ಬೆಂಗಳೂರು: ಕಾಂಗ್ರೆಸ್ ಟ್ರಬಲ್ ಶೂಟರ್, ಮಾಜಿ ಸಚಿವ ಹಾಗೂ ಶಾಸಕ ಡಿ.ಕೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನವದೆಹಲಿಯಲ್ಲಿ ಬಂಧಿಸುತ್ತಿದ್ದಂತೆ, ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ದಾರೆ.
ಮಂಗಳವಾರ ರಾತ್ರಿಯಿಂದಲೇ ಕನಕಪುರ, ರಾಮನಗರ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಬೆಂಗಳೂರಿನ ಆನಂದ ರಾವ್ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಬಂಧನವನ್ನು ಖಂಡಿಸಿ ಪ್ರತಿಭಟನೆ ನಡೆಸಿದ ನೂರಾರು ಕಾಂಗೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಪ್ರತಿಭಟನೆ ವೇಳೆ ರೊಚ್ಚಿಗೆದ್ದ ಕಾರ್ಯಕರರು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Karnataka: Congress workers protest against the arrest of DK Shivakumar by Enforcement Directorate (ED), near the Mahatma Gandhi statue in Bengaluru. pic.twitter.com/24oPHrlwTL
— ANI (@ANI) September 3, 2019
ಮತ್ತೊಂದೆಡೆ, ಬುಧವಾರ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬೆಂಗಳೂರು ನಗರದ ಶಾಂತಿ ನಗರದಲ್ಲಿರುವ ಜಾರಿ ನಿರ್ದೇಶನಾಲಯದ ವಿಭಾಗೀಯ ಕಚೇರಿಗೂ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.