ಮಂಡ್ಯ: ಮಂಡ್ಯದಲ್ಲಿ ರಾಜಕೀಯ ಬದಲಾವಣೆ ಆದರೆ ಇಡೀ ರಾಜ್ಯದಲ್ಲಿ ಬದಲಾವಣೆ ಆಗುತ್ತದೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.ಅವರು ಇಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಪ್ರಜಾಧ್ವನಿ ಎಂದರೆ ಈ ನಾಡಿದ 5 ಕೋಟಿ ಮತದಾರರ ಧ್ವನಿ. 2013ರಲ್ಲಿ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದರು, 2013 ರ ಮೇ 13ರಂದು ಬಸವಜಯಂತಿ ದಿನದಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದೆ, ಇದಕ್ಕೆ ಕಾರಣ ಬಸವಾದಿ ಶರಣರು ಹೇಗೆ ನುಡಿದಂತೆ ನಡೆದಿದ್ದರೋ ಹಾಗೆ ನಮ್ಮ ಸರ್ಕಾರವೂ ನುಡಿದಂತೆ ನಡೆಯಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ನೇರವಾಗಿ ಕ್ಯಾಬಿನೆಟ್ ಹಾಲ್ ಗೆ ಹೋಗಿ ನಮ್ಮ 5 ಭರವಸೆಗಳನ್ನು ಈಡೇರಿಸಿ, ಆದೇಶ ಹೊರಡಿಸುವ ಕೆಲಸ ಮಾಡಿದೆ. ನಾವು ಜನರಿಗೆ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು.
ನಾವು ಈ ಬಾರಿ ಕೂಡ ಪ್ರತೀ ಮನೆಗೆ 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತೇವೆ, ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ 2000 ದಂತೆ ವರ್ಷಕ್ಕೆ 24,000 ರೂ. ನೀಡುತ್ತೇವೆ ಎಂಬ ಭರವಸೆ ನೀಡಿದ್ದೇವೆ. ಮುಂದೆ ನಾವು ಅಧಿಕಾರಕ್ಕೆ ಬಂದ ಮೇಲೆ ಪ್ರತೀ ಬಡವನಿಗೆ ತಲಾ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ಇವುಗಳ ಜೊತೆ ಇನ್ನು ಕೆಲವು ಭರವಸೆಗಳನ್ನು ನೀಡುತ್ತೇವೆ ಮತ್ತು ಅವೆಲ್ಲವನ್ನು ಈಡೇರಿಸುವ ಕೆಲಸ ಮಾಡುತ್ತೇವೆ. ಇದನ್ನು ನೋಡಿದ ಮೇಲೆ ಬಿಜೆಪಿ ಮತ್ತು ಜೆಡಿಎಸ್ ಗೆ ಸೋಲಿನ ಭಯ ಶುರುವಾಗಿದೆ. ನಮ್ಮ ಮೇಲಿನ ಭಯದಿಂದ ಈ ಯೋಜನೆಗಳಿಗೆ ಹಣ ಎಲ್ಲಿಂದ ತರ್ತೀರ ಎಂದು ಕೇಳುತ್ತಿದ್ದಾರೆ. ಹಿಂದೆ 7 ಕೆ.ಜಿ ಅಕ್ಕಿ ನೀಡಿದಾಗಲೂ ಇದೇ ರೀತಿ ಹೇಳಿ ಉಚಿತವಾಗಿ ಅಕ್ಕಿ ನೀಡಿ ದುಡಿಯುವ ಬಡಜನರನ್ನು ಸೋಮಾರಿ ಮಾಡುತ್ತಿದ್ದೀರಿ ಎಂದು ಹೇಳಿದ್ದರು.
ಇದನ್ನೂ ಓದಿ- Kranti : ಡೋಂಟ್ ಮೆಸ್ ವಿತ್ ಹಿಮ್.. 'ಕ್ರಾಂತಿ'ಯ ಮಾಸ್ ಹಾಡಿಗೆ ಫ್ಯಾನ್ಸ್ ಫಿದಾ!
