"ಸಂವಿಧಾನಕ್ಕೆ ಕುತ್ತು ಬಂದಿದ್ದು, ಅದನ್ನು ಉಳಿಸಿಕೊಳ್ಳಬೇಕು"

 ಈಗ ಈ ಸಂವಿಧಾನಕ್ಕೆ ಕುತ್ತು ಬಂದಿದ್ದು, ಅದನ್ನು ಉಳಿಸಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಅಭಿಪ್ರಾಯಪಟ್ಟಿದ್ದಾರೆ.

Written by - Zee Kannada News Desk | Last Updated : Dec 16, 2022, 11:43 PM IST
  • ನಾನು ವಿರೋಧ ಪಕ್ಷದ ರಾಜ್ಯದ ಅಧ್ಯಕ್ಷನಾಗಿ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ
  • ನನಗೆ ಜವಾಬ್ದಾರಿಗಳು ಹೆಚ್ಚಾಗಿರುವ ಕಾರಣ ನಾನು ಅಧಿವೇಶನಗಳಲ್ಲಿ ಹೆಚ್ಚಾಗಿ ಮಾತನಾಡಲು ಆಗುತ್ತಿಲ್ಲ
  • ಅಧಿಕಾರದಲ್ಲಿರುವ ಸರ್ಕಾರದ ವಿರುದ್ಧ ಮಾತನಾಡಲು ಹುಡುಕಲು ನಾನು ಎಲ್ಲಿಗೂ ಹೋಗಬೇಕಿಲ್ಲ
"ಸಂವಿಧಾನಕ್ಕೆ ಕುತ್ತು ಬಂದಿದ್ದು, ಅದನ್ನು ಉಳಿಸಿಕೊಳ್ಳಬೇಕು" title=
file photo

ಬೆಂಗಳೂರು: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪ್ರತಿಕಾಂಗ ನಾಲ್ಕು ಆಧಾರ ಸ್ತಂಭಗಳಾಗಿವೆ. ಈ ನಾಲ್ಕು ಸ್ತಂಭಗಳ ಪೈಕಿ ಒಂದು ಕುಸಿದರೂ ಸಂವಿಧಾನ, ಪ್ರಜಾಪ್ರಭುತ್ವಕ್ಕೆ, ನಮ್ಮ ಬದುಕಿಗೆ ತೊಂದರೆಯಾಗುತ್ತದೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ನಾವು ಯಾವುದೇ ಧರ್ಮ ನಂಬಿದ್ದರು ಸಂವಿಧಾನ ಬಿಟ್ಟು ಬದುಕಲು ಸಾಧ್ಯವಿಲ್ಲ. ಈಗ ಈ ಸಂವಿಧಾನಕ್ಕೆ ಕುತ್ತು ಬಂದಿದ್ದು, ಅದನ್ನು ಉಳಿಸಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಅಭಿಪ್ರಾಯಪಟ್ಟಿದ್ದಾರೆ.

ಬದುಕು ಬೇಕೋ ಭಾವನೆಗಳು ಬೇಕೋ ಎಂಬ ವಿಚಾರ ಈಗ ಚರ್ಚೆ ಆಗುತ್ತಿದೆ. ನಾವು ಬದುಕಿನ ಬಗ್ಗೆ ಹೋರಾಟ ಮಾಡಿದರೆ, ನಮ್ಮ ವಿರೋಧ ಪಕ್ಷದವರು ಭಾವನೆ ಬಗ್ಗೆ ಹೋರಾಟ ಮಾಡುತ್ತಿದ್ದಾರೆ. ನಾನು ವಿರೋಧ ಪಕ್ಷದ ರಾಜ್ಯದ ಅಧ್ಯಕ್ಷನಾಗಿ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನನಗೆ ಜವಾಬ್ದಾರಿಗಳು ಹೆಚ್ಚಾಗಿರುವ ಕಾರಣ ನಾನು ಅಧಿವೇಶನಗಳಲ್ಲಿ ಹೆಚ್ಚಾಗಿ ಮಾತನಾಡಲು ಆಗುತ್ತಿಲ್ಲ.ಅಧಿಕಾರದಲ್ಲಿರುವ ಸರ್ಕಾರದ ವಿರುದ್ಧ ಮಾತನಾಡಲು ಹುಡುಕಲು ನಾನು ಎಲ್ಲಿಗೂ ಹೋಗಬೇಕಿಲ್ಲ. ಮಾಧ್ಯಮಗಳು ಅದರಲ್ಲೂ ಮುದ್ರಣ ಮಾಧ್ಯಮ ಕಾಂಗ್ರೆಸ್ ಗಿಂತ ಹೆಚ್ಚಾಗಿ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದೆ. ಸರ್ಕಾರ, ಸರ್ಕಾರಿ ಅಧಿಕಾರಿಗಳ ತಪ್ಪು, ಅಕ್ರಮ, ಭ್ರಷ್ಟಾಚಾರಗಳನ್ನು ತಮ್ಮದೇ ಆದ ತನಿಖೆ ಮೂಲಕ ಬಹಿರಂಗಪಡಿಸುತ್ತಿದೆ.

