ಬೆಂಗಳೂರು: ರಾಜಧಾನಿ ಬೆಂಗಳೂರು ಮಹಾನಗರದ ಮೂಲ ಸೌಕರ್ಯಗಳಿಗೆ ನಾನು ಮುಖ್ಯಮಂತ್ರಿ ಆಗಿದ್ದಾಗ ಅಡ್ಡಿಪಡಿಸಿದ್ದೇನೆಂಬ ಬಗ್ಗೆ ಒಂದು ಉದಾಹರಣೆ ತೋರಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಅಂತಾ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ವಿಧಾನಸೌಧದಲ್ಲಿ ಇಂದು ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಇದ್ದಕ್ಕಿದ್ದ ಹಾಗೆ ಒತ್ತುವರಿ ತೆರವಿನ ಡ್ರಾಮಾ ನಡೆಯುತ್ತಿದೆ. ನಾನು ಈಗಾಗಲೇ ಕಲಾಪದಲ್ಲಿ ಹೇಳಿದ್ದೇನೆ. ಯುದ್ಧ ಕಾಲದಲ್ಲಿ ಶಸ್ತ್ರಾಸ್ತ್ರ ಅಭ್ಯಾಸ ಮಾಡುವ ಬದಲಾಗಿ, ನಾಲ್ಕೈದು ಕಡೆ ತೆರವು ಮಾಡಿ ಸುಮ್ಮನಾಗುವುದಲ್ಲ. ಕಳೆದ 25 ವರ್ಷಗಳಿಂದ ಆದ ಅನಾಹುತಗಳು ಸೇರಿ ಕಳೆದ 5 ವರ್ಷಗಳಿಂದ ನಗರದಲ್ಲಿ ಆಗಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’ ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದರು.
‘ಜೆಡಿಎಸ್ ಕಾಲದಲ್ಲಿ ಆಗಿರುವ ನಿರ್ಧಾರಗಳಿಂದ ಲೋಪ ಆಗಿದೆ ಎಂದು ಕೆಲವರು ಆರೋಪ ಮಾಡಿದ್ದಾರೆ. ನಾನು ಅಧಿಕಾರದಲ್ಲಿ ಇದ್ದಾಗ ಏನಾದರೂ ಲೋಪ ಆಗಿದ್ದರೆ, ಆರೋಪ ಮಾಡಿರುವ ಕಾಂಗ್ರೆಸ್ ಮತ್ತು ಬಿಜೆಪಿ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಘೋಷಣೆ ಮಾಡ್ತೀನಿ. ನಾನು ಬೆಂಗಳೂರು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದು ಕುಮಾರಸ್ವಾಮಿ ಇದೇ ವೇಳೆ ಹೇಳಿದರು.
ಇದನ್ನೂ ಓದಿ: “ರಾಜಕೀಯ ಕೊನೆ ಹಂತ ಎಂದು ಹೇಳಿ ಬಹಳ ಜನರನ್ನು ಕಳುಹಿಸಿದ್ದೀರಿ”
ಹಗರಣದ ಬಗ್ಗೆ ನಾಳೆ ಮಾತನಾಡುತ್ತೇನೆ
‘ಹರಗಣವೊಂದನ್ನು ಬಯಲಿಗೆ ತರುವ ಬಗ್ಗೆ ಸದನದಲ್ಲಿ ಮಾತನಾಡಲು ಅವಕಾಶ ಕೊಡಬೇಕು. ಈಗಾಗಲೇ ಸಭಾಧ್ಯಕ್ಷರಿಗೆ ಮನವಿ ಮಾಡಿದ್ದೇನೆ. ಆದರೆ, ಸುಖಾ ಸುಮ್ಮನೆ ಮಾತನಾಡಿ ಸದನದಲ್ಲಿ ನ್ಯೂಸೆನ್ಸ್ ಮಾಡಲು ನನಗಿಷ್ಟವಿಲ್ಲ. ಇಂದು ಬೆಳಗ್ಗೆ ಕೂಡ ಸಭಾಧ್ಯಕ್ಷರಿಗೆ ದೂರವಾಣಿ ಕರೆ ಮಾಡಿ ಮತ್ತೊಮ್ಮೆ ಮನವಿ ಮಾಡಿದ್ದೇನೆ. ಬೇರೆ ಬೇರೆ ವಿಚಾರಗಳ ಚರ್ಚೆಗೆ ಅವಕಾಶ ನೀಡಲಾಗಿದ್ದ ಕಾರಣದಿಂದ ತಡವಾಗಿ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ. ಬಹುಶಃ ನಾಳೆ (ಸೆ.21) ಅವಕಾಶ ಸಿಗಬಹುದು’ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
‘ಸದನದಲ್ಲಿ ನಾನು ಪ್ರಸ್ತಾಪ ಮಾಡಲಿರುವ ವಿಷಯ ಅತ್ಯಂತ ಗಂಭೀರ ವಿಚಾರ. ಪೂರ್ಣವಾಗಿ ದಾಖಲೆಗಳನ್ನು ಇಟ್ಟುಕೊಂಡೇ ಮಾತನಾಡುತ್ತೇನೆ. ಗಾಳಿಯಲ್ಲಿ ಗುಂಡು ಹಾರಿಸೋನು, ಕುಮಾರಸ್ವಾಮಿ ಹಿಟ್ ಆಂಡ್ ರನ್ ಮಾಡ್ತಾರೆ ಎಂದು ಹೇಳುವವರಿಗೆ ಉತ್ತರ ಕೊಡುತ್ತೇನೆ. ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ಸಾವಿರಾರು ಕೋಟಿ ರೂ. ವ್ಯವಹಾರಕ್ಕೆ ಸಂಬಂಧಪಟ್ಟ ವಿಷಯ ಅದು. ಈ ಒಂದು ವಿಷಯದಲ್ಲಿ ಸರ್ಕಾರ ಆಘಾತಕಾರಿ ತೀರ್ಮಾನ ತೆಗೆದುಕೊಂಡಿದೆ’ ಅಂತಾ ಪ್ರಶ್ನೆಯೊಂದಕ್ಕೆ ಅವರು ಉತ್ತರ ನೀಡಿದರು.
