ಬೆಂಗಳೂರು: ರಾಜ್ಯದಲಿ ಚಳಿಗಾಲದ ಅಧಿವೇಶನ ಮತ್ತು ಲೋಕಸಭೆ ಚುನಾವಣೆಗೆ ಸಕಲ ಸಿದ್ಧತೆಯಲ್ಲಿ ತೊಡಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಚಾರದಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಆರೋಗ್ಯ ಸುಧಾರಿಸಿಕೊಳ್ಳುವ ಉದ್ದೇಶದಿಂದ ಕೇರಳದಲ್ಲಿ 8 ದಿನಗಳ ಕಾಲ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ.
ರಾಜ್ಯ ಪ್ರವಾಸ ಹಾಗೂ ಅಧಿವೇಶನಕ್ಕೂ ಮುನ್ನ ಸದೃಢ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ ಪಡೆಯಲು ಕೇರಳಕ್ಕೆ ಬಿಎಸ್ ವೈ ಹೋಗಲಿದ್ದು, ಅಲ್ಲಿ 8 ದಿನಗಳ ಕಾಲ ಚಿಕಿತ್ಸೆ ಪಡೆದು, ಡಿಸೆಂಬರ್ 8 ರ ಬಳಿಕ ರಾಜ್ಯಕ್ಕೆ ವಾಪಸ್ಸಾಗಲಿದ್ದಾರೆ. 8 ದಿನಗಳ ಕಾಲ ಕೇರಳದ ಪ್ರಾಕೃತಿಕ ಚಿಕಿತ್ಸಾ ಕೇಂದ್ರದಲ್ಲಿ ಬಿಎಸ್ವೈ ವಾಸ್ತವ್ಯ ಹೂಡಲಿದ್ದು, ನಾಳೆ(ಡಿಸೆಂಬರ್ 1) ಕೇರಳಕ್ಕೆ ತೆರಳಲಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲಿನ ಕೆಲವು ದೇವಸ್ಥಾನಗಳಿಗೂ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ, ರಾಜ್ಯದಲ್ಲಿ ಭುಗಿಲೆದ್ದಿರುವ ಬಂಡಾಯ ಶಾಸಕರನ್ನು ಸೆಳೆಯಲು ಯಡಿಯೂರಪ್ಪ ಕೇರಳಕ್ಕೆ ತೆರಳುತ್ತಿದ್ದಾರೆ ಎಂಬ ಮಾತೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಕಾಂಗ್ರೆಸ್ನ ಅತೃಪ್ತ ಶಾಸಕರು ಯಡಿಯೂರಪ್ಪ ಅವರೊಂದಿಗೆ ಸಂಪರ್ಕ ಸಾಧಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.