ಬೆಂಗಳೂರು: ನೈಋುತ್ಯ ರೈಲ್ವೆ ಇಲಾಖೆ ಬೆಂಗಳೂರು ವಿಭಾಗದ ದಂಡು ರೈಲ್ವೆ ನಿಲ್ದಾಣ-ಬೈಯಪ್ಪನಹಳ್ಳಿ ರೈಲು ನಿಲ್ದಾಣದ ನಡುವೆ ಹಮ್ಮಿಕೊಂಡಿದ್ದ ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಒಟ್ಟು 6 ಕಿ.ಮೀ ವ್ಯಾಪ್ತಿಯಲ್ಲಿ ಸಿಗ್ನಲ್ ಅಳವಡಿಸಿದೆ.
2013-14ನೇ ಸಾಲಿನಲ್ಲಿ 19.75 ಕೋಟಿ ರೂ. ವೆಚ್ಚದಲ್ಲಿ ನಗರದ ದಂಡು ರೈಲ್ವೆ ನಿಲ್ದಾಣ-ವೈಟ್‌ಫೀಲ್ಡ್ (19 ಕಿ.ಮೀ) ನಡುವೆ ಸ್ವಯಂ ಚಾಲಿತ ಸಿಗ್ನಲ್ ವ್ಯವಸ್ಥೆ ಅಳವಡಿಸುವ ಯೋಜನೆ ರೂಪಿಸಲಾಗಿತ್ತು. ಈ ಮಾರ್ಗದಲ್ಲಿ ದಂಡು, ಬೆಂಗಳೂರು ಪೂರ್ವ, ಬೈಯಪ್ಪನಹಳ್ಳಿ, ಕೃಷ್ಣರಾಜಪುರಂ, ಹೂಡಿ ಮತ್ತು ವೈಟ್‌ಫೀಲ್ಡ್ ರೈಲು ನಿಲ್ದಾಣಗಳಿವೆ.
ಇದೀಗ ಮೊದಲ ಹಂತದಲ್ಲಿ ದಂಡು-ಬೈಯಪ್ಪನಹಳ್ಳಿ ನಡುವಿನ ಸ್ವಯಂ ಚಾಲತ ಸಿಗ್ನಲ್ ವ್ಯವಸ್ಥೆ ಕಾಮಗಾರಿ ಪೂರ್ಣಗೊಂಡಿದ್ದು, ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ನಡುವಿನ ಕಾಮಗಾರಿ ಪ್ರಗತಿಯಲ್ಲಿದೆ.
ಬೆಂಗಳೂರ-ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಾರ್ಗವು ಪ್ರಮುಖ ಮಾರ್ಗವಾಗಿದ್ದು, ಈ ಮಾರ್ಗದಲ್ಲಿ ಪ್ರತಿದಿನ 86 ರೈಲುಗಳು ಸಂಚರಿಸುತ್ತವೆ. ಈ ನೂತನ ವ್ಯವಸ್ಥೆಯಿಂದ ಕೆಎಸ್‌ಆರ್ ನಿಲ್ದಾಣಕ್ಕೆ ಬರುವ ರೈಲುಗಳು ಸಿಗ್ನಲ್‌ಗಾಗಿ ಮಾರ್ಗದ ರೈಲು ನಿಲ್ದಾಣಗಳಲ್ಲಿ ಕಾಯುವುದು ಕಡಿಮೆಯಾಗಲಿದ್ದು, ದಂಡು-ಬೈಯಪ್ಪನಹಳ್ಳಿ ನಡುವಿನ ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆಯಿಂದ ರೈಲುಗಳು ಮತ್ತಷ್ಟು ವೇಗವಾಗಿ ಚಲಿಸಲು ಸಹಕಾರಿಯಾಗಲಿದೆ.