BSY vs Siddu: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆರೋಪಗಳಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಈ ಬಗ್ಗೆ ಸರಣಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯನವರು, ‘ಗೃಹಲಕ್ಷ್ಮಿ ಯೋಜನೆ ನಾಡಿನ ಅರ್ಧದಷ್ಟು ಮಹಿಳೆಯರಿಗೆ ತಲುಪಿಲ್ಲವೆಂಬುದು ಮಹಾ ಸುಳ್ಳು. ಗೃಹಲಕ್ಷ್ಮಿ ಯೋಜನೆಗಾಗಿ ರಾಜ್ಯದ 1.08 ಕೋಟಿ ಮಹಿಳೆಯರು ಆಗಸ್ಟ್‌ ತಿಂಗಳಲ್ಲಿ ಯಶಸ್ವಿಯಾಗಿ ನೊಂದಣಿ ಮಾಡಿಕೊಂಡಿದ್ದರು’ ಎಂದು ಹೇಳಿದ್ದಾರೆ.

Written by - Puttaraj K Alur | Last Updated : Nov 3, 2023, 05:17 PM IST
  • ನಮ್ಮ ಸರ್ಕಾರದ ವಿರುದ್ಧ ಯಡಿಯೂರಪ್ಪ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದುದ್ದು
  • ಗೃಹಲಕ್ಷ್ಮಿ ಯೋಜನೆ ನಾಡಿನ ಅರ್ಧದಷ್ಟು ಮಹಿಳೆಯರಿಗೆ ತಲುಪಿಲ್ಲವೆಂಬುದು ಮಹಾನ್ ಸುಳ್ಳು
  • ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆರೋಪಗಳಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
BSY vs Siddu: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆರೋಪಗಳಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು title=
ಯಡಿಯೂರಪ್ಪಗೆ ಸಿದ್ದರಾಮಯ್ಯ ಗುದ್ದು!

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ನಮ್ಮ ಸರ್ಕಾರದ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದುದ್ದು ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯನವರು, ‘ಗೃಹಲಕ್ಷ್ಮಿ ಯೋಜನೆ ನಾಡಿನ ಅರ್ಧದಷ್ಟು ಮಹಿಳೆಯರಿಗೆ ತಲುಪಿಲ್ಲವೆಂಬುದು ಮಹಾ ಸುಳ್ಳು, ಗೃಹಲಕ್ಷ್ಮಿ ಯೋಜನೆಗಾಗಿ ರಾಜ್ಯದ 1.08 ಕೋಟಿ ಮಹಿಳೆಯರು ಆಗಸ್ಟ್‌ ತಿಂಗಳಲ್ಲಿ ಯಶಸ್ವಿಯಾಗಿ ನೊಂದಣಿ ಮಾಡಿಕೊಂಡಿದ್ದರು’ ಎಂದು ಹೇಳಿದ್ದಾರೆ.

‘ಈ ಪೈಕಿ ಫಲಾನುಭವಿಗಳ ಆಧಾರ್‌ ಸಂಖ್ಯೆ ಬ್ಯಾಂಕ್‌ ಖಾತೆಗೆ ಜೋಡಣೆಯಾಗದಿರುವುದು, ಅರ್ಜಿದಾರರು ಹೆಸರು ಮತ್ತು ವಿಳಾಸದಲ್ಲಿನ ವ್ಯತ್ಯಾಸ ಮುಂತಾದ ಕಾರಣಗಳಿಂದಾಗಿ 9.44 ಲಕ್ಷ ಮಹಿಳೆಯರಿಗೆ ಹಣ ಜಮೆಯಾಗಿರುವುದಿಲ್ಲ. ಮೊದಲ ತಿಂಗಳ ಕಂತಿನ ಹಣ ಶೇ.88ರಷ್ಟು ನೊಂದಣಿಯಾದ ಫಲಾನುಭವಿಗಳ ಖಾತೆಗೆ ಜಮೆ ಆಗಿರುತ್ತದೆ. ಹಣ ಜಮೆ ಆಗದಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ದೋಷ ಸರಿಪಡಿಸುವ ಕಾರ್ಯವನ್ನು ಇಲಾಖೆಯು ಕೈಗೊಂಡಿದ್ದು, ಬರುವ ತಿಂಗಳು ಶೇ.100ರಷ್ಟು ಅರ್ಜಿದಾರ ಯಜಮಾನಿಯರ ಖಾತೆಗೆ ಹಣ ವರ್ಗಾವಣೆ ಮಾಡುವ ಮೂಲಕ ದೇಶದಲ್ಲೇ ಅತಿದೊಡ್ಡ ಮೊತ್ತದ ಮಹಿಳಾ ಸಬಲೀಕರಣ ಯೋಜನೆಯನ್ನು ಯಶಸ್ವಿಯಾಗಿ ಪ್ರತಿ ಮನೆಗೆ ತಲುಪಿಸುತ್ತೇವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಕ್ಷದ ಸೂಚನೆ ಮೀರಿ ಮಾತನಾಡಿದವರಿಗೆ ನೋಟಿಸ್ ನೀಡುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್

