ಬಿಬಿಎಂಪಿ ವಾರ್ಡ್ ವಿಂಗಡಣೆ ಅಧಿಕಾರ ಪಿಪಾಸು ಬಿಜೆಪಿಯ ವಿಕೃತಿ: ಎಚ್‌ಡಿಕೆ ಆಕ್ರೋಶ

ವಾರ್ಡ್‌ ವಿಂಗಡಣೆ ಸ್ವರೂಪ ನೋಡಿದರೆ ಬಿಜೆಪಿಯ ‘ಅಧಿಕಾರದ ವಿಕೃತಿ’ ಯಾವ ಮಟ್ಟದಲ್ಲಿದೆ ಎನ್ನುವುದು ಅರ್ಥವಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

Written by - Zee Kannada News Desk | Last Updated : Jun 25, 2022, 02:28 PM IST
  • ಬಿಬಿಎಂಪಿ ರಚನೆಯ ಮೂಲ ಆಶಯವನ್ನೇ ಬುಡಮೇಲು ಮಾಡಿ ಬಿಜೆಪಿಯಿಂದ ರಾಜಕೀಯ ಸ್ವಾರ್ಥ ಸಾಧನೆಯ ಷಡ್ಯಂತ್ರ
  • ವಾರ್ಡ್‌ ವಿಂಗಡಣೆ ಸ್ವರೂಪ ನೋಡಿದರೆ ಬಿಜೆಪಿಯ ‘ಅಧಿಕಾರದ ವಿಕೃತಿ’ ಯಾವ ಮಟ್ಟದಲ್ಲಿದೆ ಎನ್ನುವುದು ಅರ್ಥವಾಗುತ್ತದೆ
  • ಇದು ಕೇವಲ ಬಿಜೆಪಿಯಿಂದ, ಬಿಜೆಪಿ ಶಾಸಕರಿಗಾಗಿ, ಬಿಜೆಪಿಯೇ ಮಾಡಿಕೊಂಡ ಮರು ವಿಂಗಡಣೆ ಎಂದು ಟೀಕಿಸಿದ ಎಚ್‍ಡಿಕೆ
ಬಿಬಿಎಂಪಿ ವಾರ್ಡ್ ವಿಂಗಡಣೆ ಅಧಿಕಾರ ಪಿಪಾಸು ಬಿಜೆಪಿಯ ವಿಕೃತಿ: ಎಚ್‌ಡಿಕೆ ಆಕ್ರೋಶ title=
ಬಿಜೆಪಿ ಸರ್ಕಾರದ ವಿರುದ್ಧ ಎಚ್‍ಡಿಕೆ ಕಿಡಿಕಾರಿದ್ದಾರೆ

ಬೆಂಗಳೂರು: ಬಿಬಿಎಂಪಿ ರಚನೆಯ ಮೂಲ ಆಶಯವನ್ನೇ ಬುಡಮೇಲು ಮಾಡಿ ರಾಜಕೀಯ ಸ್ವಾರ್ಥ ಸಾಧನೆಯ ಷಡ್ಯಂತ್ರ ನಡೆಸಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ಪಾಲಿಕೆಯಾಗಿದ್ದನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನಾಗಿ ನಾನು ಮಾಡಿದ್ದು, ನಗರದ ಜನರಿಗೆ ಸ್ಥಳೀಯವಾಗಿ ಅತ್ಯುತ್ತಮ ಅಡಳಿತ, ಸೇವೆಗಳು ಲಭ್ಯವಾಗಲಿ ಎಂದು. ಆದರೆ, ಬಿಜೆಪಿ ಸರರ್ಕಾರ ಇದನ್ನು ಹಾಳು ಮಾಡುತ್ತಿದೆ’ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಅಧಿಕಾರ ಪಿಪಾಸು. ಅನ್ಯಪಕ್ಷ ಅಧಿಕಾರದಲ್ಲಿರುವುದು ಆ ಪಕ್ಷಕ್ಕೆ ಅಪಥ್ಯ. ತನ್ನ ಕೆಟ್ಟ ಆಡಳಿತಕ್ಕೆ ಬೇಸತ್ತು ಬೆಂಗಳೂರಿಗರು ಬೇರೆ ಪಕ್ಷಕ್ಕೆ ಎಲ್ಲಿ ಮತ ಹಾಕಿಬಿಟ್ಟಾರೋ ಎನ್ನುವ ಭೀತಿಯಿಂದ ಚುನಾವಣೆಯನ್ನೇ ನಡೆಸಲಿಲ್ಲ. ಕೋರ್ಟ್‌ ಚಾಟಿ ಬೀಸಿದ ಮೇಲೆ ಚುನಾವಣೆ ಎನ್ನುತ್ತಿರುವ ಸರ್ಕಾರ, ಈಗ ವಾರ್ಡ್‌ ವಿಂಗಡಣೆಯ ನಾಟಕ ಅಡಿದೆ’ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: Shocking News: ಹಳ್ಳದಲ್ಲಿ ತೇಲಿಬಂದ ಭ್ರೂಣಗಳು! ಬೆಚ್ಚಿಬಿದ್ದ ಬೆಳಗಾವಿ ಜನರು

‘ಕೋರ್ಟ್‌ ಹೇಳಿದರಷ್ಟೇ ಕೆಲಸʼ ಎನ್ನುವ ಚಾಳಿ ಬಿಜೆಪಿ ಸರ್ಕಾರದ್ದು. ನ್ಯಾಯಾಲಯದ ಅದೇಶವನ್ನೇ ಧಿಕ್ಕರಿಸಿ ನಡೆದ ಈ ನಿರ್ಲಜ್ಜ ಸರ್ಕಾರಕ್ಕೆ ಜನಹಿತಕ್ಕಿಂತ ಪಕ್ಷಹಿತವೇ ಸರ್ವಸ್ವ. ವಾರ್ಡ್‌ ವಿಂಗಡಣೆ ಸ್ವರೂಪ ನೋಡಿದರೆ ಬಿಜೆಪಿಯ ‘ಅಧಿಕಾರದ ವಿಕೃತಿ’ ಯಾವ ಮಟ್ಟದಲ್ಲಿದೆ ಎನ್ನುವುದು ಅರ್ಥವಾಗುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.

