ನವದೆಹಲಿ: ಇದೇ ಸೋಮವಾರದೊಳಗೆ ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್ 16ರಂದು ಸಂಜೆ 4:30ರಿಂದ ಧನುರ್ಮಾಸ ಆರಂಭವಾಗಲಿದ್ದು, ಬಳಿಕ ಒಂದು ತಿಂಗಳು ಯಾವುದೇ ಒಳ್ಳೆ ಕೆಲಸ ಮಾಡಲಾಗುವುದಿಲ್ಲ. ಹೀಗಾಗಿ ಅಷ್ಟರೊಳಗೆ ಸಂಪುಟ ವಿಸ್ತರಣೆ ಮಾಡುವಂತೆ ನೂತನ ಶಾಸಕರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಒತ್ತಡ ಹೇಳಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಹಿನ್ನೆಲೆಯಲ್ಲಿ ಸೋಮವಾರದೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ. ಇದೇ ಕಾರಣಕ್ಕೆ ಹೈಕಮಾಂಡ್ ನಾಯಕರ ಭೇಟಿಗಾಗಿ ಸಿಎಂ ಸಮಯ ಕೇಳಿದ್ದಾರೆ ಎನ್ನಲಾಗಿದೆ.
ಸಂಪುಟ ವಿಸ್ತರಣೆಗೆ ಸೋಮವಾರವೇ ಡೆಡ್‌ಲೈನ್:
ಒಂದೆಡೆ ಸಂಸತ್ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಹಾಗೂ ಬಿಜೆಪಿ ಅಧ್ಯಕ್ಷರೂ ಆಗಿರುವ ಅಮಿತ್ ಶಾ(Amit Shah) ಅಧಿವೇಶನದಲ್ಲಿ ಬ್ಯುಸಿ ಆಗಿದ್ದಾರೆ. ಇನ್ನೊಂದೆಡೆ ರಾಜ್ಯ ನೂತನ ಶಾಸಕರು ಸಂಪುಟ ವಿಸ್ತರಣೆಗೆ ಸೋಮವಾರದವರೆಗೆ ಡೆಡ್‌ಲೈನ್ ನೀಡಿದ್ದು, ಸೋಮವಾರ ಸಂಪುಟ ವಿಸ್ತರಣೆ ಮಾಡದಿದ್ದರೆ ಒಂದು ತಿಂಗಳವರೆಗೆ ಕಾಯಬೇಕು. ಅಲ್ಲಿಯವರೆಗೆ ಏನಾಗುವುದೋ ಎಂದು ಸಿಎಂ ಬಳಿ ಆತಂಕ ವ್ಯಕ್ತಪಡಿಸಿದ್ದು, ಅಷ್ಟರೊಳಗೆ ತಮ್ಮನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಒತ್ತಡ ಹೇರಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ನಾಯಕರ ಭೇಟಿಗೆ ಸಿಎಂ ಯಡಿಯೂರಪ್ಪ ಸಮಯ ಕೇಳಿದ್ದು, ಒಂದೊಮ್ಮೆ ಹೈಕಮಾಂಡ್ ಸಮಯ ನಿಗದಿಯಾದರೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿ ಹೈಕಮಾಂಡ್ ಒಪ್ಪಿದರೆ ಸೋಮವಾರ ಬೆಳಿಗ್ಗೆಯೇ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಲಿದೆ. ಏತನ್ಮಧ್ಯೆ, ಸೋಮವಾರ ಬೆಂಗಳೂರಿನಲ್ಲೇ ಇರುವಂತೆ ರಾಜ್ಯಪಾಲರಿಗೆ ಮೌಖಿಕವಾಗಿ ಮನವಿ ಮಾಡಲಾಗಿದೆ ಎಂದು ಸಿಎಂ ಆಪ್ತವಲಯದಿಂದ ಮಾಹಿತಿ ಲಭಿಸಿದೆ.
ಸಂಪುಟದಲ್ಲಿ ಸದ್ಯ 16 ಸ್ಥಾನಗಳು ಖಾಲಿ ಇದ್ದು, ಉಪಚುನಾವಣೆಯಲ್ಲಿ ಗೆದ್ದಿರುವ 11 ಮಂದಿ ಸಂಪುಟಕ್ಕೆ ಸೇರ್ಪಡೆಯಾದರೆ 5 ಸ್ಥಾನಗಳು ಮಾತ್ರ ಬಾಕಿ ಉಳಿಯಲಿವೆ. ಖಾಲಿ ಉಳಿಯಲಿರುವ ಸ್ಥಾನಗಳನ್ನು ಮೂಲ ಬಿಜೆಪಿಗರಿಗೆ ನೀಡಲು ಬಿಎಸ್‍ವೈ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಬಿಎಸ್‍ವೈ ಸಂಪುಟದಲ್ಲಿ ಸೇರುವವರ ಪಟ್ಟಿ:
- ರಮೇಶ್ ಜಾರಕಿ ಹೊಳಿ(ಗೋಕಾಕ್)
- ಮಹೇಶ್ ಕುಮಟಳ್ಳಿ (ಅಥಣಿ)
- ಶ್ರೀಮಂತಪಾಟೀಲ್(ಕಾಗವಾಡ)
- ಬಿ.ಸಿ.ಪಾಟೀಲ್(ಹಿರೇಕೆರೂರು)
- ಆನಂದ್‍ಸಿಂಗ್(ವಿಜಯನಗರ)
- ಕೆ.ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್)
- ಭೈರತಿ ಬಸವರಾಜ್(ಕೆ.ಆರ್.ಪುರಂ)
- ಎಸ್.ಟಿ.ಸೋಮಶೇಖರ್ (ಯಶವಂತಪುರ)
- ಕೆ.ಸಿ.ನಾರಾಯಣಗೌಡ (ಕೆ.ಆರ್.ಪೇಟೆ)
- ಶಿವರಾಂ ಹೆಬ್ಬಾರ್(ಯಲ್ಲಾಪುರ)
- ಡಾ.ಕೆ.ಸುಧಾಕರ್(ಚಿಕ್ಕಬಳ್ಳಾಪುರ) ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.