‘ವಿದ್ಯುತ್‌ ದರ ಹೆಚ್ಚಳವಾಗಿದೆ ಎಂಬ ಯಡಿಯೂರಪ್ಪರ ಹೇಳಿಕೆ ಹಿಂದಿನ ಬಿಜೆಪಿ ಸರ್ಕಾರವನ್ನೇ ಕುರಿತು ಟೀಕೆ ಮಾಡಿದಂತಿದೆ. ಕೆಇಆರ್‌ಸಿ ಮಾರ್ಚ್‌ ತಿಂಗಳಿನಲ್ಲಿ ದರ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಹಿಂದಿನ ಬಿಜೆಪಿ ಸರ್ಕಾರದ ಮುಂದೆ ಮಂಡಿಸಿತ್ತು, ಈ ಪ್ರಸ್ತಾವನೆಗೆ ಬಿಜೆಪಿ ಸರ್ಕಾರ ಅನುಮತಿ ನೀಡಿದ್ದರಿಂದ ಮೇ 12 ಅಂದರೆ ಚುನಾವಣೆಯ ಫಲಿತಾಂಶ ಬರುವ ಹಿಂದಿನ ದಿನವೇ ಹೊಸ ದರವು ಏಪ್ರಿಲ್‌ 1ರಿಂದ ಪೂರ್ವಾನ್ವಯ ಆಗುವಂತೆ ಕೆಇಆರ್‌ಸಿ ಜಾರಿಗೊಳಿಸಿತು. ಈ ಸಂಬಂಧ ಗಮನಿಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ. ಈ ಹಿಂದೆ ದರ ನಿಗದಿಪಡಿಸಲು 4 ಸ್ಲ್ಯಾಬ್‍ಗಳಿದ್ದವು. ಈಗ ಅದನ್ನು 2 ಸ್ಲ್ಯಾಬ್‍ಗಳಿಗೆ ಇಳಿಕೆ ಮಾಡಲಾಗಿದೆ. 0 ಇಂದ 50 ಯುನಿಟ್‍ವರೆಗೆ 4.15 ರೂ., 50 ರಿಂದ 100 ಯುನಿಟ್‍ವರೆಗೆ 5.60 ರೂ., 100 ರಿಂದ 200 ಯುನಿಟ್‍ವರೆಗೆ 7.15 ರೂ. ಹಾಗೂ 250 ಯುನಿಟ್‍ಗಳಿಗಿಂತ ಹೆಚ್ಚಿನ ಬಳಕೆಗೆ ಯುನಿಟ್‍ಗೆ 8.20 ರೂ. ವಿಧಿಸಲಾಗುತ್ತಿತ್ತು. ಇದನ್ನು ಪರಿಸ್ಕರಿಸಿ ಈಗ ಶೂನ್ಯದಿಂದ 100 ಯುನಿಟ್‍ಗೆ 4.75 ರೂ. ಹಾಗೂ 101ಗಿಂತ ಮೇಲ್ಪಟ್ಟು ಎಷ್ಟೇ ವಿದ್ಯುತ್‌ ಬಳಕೆ ಮಾಡಿದರೂ ಯುನಿಟ್‍ಗೆ 7 ರೂ. ದರ ವಿಧಿಸಲಾಗುತ್ತಿದೆ. ನಮ್ಮ ಸರ್ಕಾರವು ಬಳಕೆದಾರರ ಹಿಂದಿನ 1 ವರ್ಷದ ಸರಾಸರಿ ವಿದ್ಯುತ್‌ ಬಳಕೆ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು, ಅದಕ್ಕೆ ಶೇ.10ರಷ್ಟು ಹೆಚ್ಚುವರಿಯಾಗಿ ಸೇರಿಸಿ ಗರಿಷ್ಟ 200 ಯುನಿಟ್‍ವರೆಗೆ ಉಚಿತ್‌ ವಿದ್ಯುತ್‌ ನೀಡುತ್ತಿರುವುದರಿಂದ ನಿಮ್ಮದೇ ಸರ್ಕಾರ ದರ ಏರಿಕೆ ಮಾಡಿದ್ದರೂ ಆ ಹೊರೆ ನಾಡಿನ 1.58 ಕೋಟಿ ನೊಂದಾಯಿತ ಕುಟುಂಬಗಳನ್ನು ಬಾಧಿಸದಂತೆ ತಡೆದಿದ್ದೇವೆ’ ಎಂದು ತಿಳಿಸಿದ್ದಾರೆ.

