ಬೆಂಗಳೂರು: ಸೆಪ್ಟೆಂಬರ್ನಲ್ಲಿ ನಿರೀಕ್ಷೆಗೂ ಮೀರಿದ ಮಳೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಈಗಾಗಲೇ ಸುಮಾರು 300 ಮರಗಳು ಧರೆಗುರುಳಿದ್ದು, ಶೀಘ್ರವೇ ತೆರವುಗೊಳಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಲಾಗಿದೆ. ತಗ್ಗು ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲು ವಲಯವಾರು ತಂಡಗಳು ಕೆಲಸ ಮಾಡುತ್ತಿವೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಸದಾಶಿವ ನಗರದ ನಿವಾಸಿಗಳ ಸಂಘದ ಪ್ರತಿನಿಧಿಗಳು ಇಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರನ್ನು ಬಿಡಿಎ ಕ್ವಾಟ್ರಸ್ನಲ್ಲಿ ಭೇಟಿ ಮಾಡಿ, ರೆಸಿಡೆನ್ಸಿಯಲ್ನಲ್ಲಿ ಕಮರ್ಷಿಯಲ್ ಚಟುವಟಿಕೆಗೆ ಅವಕಾಶ ನೀಡದಂತೆ ಹಾಗೂ ಈಗಾಗಲೇ ಇರುವ ಕಮರ್ಷಿಯಲ್ ಕಟ್ಟಡ ತೆರವುಗೊಳಿಸಲು ಕ್ರಮ ಕೈಗೊಳ್ಳುವುದು ಸೇರಿದಂತೆ ಇತರೆ ವಿಚಾರದ ಬಗ್ಗೆ ಚರ್ಚಿಸಿದರು.
ಬಿಡಿಎ ಕ್ವಾಟ್ರಸ್ನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಸ್ತೆ ಗುಂಡಿ ಮುಚ್ಚಲು ಹೈಕೋರ್ಟ್ ಆದೇಶನೀಡಿದ್ದು, ಈ ಕೆಲಸವೂ ತ್ವರಿತವಾಗಿ ನಡೆಯುತ್ತಿದೆ. ಆದರೆ ಮಳೆಯಿಂದ ತೊಂದರೆಯಾಗುತ್ತಿದೆ. ರಾಜಕಾಲುವೆ ಒತ್ತುವರಿಗೆ ಕಠಿಣ ಕ್ರಮಕೈಗೊಂಡಿದ್ದು, ಸರ್ವೆ ಮಾಡಲು ಸೂಚನೆ ನೀಡಲಾಗಿದೆ. ಸರ್ವೆ ಮಾಡುವವರ ಕೊರತೆಯಿಂದ ಕಂದಾಯ ಇಲಾಖೆಯಿಂದ ತಾತ್ಕಾಲಿಕವಾಗಿ ಸರ್ವೆ ಮಾಡುವವರನ್ನು ನೇಮಕಮಾಡಲಾಗಿದೆ ಎಂದರು.