ಮೊದಲು ತಮ್ಮ ಆಪ್ತ ವಲಯದಲ್ಲೇ ಗುರುತಿಸಿಕೊಂಡಿದ್ದ ಎಂಟಿಬಿ ನಾಗರಾಜ್ ಅವರನ್ನು ಉಪಚುನಾವಣೆಯಲ್ಲಿ ಸೋಲಿಸಲು ಪಣತೊಟ್ಟಿರುವ ಸಿದ್ದರಾಮಯ್ಯ, ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಶಿಷ್ಯ ಶಾಸಕ ಬೈರತಿ ಸುರೇಶ್ ಪತ್ನಿ ಪದ್ಮಾವತಿ ಅವರನ್ನು ಕಣಕ್ಕಿಳಿಸಿದ್ದಾರೆ. ಇದರಿಂದಾಗಿ ಅಕ್ರೋಶ ವ್ಯಕ್ತಪಡಿಸಿದ್ದ ಎಂಟಿಬಿ ನಾಗರಾಜ್, ಸಿದ್ದರಾಮಯ್ಯ ಅವರನ್ನ 30 ವರ್ಷಗಳಿಂದ ಬಲ್ಲೆ, ಈ ಚುನಾವಣೆಯಲ್ಲಿ ಅವರ ಬಂಡವಾಳ ಬಿಚ್ಚುತ್ತೇನೆ ಎಂದು ಕಿಡಿಕಾರಿದ್ದರು.