ಎಸ್.ಟಿ.ಸೋಮಶೇಖರ್ ರಾಜೀನಾಮೆ ನೀಡಲಿ
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಒಳಿತು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಇದೇ ವೇಳೆ ಹೇಳಿದರು. ‘ಬಿಡಿಎ ವಸತಿ ಯೋಜನೆಯಿಂದಕ್ಕೆ ಸಂಬಂಧಿಸಿ ಲಂಚದ ಆರೋಪದ ಹಿನ್ನೆಲೆ ಲೋಕಾಯುಕ್ತ ಪೊಲೀಸರು ಸಚಿವರ ವಿರುದ್ಧ ಆರೋಪ ಪಟ್ಟಿ (FIR) ದಾಖಲು ಮಾಡಿದ್ದಾರೆ. ಅಲ್ಲದೆ ಇದರ ತನಿಖೆಗೆ ಹೈಕೋರ್ಟ್ ಸಹ ಸೂಚನೆ ಕೊಟ್ಟಿದೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ದವಸ ಧಾನ್ಯ ಕಲಾಪದಲ್ಲಿ ಬಿಜೆಪಿಗೆ ನೀಡುವುದು ಇವೆಂಟ್ ಮ್ಯಾನೇಜ್ಮೆಂಟ್
‘ನೈತಿಕ ಹೊಣೆ ಹೊತ್ತು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. FIR ಮೇಲೆ ತನಿಖೆ ಪ್ರಾರಂಭ ಮಾಡುವುದಾದರೇ, ಸೋಮಶೇಖರ್ ಅವರು ಹಾಲಿ ಮಂತ್ರಿ. ಅವರು ಬಿಡಿಎ ಅಧ್ಯಕ್ಷರಾಗಿದ್ದಾಗ ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ಈಗ ಎಫ್‍ಐಆರ್ ದಾಖಲಾಗಿದೆ. ಸಚಿವರು ಪ್ರಭಾವಿ ಸ್ಥಾನದಲ್ಲಿರುವುದರಿಂದ ಸತ್ಯಾಸತ್ಯತೆಗಳನ್ನು ಮರೆ ಮಾಚುವುದಕ್ಕೆ ಅವಕಾಶಗಳು ಇರುತ್ತವೆ. ಈ ಹಿನ್ನೆಲೆ ಸಚಿವರು ರಾಜೀನಾಮೆ ನೀಡುವುದು ಸೂಕ್ತ ಎನ್ನುವುದು ನನ್ನ ಅಭಿಪ್ರಾಯ’ವೆಂದು ಎಚ್‍ಡಿಕೆ ಹೇಳಿದರು.
ಇಡಿ ನೋಟಿಸ್‍ಗೆ ಉತ್ತರ ಕೊಡುವ ಶಕ್ತಿ ಡಿಕೆಶಿಗೆ ಇದೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಇಡಿ ತನಿಖೆ ವಿಚಾರದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಕುಮಾರಸ್ವಾಮ, ಡಿಕೆಶಿ ತಾವೊಬ್ಬ ರಾಜಕಾರಣಿ, ರೈತ, ಬ್ಯುಸಿನೆಸ್‌ಮನ್, ನನ್ನದೇ ಆದಂತಹ ವೃತಿಗಳಿವೆ. ನಾನು ಭ್ರಷ್ಟಾಚಾರ ಮಾಡಿಲ್ಲವೆಂದು ಸ್ವತಃ ಹೇಳಿಕೊಂಡಿದ್ದಾರೆ’ ಅಂತಾ ಕುಮಾರಸ್ವಾಮಿ ಎಂದರು. ‘ಡಿಕೆಶಿ ಭ್ರಷ್ಟಾಚಾರ ಮಾಡದೆ ಇದ್ದಲ್ಲಿ ಇಡಿ ನೋಟಿಸ್ ಕೊಟ್ಟಿದ್ದರೂ ಅದಕ್ಕೆ ಅವರು ಉತ್ತರ ಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಅದರಿಂದ ಹೊರಗೆ ಬರುವ ವಿಶ್ವಾಸ ಅವರಿಗೆ ಇದ್ದಾಗ ನಾನು ಅದರ ಬಗ್ಗೆ ಟೀಕೆ ಮಾಡೋಕೆ ಹೋಗಲ್ಲ’ವೆಂದು ಕುಮಾರಸ್ವಾಮಿ ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.