ಇದನ್ನೂ ಓದಿ : ಈ ಆಹಾರಗಳನ್ನು ಸೇವಿಸಿದರೆ ಹೆಚ್ಚಾಗುವುದು ಕಿಡ್ನಿ ಸ್ಟೋನ್ ಅಪಾಯ

ಕೋವಿಡ್ ಸಮಯದಲ್ಲಿ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಹಾಗೂ ಎಲ್ಲ ನಾಯಕರು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರು. ಚುನಾವಣೆಯಲ್ಲಿ ನಾವು ಸೋತ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಈ ಸಮಯದಲ್ಲಿ ನನ್ನ ಮೇಲೆ ನಂಬಿಕೆ ಇಟ್ಟು ಇಡೀ ಪಕ್ಷ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಒಗ್ಗಟ್ಟಿನಿಂದ ನೀಡಿದ್ದಾರೆ.ಈ ಜವಾಬ್ದಾರಿ ತೆಗೆದುಕೊಂಡ ನಂತರ ಸರಿಯಾಗಿ ಒಂದು ದಿನವೂ ನಿದ್ದೆ ಮಾಡದೇ, ಬೀದಿಗಿಳಿದು ಹೋರಾಟ ಮಾಡಿದ್ದೇವೆ. ನಾನು ಬಹಳ ಸಾಧನೆ ಮಾಡಿದ್ದೇನೆ ಎಂದು ಹೇಳುವುದಿಲ್ಲ ನನಗಿದ್ದ ವಿಚಾರ, ಗುರಿ, ಶಕ್ತಿಯಲ್ಲಿ ಕೇವಲ 25-30ರಷ್ಟು ಕೆಲಸ ಮಾಡಿದ್ದೇನೆ ಎಂದು ಹೇಳುತ್ತೇನೆ.

ಇಷ್ಟೆಲ್ಲಾ ಆದರೂ ಮಾಧ್ಯಮಗಳು ಮುಖ್ಯಮಂತ್ರಿ ವಿಚಾರಕ್ಕೆ ಕಿತ್ತಾಟದ ಬಗ್ಗೆ ಹೆಚ್ಚು ಚರ್ಚೆ ಮಾಡಲಾಗುತ್ತಿದೆ. ಮುಖ್ಯಮಂತ್ರಿ ವಿಚಾರವಾಗಿ ನಮ್ಮಲ್ಲಿ ಕಿತ್ತಾಟದ ಬಗ್ಗೆ ಒಂದು ಘಟನೆಯೂ ಸಿಗದಿದ್ದರೂ  ಈ ವಿಚಾರ ಚರ್ಚೆಗೆ ಅಕಾಶ ಮಾಡಿಕೊಟ್ಟಿದ್ದೀರಿ. ಆಡಳಿತ ಪಕ್ಷದಲ್ಲಿನ ಆಂತರಿಕ ಭಿನ್ನಮತ ಹೆಚ್ಚು ಚರ್ಚೆ ಆಗುತ್ತಿಲ್ಲ.ಈ ಬಗ್ಗೆ ಬಿಜೆಪಿಯವರು ಮಾತನಾಡುತ್ತಿದ್ದಾರೆ. ಬಿಜೆಪಿಯವರು ತಮ್ಮ ಮುಖ್ಯಮಂತ್ರಿ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಮುಖ್ಯಮಂತ್ರಿ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಅಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ.