‘ಯಡಿಯೂರಪ್ಪನವರು ಬೆಂಗಳೂರು ನಗರದ ಸಬ್‌ ಅರ್ಬನ್‌ ರೈಲು ಯೋಜನೆಗೆ ಕೇಂದ್ರ ಸರ್ಕಾರವು 450 ಕೋಟಿ ರೂ.  ಬಿಡುಗಡೆ ಮಾಡಿದೆ ಎಂದಿದ್ದಾರೆ. ಇದು ಅರ್ಧ ಸತ್ಯ ಮಾತ್ರ. ವಾಸ್ತವ ಬೇರೆ ಇದ್ದು ನಾಡಿಗೆ ಆಗುತ್ತಿರುವ ಅನ್ಯಾಯ ಮುಚ್ಚಿಟ್ಟಿರುವುದು ಯಡಿಯೂರಪ್ಪ ಅವರೇ ಹೊರತು ನಾನಲ್ಲ. 2018-19ರ ಕೇಂದ್ರ ಬಜೆಟ್‌ ಭಾಷಣದಲ್ಲಿ ಅಂದಿನ ವಿತ್ತ ಸಚಿವರಾಗಿದ್ದ ಅರುಣ್‌ ಜೇಟ್ಲಿ ಅವರು 17,000 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಕೇಂದ್ರ ಸರ್ಕಾರವು ಯೋಜನೆ ರೂಪಿಸಲಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ನಮ್ಮ ಮೆಟ್ರೋಗೆ ಬರಲಿವೆ ಚೀನಾ ಮೇಡ್ ಬೋಗಿಗಳು

