ಬೆಂಗಳೂರು : ಇಂದು ಸಂಜೆ 5 ಗಂಟೆಗೆ ಬ್ರೇಕಿಂಗ್ ನ್ಯೂಸ್ ಕೊಡುವುದಾಗಿ ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಾಂತ್ರಿಕ ದೋಷಗಳಿಂದಾಗಿ ಬಹಳ ಸಮಯದ ಬಳಿಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಎತ್ತಿಹಿಡಿಯುವ ವೀಡಿಯೋವನ್ನು ಫೇಸ್ಬುಕ್'ನಲ್ಲಿ ಅಪ್ಲೋಡ್ ಮಾಡಿದ್ದಾರೆ.
44 ನಿಮಿಷ ತಡವಾಗಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿರುವ ಈ ವಿಡಿಯೋದಲ್ಲಿ ನ್ಯೂಸ್ ಚಾನೆಲ್'ನಲ್ಲಿ ಸುದ್ದಿ ಬಿತ್ತರವಾಗುವ ರೀತಿಯಲ್ಲಿಯೇ ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಅಲ್ಲದೇ, ಬಿಜೆಪಿ ಸರ್ಕಾರದ ಅವಧಿ ಹಾಗೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಾದ ಅಭಿವೃದ್ಧಿಯ ಅಂಕಿ ಅಂಶಗಳನ್ನು ಗ್ರಾಫಿಕ್ಸ್ ಮೂಲಕ ತೋರಿಸಿದ್ದಾರೆ. ಆದರೆ ಪ್ರತಿ ಬಾರಿ ಪಕ್ಷದ ಸಮಾವೇಶಗಳಲ್ಲಿ ಕಾಂಗ್ರೆಸ್ ವಿರುದ್ಧ ಮಾಡಿದ್ದ ಆರೋಪಗಳನ್ನೇ ವೀಡಿಯೋ ಮೂಲಕ ಗ್ರಾಫಿಕ್ ತಂತ್ರದೊಂದಿಗೆ ಬಿಡುಗಡೆ ಮಾಡಲಾಗಿದೆ. ಜೊತೆಗೆ ಅಂಕಿ ಅಂಶಗಳ ವಿವರಣೆ ಪೂರ್ಣ ಇಂಗ್ಲೀಷ್ ನಲ್ಲಿದೆ. ಅದನ್ನು ಹೊರತುಪಡಿಸಿ ಎಲ್ಲರೂ ಅಂದುಕೊಂಡಂತೆ ಬ್ರೇಕಿಂಗ್ ನ್ಯೂಸ್ ಅಂತಹದ್ದು ಇದರಲ್ಲಿ ಏನೂ ಕಾಣಲಿಲ್ಲ.
ಬರೀ ಓಳು ಎಂದ ಕಾಂಗ್ರೆಸ್
ಯಡಿಯೂರಪ್ಪ ಅವರ ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಕಾಂಗ್ರೆಸ್ ಯಡಿಯೂರಪ್ಪ ಅವರನ್ನು ವಚನಭ್ರಷ್ಟ ಎಂದು ಕರೆದಿದೆ. ಯಡಿಯೂರಪ್ಪ ಅವರು ಹೇಳಿರುವ ಮಾತನ್ನೇ ಸರಿಯಾದ ಸಮಯಕ್ಕೆ ನಡೆಸಲಾಗದವರು, ಜನರ ಮಾತು ಹಾಗೂ ನಿರೀಕ್ಷೆಗಳನ್ನು ಹೇಗೆ ನಡೆಸಿಕೊಡುವವರು?’ ಎಂದು ತನ್ನ ಟ್ವೀಟ್'ನಲ್ಲಿ ಪ್ರಶ್ನಿಸಿದೆ. ಅಷ್ಟೇ ಅಲ್ಲ, ಇದರ ಜೊತೆಗೆ 'ಬರೀ ಓಳು ಬಿಜೆಪಿ' ಅಂತಾ ಹ್ಯಾಶ್‌ಟ್ಯಾಗ್ ಕೂಡ ಹಾಕಿದೆ.
ವಚನಭ್ರಷ್ಟ ಯಡಿಯೂರಪ್ಪ!
ಅವರು ಹೇಳಿರುವ ಮಾತನ್ನೇ ಸರಿಯಾದ ಸಮಯಕ್ಕೆ ನಡೆಸಲಾಗದವರು, ಜನರ ಮಾತು ಹಾಗೂ ನಿರೀಕ್ಷೆಗಳನ್ನು ಹೇಗೆ ನಡೆಸಿಕೊಡುವವರು?!#BariOluBJP https://t.co/mictaefbWM
— Karnataka Congress (@INCKarnataka) March 16, 2018
ಬ್ರೇಕಿಂಗ್ ನ್ಯೂಸ್'ಗಾಗಿ ಕಾಯುತ್ತಿದ್ದ ಶಾಸಕರು
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುರುವಾರ ಸಂಜೆ ತಮ್ಮ ಟ್ವಿಟರ್ ಖಾತೆಯಲ್ಲಿ ಬ್ರೇಕಿಂಗ್ ನ್ಯೂಸ್ ಕೊಡುವುದಾಗಿ ಹೇಳಿಕೊಂಡಿದ್ದರು. ಈ ವಿಚಾರ ರಾಜ್ಯದ ಜನತೆಗಷ್ಟೇ ಅಲ್ಲ, ಎಲ್ಲಾ ಪಕ್ಷಗಳ ನಾಯಕರಲ್ಲಿ, ಕಾರ್ಯಕರ್ತರಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಆ ಬ್ರೇಕಿಂಗ್ ನ್ಯೂಸ್ ಏನಿರಬಹುದು ಎಂದು ತಿಳಿಯಲು ಎಲ್ಲರೂ ಕಾದು ಕುಳಿತಿದ್ದರು. ಆದರೆ ತಾಂತ್ರಿಕ ದೋಷದಿಂದಾಗಿ ಯಡಿಯೂರಪ್ಪ ಸಿಡಿಸಬೇಕೆಂದಿದ್ದ ಬಾಂಬ್ ಟುಸ್ ಆಗಿ ಪೇಚಿಗೆ ಸಿಲುಕುವಂತೆ ಮಾಡಿತು.