ಇಂದು ಏನೇ ಚರ್ಚೆ ಮಾಡಿದರೂ ಒಂದು ಪ್ರಶ್ನೆ ಉಳಿಯುತ್ತದೆ. ಅದು ಪ್ರಜಾಪ್ರಭುತ್ವ ಉಳಿಯಬೇಕು. ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ಪ್ರಜಾಪ್ರಭುತ್ವ ಉಳಿಯಬೇಕು. ಸ್ಥಳೀಯ ಮಟ್ಟದಲ್ಲಿ ನಾಯಕರನ್ನು ತಯಾರು ಮಾಡುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ರಾಜೀವ್ ಗಾಂಧಿ ಅವರು ಅವರು ತಂದರು. ಇಡೀ ದೇಶ ಹಾಗೂ ಸಂವಿಧಾನ ಅದಕ್ಕೆ ಒಪ್ಪಿದೆ. ಆದರೆ ಬಿಜೆಪಿ ಡಬಲ್ ಇಂಜಿನ್, ಜನಪರ, ಜನಹಿತ, ಭಾವನೆ ಹಂಚಿಕೊಳ್ಳುವ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿ ಜನರ ಮುಂದೆ ಹೋಗಲು ಯಾಕೆ ಹೆದರುತ್ತಿದ್ದಾರೆ ಎಂಬುದು ಪ್ರಮುಖ ಪ್ರಶ್ನೆ. 

ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಪಾಲಿಕೆ ಚುನಾವಣೆ ಮಾಡಲು ಸರ್ಕಾರಕ್ಕೆ ಭಯ ಯಾಕೆ? ಅಂದರೆ ರಾಜ್ಯದ ಮತದಾರರ ಮೇಲೆ ನಿಮಗೆ ನಂಬಿಕೆ ಇಲ್ಲವೇ? ಇಚ್ಚೀತೆಗೆ ನಡೆದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಚುನಾವಣೆ ಪೈಕಿ 11 ಕಾಂಗ್ರೆಸ್, 11 ಬಿಜೆಪಿ ಗೆಲ್ಲುತ್ತದೆ. ಪದವಿಧರರು ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮಂಡ್ಯ ಹಾಗೂ ಬೆಳಗಾವಿ ಮತದಾರರು ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಇನ್ನು ಉಪಚುನಾವಣೆಯಲ್ಲಿ ಅವರೊಂದು ನಾವೊಂದು ಗೆಲ್ಲುತ್ತಿದ್ದೇವೆ. ಉಪಚುನಾವಣೆಯಲ್ಲಿ ಅಧಿಕಾರದಲ್ಲಿರುವವರಿಗೆ ಶಕ್ತಿ ಹೆಚ್ಚು, ಅದರೂ ನಾವು ಸಮಾನ ಸಾಧನೆ ಮಾಡಿದ್ದೇವೆ.

ಜಿಲ್ಲಾ ಹಾಗೂ ಪಂಚಾಯ್ತಿ ಚುನಾವಣೆ ಪಕ್ಷದ ಚಿಹ್ನೆ ಮೇಲೆ ನಡೆಯುತ್ತಿದ್ದು, ಈ ಚುನಾವಣೆ ಯಾಕೆ ನಡೆಸುತ್ತಿಲ್ಲ ಎಂದು ನ್ಯಾಯಾಲಯ ಮೊರೆ ಹೋಗಿದ್ದೆವು. ಈಗ ನ್ಯಾಯಾಲಯ ಸರ್ಕಾರಕ್ಕೆ 5 ಲಕ್ಷ ದಂಡ  ವಿಧಿಸಿದೆ. ಹೀಗಾಗಿ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ ಹಿನ್ನೆಲೆಯಲ್ಲಿ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು.