ಕೇಂದ್ರ ಸರ್ಕಾರದ ಈ ಘೋಷಣೆಯನ್ನು ಬಿಜೆಪಿ ತನ್ನ 2018ರ ಚುನಾವಣಾ ಪ್ರಣಾಳಿಕೆಯಲ್ಲಿ ಕೂಡ ಸೇರಿಸಿಕೊಂಡಿತ್ತು. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ, “ಕೇಂದ್ರ ಸರ್ಕಾರ ಘೋಷಿಸಿದ 17,000 ಕೋಟಿ ರೂ. ಅನುದಾನ ಬಳಸಿಕೊಂಡು ಬೆಂಗಳೂರಿನ ಉಪನಗರ ರೈಲು ಜಾಲವನ್ನು ಪೂರ್ಣಗೊಳಿಸುತ್ತೇವೆ" ಎಂದು ಹೇಳಿತ್ತು. ಇದರರ್ಥ ಕೇಂದ್ರ ಸರ್ಕಾರವು ಸಬ್‌ ಅರ್ಬನ್‌ ರೈಲು ಯೋಜನೆಗೆ ಬಜೆಟ್‍ನಲ್ಲಿ 17,000 ಕೋಟಿ ರೂ. ನಿಗದಿಪಡಿಸಿದೆ ಎಂದು ರಾಜ್ಯ ಬಿಜೆಪಿಯೇ ಒಪ್ಪಿಕೊಂಡಿತ್ತು. ಆದರೆ ಆ ಆರ್ಥಿಕ ವರ್ಷ ಬಿಡಿಗಾಸು ಹಣವನ್ನು ಕೂಡ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರಲಿಲ್ಲ. 2019ರ ಜುಲೈನಲ್ಲಿ ‘ಆಪರೇಷನ್‌ ಕಮಲ’ದ ಮೂಲಕ ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೆ ಬಂದ ಕರ್ನಾಟಕ ಬಿಜೆಪಿ, ಜನರಿಗೆ ದ್ರೋಹ ಬಗೆಯಲು ಮುಂದಾಯಿತು.

ಕೇಂದ್ರ ಸರ್ಕಾರವು ಯೋಜನೆಗೆ ಅನುದಾನ ಕೊಡಲು ಮನಸ್ಸಿಲ್ಲದೆ ಫೆಬ್ರವರಿ 2020ರಲ್ಲಿ ಮಂಡಿಸಿದ 2020-21ರ ಕೇಂದ್ರ ಬಜೆಟ್‌ ನಲ್ಲಿ ಸಬ್ ಅರ್ಬನ್ ರೈಲು ಯೋಜನೆಗೆ ತಾನು ಕೇವಲ 20% ಅನುದಾನ ನೀಡುವುದಾಗಿ, ಮತ್ತೆ 20% ರಾಜ್ಯ ಸರ್ಕಾರ ಹಾಗೂ ಉಳಿದ 60% ಹಣವನ್ನು ರಾಜ್ಯಕ್ಕೆ ಸಾಲ ಕೊಡಿಸುವುದಾಗಿ ಘೋಷಿಸಿತು. ಅಂದಿನ ರಾಜ್ಯ ಬಿಜೆಪಿ ಸರ್ಕಾರ ಇದಕ್ಕೆ ಚಕಾರವೆತ್ತದೆ ಸಮ್ಮತಿಸಿತು. ಈ ಹೊಸ ಬದಲಾವಣೆಯ ನಂತರ 2022-23ರಲ್ಲಿ ಕೇಂದ್ರ ಸರ್ಕಾರ 450 ಕೋಟಿ ರೂ. ಅನುದಾನವನ್ನು ನಿಗದಿ ಮಾಡಿತ್ತು, ಆದರೆ ಕೊಟ್ಟಿದ್ದು 50 ಕೋಟಿ ರೂ. ಮಾತ್ರ. ನಂತರ ಪ್ರಸಕ್ತ ಸಾಲಿನಲ್ಲಿ 1,350 ಕೋಟಿ ರೂ. ನಿಗದಿ ಮಾಡಿ, ಈವರೆಗೆ ಕೇವಲ 450 ಕೋಟಿ ರೂ. ಬಿಡುಗಡೆ ಮಾಡಿದೆ. ಅಂದು ಮೋದಿ ಸರ್ಕಾರದ ಜೊತೆ ಸೇರಿ ನಾಡಿಗೆ ಅನ್ಯಾಯ ಮಾಡಿದ್ದ ಯಡಿಯೂರಪ್ಪ ಅವರೇ ಇಂದು ಸಬ್‌ ಅರ್ಬನ್‌ ರೈಲು ಯೋಜನೆಗೆ ಕಾಂಗ್ರೆಸ್‌ ನಿರಾಸಕ್ತಿ ತೋರುತ್ತಿದೆ ಎಂದು ಆರೋಪ ಮಾಡುತ್ತಿರುವುದು ವಿಪರ್ಯಾಸವಾಗಿದೆ’ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News