‘ವಾರ್ಡ್ ವಿಂಗಡಣೆಯಲ್ಲಿ ಬೆಂಗಳೂರು ನಗರದ ಸಮಗ್ರತೆ, ಅನನ್ಯತೆಯನ್ನು ಕಡೆಗಣಿಸಲಾಗಿದೆ. ಬೆಂಗಳೂರು ಎಂದರೆ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳು ಮಾತ್ರವಲ್ಲ. ಇದು ಕೇವಲ ಬಿಜೆಪಿಯಿಂದ, ಬಿಜೆಪಿ ಶಾಸಕರಿಗಾಗಿ, ಬಿಜೆಪಿಯೇ ಮಾಡಿಕೊಂಡ ಮರು ವಿಂಗಡಣೆ. ಐತಿಹಾಸಿಕ ವಾರ್ಡುಗಳ ಹೆಸರುಗಳನ್ನು ಬದಲಿಸಿ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಚರಿತ್ರೆಯ ಕುರುಹುಗಳನ್ನು ಅಳಿಸಿ ಹಾಕಿ ಪಠ್ಯಕ್ಕೆ ಅಪಚಾರ ಎಸಗಿದಂತೆ ನಾಡಪ್ರಭುಗಳು ಮತ್ತು ಮೈಸೂರು ಒಡೆಯರರ ಘನ ಕೀರ್ತಿಗೆ ಚ್ಯುತಿ ತರುವ ಹುನ್ನಾರ ಇದಷ್ಟೇ’ ಎಂದು ಎಚ್‍ಡಿಕೆ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಶಿಕ್ಷಣ ಇಲಾಖೆಗೆ ‘ಸಾಕ್ಷರತಾ ಇಲಾಖೆ’ ಎಂದು ಮರು ನಾಮಕರಣ

‘ಬೆಂಗಳೂರು ಮಹಾನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗಬೇಕೆಂದರೆ ರಾಷ್ಟ್ರಪತಿಗಳು ಮತ್ತು ಪ್ರಧಾನಿ ಆಗಾಗ್ಗೆ ನಗರಕ್ಕೆ ಭೇಟಿ ನೀಡುತ್ತಿರಬೇಕು ಎಂದು ಹೈಕೋರ್ಟ್‌ ಛೀಮಾರಿ ಹಾಕಿದೆ. ನಗರದ ಜನರ ಬವಣೆಗೆ ಹಿಡಿದ ಕನ್ನಡಿ ಇದು. ಮೊನ್ನೆಯಷ್ಟೇ ಪ್ರಧಾನಿ ಬಂದು ಹೋಗಿದ್ದಾರೆ. ಅದಕ್ಕಾಗಿ 23 ಕೋಟಿ ರೂ. ಖರ್ಚು ಮಾಡಿ ನಗರದ ರಸ್ತೆ ಗುಂಡಿ ಮುಚ್ಚಲಾಗಿದೆ. ಇದನ್ನು ಗಮನಿಸಿದರೆ ಪ್ರಧಾನಿ ನಗರದ ಬೇರೆ ಬೇರೆ ಮಾರ್ಗಗಳಲ್ಲಿ ಆಗಾಗ್ಗೆ ಸಂಚರಿಸಬೇಕು. ಆಗ ಅವರನ್ನು ಮೆಚ್ಚಿಸುವ ಸಲುವಾಗಿಯಾದರೂ ಅಧಿಕಾರಿಗಳು ಹಾಳಾಗಿರುವ ರಸ್ತೆಗಳನ್ನು ಸರಿಪಡಿಸಬಹುದು ಎಂದು ಕೋರ್ಟ್ ಚಾಟಿ ಬೀಸಿದೆ’ ಅಂತಾ ಕುಮಾರಸ್ವಾಮಿ ಟೀಕಿಸಿದ್ದಾರೆ.

‘ಇನ್ನು ಪ್ರಧಾನಿಗಳಿಗಾಗಿ ಸಿದ್ಧಪಡಿಸಿದ ರಸ್ತೆಯೇ ಕುಸಿದುಬಿದ್ದಿದೆ. 40% ಕಮಿಷನ್‌ & ಕಳಪೆ ಕಾಮಗಾರಿಯ ಫಲಶ್ರುತಿ ಇದು. ದೇಶದ ಪ್ರಧಾನಿಯೇ ಸಂಚರಿಸಿದ ರಸ್ತೆಯೇ ಕಳಪೆ!! ಬಿಜೆಪಿ ಅಭಿವೃದ್ಧಿ ಮಾದರಿ ಎಂದರೆ ಇದೇನಾ? ಐಟಿ ಸಿಟಿಯ ಸ್ಥಿತಿ ಅಯ್ಯೋ ಎನ್ನುವಂತಿದೆ’ ಎಂದು ಎಚ್‍ಡಿಕೆ ವ್ಯಂಗ್ಯವಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News