ಕಳೆದ ಮೂರು ವರ್ಷಗಳಿಂದ ಈ ಸರ್ಕಾರಕ್ಕೆ ಜನರ ಹೊಟ್ಟೆ ತುಂಬಿಸಲು, ಬದುಕು ಕಟ್ಟಿಕೊಳ್ಳಲು ಒಂದು ಕಾರ್ಯಕ್ರಮ ನೀಡಲು ಸಾಧ್ಯವಾಗಿಲ್ಲ. ಇವರ ಯೋಜನೆ ಕೇವಲ ಕಾಗದದ ಮೇಲೆ ಮಾತ್ರ ಇದೆಯೇ ಹೊರತು ಜನರನ್ನು ತಲುಪಿಲ್ಲ.ದೇಶದಲ್ಲೇ ಅತ್ಯಂತ ಉತ್ತಮ ಆಡಳಿತ ರಾಜ್ಯ ಕರ್ನಾಟಕವಾಗಿತ್ತು. ಕಳೆದ ಮೂರು ವರ್ಷಗಳಿಂದ ಈ ಸರ್ಕಾರಕ್ಕೆ ಉದ್ಯೋಗ ಸೃಷ್ಟಿಸಲು ಸಾಧ್ಯವಾಗಿಲ್ಲ. ಈ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ನಮ್ಮ ಕಾಲಾವಧಿಯಲ್ಲಿ ಸಾಕಷ್ಟು ನೇಮಕಾತಿ ಮಾಡಿದ್ದೇವೆ. ನಮ್ಮ ಕಾಲದಲ್ಲಿ ಒಂದು ನೇಮಕಾತಿ ಅಕ್ರಮ ನಡೆದಿಲ್ಲ. ಅಕ್ರಮ ನಡೆದಿರುವುದನ್ನು ಸಾಬೀತುಮಾಡಲು ನಿಮ್ಮಿಂದ ಸಾಧ್ಯವಾಗಿಲ್ಲ. ಆದರೆ ನಿಮ್ಮ ಅಧಿಕಾರದಲ್ಲಿಪ್ರತಿ ಇಲಾಖೆಯಲ್ಲಿ ಹುದ್ದೆ ನೇಮಕಾತಿ ಮಾಡುವಾಗ ನೇಮಕಾತಿ ಅಕ್ರಮ ನಡೆದಿದ್ದು, ಎಡಿಜಿಪಿ ಮಟ್ಟದ ಅಧಿಕಾರಿಗಳಿಂದ ಎಳ್ಲ ಹಂತದ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿ ಬಂಧನವಾಗಿದ್ದಾರೆ.ಉತ್ತರ ಪತ್ರಿಕೆ ತಿದ್ದಿ ಅಖ್ರಮ ಮಾಡಿರುವುದು ಐಟಿ ಕ್ಯಾಪಿಟಲ್ ನಲ್ಲಿ ನಡೆದಿದೆ. ಇದಕ್ಕಿಂತ ದೊಡ್ಡ ಅಪಮಾನ ಬೇರೊಂದಿಲ್ಲ.

ಇದನ್ನೂ ಓದಿ : 5 ಗಂಟೆಗಳಿಗಿಂತ ಕಡಿಮೆ ನಿದ್ರಿಸುವುದರಿಂದ ಸಾವು ಬರಬಹುದು..!

ಇನ್ನು ಲಂಚ ಹಾಗೂ ಮಂಚದ ವಿಚಾರದಲ್ಲಿ ಇಬ್ಬರು ಸಚಿವರ ತಲೆತಂಡವಾಗಿದೆ. ಇವರು ರಾಜೀನಾಮೆ ನೀಡುವ ಮುನ್ನ ಅವರಿಗೆ ಕ್ಲೀನ್ ಚಿಟ್ ನೀಡುತ್ತಾರೆ. ಅವರ ಬೆಂಬಲವಾಗಿ ನೀಡುವಾಗ ಅಧಿಕಾರಿಗಳಿಗೆ ಬಿ ರಿಪೋರ್ಟ್ ನೀಡುವಂತೆ ಸೂಚಿಸುತ್ತಾರೆ. ಅವರ ಸಾಧನೆಗೆ ನಾವು ಅಭಿನಂದನೆ ಸಲ್ಲಿಸಬೇಕು. 

ಇನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನಮಂತ್ರಿಗಳಿಗೆ ದೂರು ನೀಡಿದರು, ಕೆಲವರು ಭ್ರಷ್ಟಾಚಾರ ಕಿರುಕುಳ ತಾಳಲಾರದೆ ಪ್ರಾಣ ಬಿಟ್ಟಿದ್ದಾರೆ. ಆಮೂಲಕ ದೇಶದಲ್ಲೇ ಭ್ರಷ್ಟಾಚಾರದ ರಾಜಧಾನಿ ಎಂಬ ಕುಖ್ಯಾತಿ ರಾಜ್ಯಕ್ಕೆ ನೀಡಿದ್ದಾರೆ. ಕೆಂಪಣ್ಣ ಅವರ ಆರೋಪ ಸುಳ್ಳಾಗಿದ್ದರೆ ಅವರ ವಿರುದ್ಧ ತನಿಖೆ ಯಾಕಿಲ್ಲ? ಗುತ್ತಿಗೆದಾರರು ದಾಖಲೆ ನೀಡುತ್ತೇವೆ ಎಂದು ಹೇಳಿದ್ದರೂ ಯಾವ ಅಧಿಕಾರಿ ವಿರುದ್ಧ ತನಿಖೆ ಮಾಡಲಿಲ್ಲ. ಇನ್ನು ಭ್ರಷ್ಟಾಚಾರ ವಿಚಾರದ ಬಗ್ಗೆ ಮಾತನಾಡಿದ ಕಾಂಗ್ರೆಸ್ ಶಾಸಕರಿಗೆ ನೋಟೀಸ್ ಕೊಟ್ಟರು. ಇದಕ್ಕಿಂತ ದೊಡ್ಡ ಅಪಮಾನ ಬೇಕೆ?

ಇನ್ನು ಕೋವಿಡ್ ಸಮಯದಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ 36 ಕುಟುಂಬಕ್ಕೆ ಸಾಂತ್ವನ ಹೇಳಲಾಗಲಿಲ್ಲ. ಮಾನವೀಯತೆಯಿಂದ ಒಬ್ಬ ಮಂತ್ರಿ, ಶಾಸಕ, ಅಧಿಕಾರಿಗಳು ಹೋಗಿ ಪರಿಹಾರ ನೀಡಲಿಲ್ಲ. ನ್ಯಾಯಾಲಯ ಮಧ್ಯಪ್ರವೇಶ ಮಾಡಲಾಯಿತು. ವಿರೋಧ ಪಕ್ಷವಾಗಿ ನಾವು ಮನೆ ಮನೆಗೆ ಹೋಗಿ, ಪ್ರತಿ ಕುಟುಂಬಕ್ಕೆ ತಲಾ 1 ಲಕ್ಷ ಆರ್ಥಿಕ ನೆರವು ನೀಡಬೇಕಾಯಿತು. ಕೋವಿಡ್ ನಿಂದ ಸತ್ತವರಿಗೆ ಘೋಷಣೆ ಮಾಡಿದ ಪರಿಹಾರವನ್ನು ನೀಡಲು ಸಾಧ್ಯವಾಗಲಿಲ್ಲ.ಕೋವಿಡ್ ನಿಂದ ಸಂಕಷ್ಟ ಅನುಭವಿಸಿದವರಿಗೆ ಕೇಂದ್ರ ಸರ್ಕಾರದ ಮೂಲಕ 20 ಲಕ್ಷ ಕೋಟಿ ರಾಜ್ಯ ಸರ್ಕಾರದಿಂದ 1800 ಕೋಟಿ ಪ್ಯಾಕೇಜ್ ಘೋ,ಣೆ ಮಾಡಿದಿರಿ. ಇದರಿಂದ ಯಾರಿಗೆ ಎಷ್ಟು ಸಹಾಯ ಮಾಡಲಾಯಿತು ಎಂದು ಸರ್ಕಾರ ಪಟ್ಟಿ ನೀಡಿ ಎಂದು ಕೇಳಿದರೂ ಕೊಡಲಿಲ್ಲ. ಇದೊಂದು ಸರ್ಕಾರವೇ? ಇದು ಡಬಲ್ ಇಂಜಿನ್ ಸರ್ಕಾರವೇ?  

ಈ ಎಲ್ಲ ಹಗರಣದ ನಂತರ ಈಗ ಮತದಾರರ ಮಾಹಿತಿ ಕಳವು ಮಾಡಲಾಗಿದೆ. ಮನೆಗಳಿಲ್ಲದಿದ್ದರೂ ಮನೆ ಇದೆ ಎಂದು ಮತದಾರರನ್ನು ಸೇರಿಸಿದ್ದಾರೆ. ಕಾಂಗ್ರೆಸ್ ಮತದಾರರನ್ನು ತೆಗೆದು ಹಾಕಿದ್ದಾರೆ. 8.7 ಸಾವಿರ ಬಿಎಲ್ಓ ಸ್ಥಾನವನ್ನು ಖಾಸಗಿಯವರಿಗೆ ನೀಡಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಈ ರೀತಿ ಚುನಾವಣೆ ಗೆಲ್ಲಬೇಕಾ? ಬಂಧಿತ ಅಧಿಕಾರಿಗಳು ಶಾಸಕರು ಹಾಗೂ ಮಂತ್ರಿಗಳ ಆದೇಶದಂತೆ ಕೆಲಸ ಮಾಡಿದ್ದಾರೆ. ಅವರ ಮೇಲೆ ಯಾರೂ ಪ್ರಕರಣ ದಾಖಲಿಸುತ್ತಿಲ್ಲ. ಇಂತಹ ಅಕ್ರಮ ನಡೆಯುತ್ತಿದೆ. ಇನ್ನು ಸಿಎಸ್ ಸಿ ಹೆಸರಲ್ಲಿ ಕೆಲವು ರೈತರ ಖಾತೆಗೆ ಕೇಂದ್ರ ಸರ್ಕಾರದ ಹಣ ಹಾಕಿ ಅವರಿಂದ ಹಣ ಪಡೆಯಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳು ಮೃಧು ಧೋರಣೆ ತೋರುತ್ತಿವೆ. ಈ ರಾಜ್ಯದಲ್ಲಿ ಏನಾಗುತ್ತಿದೆ? ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರದ ಗಂಗೋತ್ರಿ ಹರಿದಿದೆ ಎನ್ನುತ್ತೀರಿ, ಆದರೆ ತನಿಖೆ ಮಾಡಿ ಶಿಕ್ಷೆ ನೀಡಿ. ನಿಮ್ಮನ್ನು ತಡೆಯುತ್ತಿರುವವರು ಯಾರು?

ಜನರ ಗಮನ ಬೇರೆಡೆ ಸೆಳೆಯಲು ಕುಕ್ಕರ್ ಬ್ಲಾಸ್ಟ್ ಪ್ರಕರಣ ಬಳಕೆ:

ಮತ ಮಾಹಿತಿ ಕಳವು ಅಕ್ರಮ ವಿಚಾರದಿಂದ ಜನರ ಗಮನ ಬೇರೆಡೆ ಸೆಳೆಯಲು ಕುಕ್ಕರ್ ಬಾಂಬ್ ಬ್ಲಾಸ್ಟ್ ವಿಚಾರ ತಂದರು.ಎಲ್ಲಿಂದ ಭಯೋತ್ಪಾದಕರು ಬಂದು ಬ್ಲಾಸ್ಟ್ ಮಾಡಿದರು? ಡಿಜಿ ಆತುರದಲ್ಲಿ ಭಯೋತ್ಪಾದಕ ಕೃತ್ಯ ಎಂದರು. ಕೇವಲ ವಿಚಾರ ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ.

ರಾಜ್ಯಕ್ಕೆ 10 ಲಕ್ಷ ಕೋಟಿ ಬಂಡವಾಳ ಬರುತ್ತಿದೆ ಎಂದು ಹೇಳಿದ್ದಾರೆ.ಇದರಲ್ಲಿ ಶಿವಮೊಗ್ಗಕ್ಕೆ, ಕರಾವಳಿ, ಉಡುಪಿ ಜಿಲ್ಲೆಗಳಿಗೆ ಯಾಕೆ ಬಂಡವಾಳ ಹೋಗುತ್ತಿಲ್ಲ? ಯಾವ ಜಿಲ್ಲೆಯಲ್ಲಿ ಎಷ್ಟು ಬಂಡವಾಳ ಹೂಡಿಕೆಯಾಗಿದೆ? ಎಂದು ಸರ್ಕಾರ ಪಟ್ಟಿ ಬಿಡುಗಡೆ ಮಾಡಲಿ.

ಸರ್ಕಾರ ಕೇವಲ ಭಾವನೆ ಮೂಲಕ ದೇಶ ಕಟ್ಟಲು ರಾಜ್ಯ ಕಟ್ಟಲು ಹೊರಟಿದ್ದಾರೆ. ಜನರ ಹೊಟ್ಟೆಪಾಡು ಮರೆತಿದ್ದಾರೆ. ಸರ್ಕಾರ ಕೊನೆ ದಿನಗಳನ್ನು ತಲುಪಿದೆ. ಜನ ಈ ಸರ್ಕಾರ ಕಿತ್ತೊಗೆಯಲು ತೀರ್ಮಾನಿಸಿದ್ದಾರೆ. ಮಾಧ್ಯಮಗಳು ನ್ಯಾಯ ನೀಡುವ ಸ್ಥಾನದಲ್ಲಿದೆ. ನ್ಯಾಯ ನೀಡುವ ಸ್ಥಾನದಿಂದ ಅನ್ಯಾಯ ಬರಬಾರದು.ರಾಜ್ಯದ ಗೌರವ, ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಬೇಕು ಎಂದು ಪಕ್ಷದ ಅಧ್ಯಕ್ಷದ ಅಧ್ಯಕ್ಷನಾಗಿ ಮನವಿ ಮಾಡಿಕೊಳ್ಳುತ್ತೇನೆ.’ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News