ಗುರುಪಾದಪ್ಪ ನಾಗಮಾರಪಲ್ಲಿ ಎಂಬ ಶಾಸಕ ನಾನು ಬಡವರಿಗೆ ಉಚಿತವಾಗಿ ಅಕ್ಕಿ ಕೊಟ್ಟಾಗ ಕೂಲಿ ಕೆಲಸಗಳಿಗೆ ಬಡವರು ಸಿಗೋದಿಲ್ಲ, ಯಾಕ್ರೀ ಸಿದ್ದರಾಮಯ್ಯ ಬಡವರಿಗೆ ಉಚಿತವಾಗಿ ಅಕ್ಕಿ ಕೊಟ್ರೀ ಎಂದು ಕೇಳಿದ್ರು, ಅದಕ್ಕೆ ನಾನು “ಇಷ್ಟು ದಿನ ಬಡವರು ಗೆಯ್ದು ಗೆಯ್ದು ಸುಸ್ತಾಗಿದ್ದಾರೆ, ಅವರೊಂದಷ್ಟು ದಿನ ವಿಶ್ರಾಂತಿ ತೆಗೆದುಕೊಳ್ಳಲಿ, ನೀವು ಈಗ ಸ್ವಲ್ಪ ಹೊಲ ಗದ್ದೆಗಳಲ್ಲಿ ಹೋಗಿ ಕೆಲಸ ಮಾಡಿ” ಎಂದು ಹೇಳಿದ್ದೆ. ಬಡವರಾಗಿ ಹುಟ್ಟಿದ್ದಕ್ಕೆ ಜೀವನ ಪೂರ್ತಿ ಕೂಲಿ ಮಾಡಬೇಕ? ಅವರಿಗೂ ವಿಶ್ರಾಂತಿ ಬೇಡ್ವಾ? ಬಸವಾದಿ ಶರಣರು ಕಾಯಕ ಮತ್ತು ದಾಸೋಹದ ಕಲ್ಪನೆಯನ್ನು ನೀಡಿದ್ದಾರೆ. ದೇಶದಲ್ಲಿ ಎಲ್ಲರೂ ಕ್ರಿಯಾಶೀಲರಾಗಿ ಉತ್ಪಾದನೆ ಮಾಡಬೇಕು ಮತ್ತು ಉತ್ಪಾದನೆಯಾದ ಸಂಪತ್ತನ್ನು ಎಲ್ಲರೂ ಹಂಚಿಕೊಳ್ಳಬೇಕು, ಬಸವಣ್ಣನವರ ಪೂಜೆ ಮಾಡುವ ನಿಮಗೆ ಬಸವಣ್ಣನ ಆದರ್ಶವೇ ಗೊತ್ತಿಲ್ಲದಿದ್ದರೆ ಹೇಗಪ್ಪಾ? ಎಂದು ನಾಗಮಾರಪಲ್ಲಿ ಅವರನ್ನು ಪ್ರಶ್ನೆ ಕೇಳಿದ್ದೆ.
ಮುಂದೆ ನಾವು ಅಧಿಕಾರಕ್ಕೆ ಬಂದ ಮೊದಲ ದಿನವೇ, ಸಂಪುಟ ಸಭೆ ಮಾಡಿ ಉಚಿತ ಅಕ್ಕಿ, 200 ಯುನಿಟ್ ವಿದ್ಯುತ್ ಮತ್ತು ತಿಂಗಳಿಗೆ 2000 ರೂ. ನೀಡುವ ಆದೇಶ ಹೊರಡಿಸುತ್ತೇವೆ. ಒಂದು ವೇಳೆ ನಾವು ಕೊಟ್ಟ ಮಾತಿಗೆ ತಪ್ಪಿದರೆ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತೇವೆ. ರಾಜಕಾರಣ ಮಾಡುವುದು ಜನರಿಗೆ ಟೋಪಿ ಹಾಕುವುದಕ್ಕಲ್ಲ.
ಮಂಡ್ಯದ ಸಕ್ಕರೆ ಕಾರ್ಖಾನೆಗೆ ನಾನು ಮುಖ್ಯಮಂತ್ರಿಯಾಗಿರುವಾಗ ಸರ್ಕಾರದಿಂದ ಹಣ ನೀಡಿ ಪ್ರತೀ ವರ್ಷ ಕಾರ್ಖಾನೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದೆ. ಕುಮಾರಸ್ವಾಮಿ ಬಂದ ಮೇಲೆ ಅನುದಾನ ನೀಡದೆ ನಿಂತುಹೋಗಿತ್ತು, ಈ ಬಿಜೆಪಿಯವರು ಅತ್ತು ಕರೆದು ಈಗ ಆರಂಭ ಮಾಡಿದ್ದಾರೆ ಆದರೆ ಈ ವರೆಗೆ ಕಬ್ಬು ಅರೆದಿರುವುದು 9000 ಮೆಟ್ರಿಕ್ ಟನ್ ಮಾತ್ರ. ಈ ಭಾಗದಲ್ಲಿ ಮೂರುವರೆ ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಬೆಳೆಯುತ್ತಾರೆ, ಇಲ್ಲಿ ಕಬ್ಬು ಅರೆಯಲಾಗದೆ ಬೇರೆ ಕಡೆಗಳಲ್ಲಿರುವ ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಯಾವುದೇ ಕಾರಣಕ್ಕೂ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣ ಮಾಡಬಾರದು, ಈ ಕಾರ್ಖಾನೆಯನ್ನು ಆಧುನೀಕರಣ ಮಾಡಿ ಇಲ್ಲಿನ ರೈತರ ಕಬ್ಬನ್ನು ಕೊಂಡು ಇಲ್ಲಿಯೇ ಅರೆಯುವ ಕೆಲಸ ಆಗಬೇಕು ಎಂದು ಬೊಮ್ಮಾಯಿ ಅವರ ಬಳಿ ನಾವು ಒತ್ತಾಯ ಮಾಡಿದ ಮೇಲೆ, ರೈತ ಸಂಘಗಳು ಪ್ರತಿಭಟನೆ ಮಾಡಿದ ಮೇಲೆ, ನಾವು ಈ ಕಾರ್ಖಾನೆಯನ್ನು ಮಾರಲ್ಲ ಎಂದು ಬೊಮ್ಮಾಯಿ ಹೇಳಿದ್ರು. ಮುರುಗೇಶ್ ನಿರಾಣಿ ಈ ಕಾರ್ಖಾನೆಯನ್ನು ಖರೀದಿ ಮಾಡಲು ಕಾಯುತ್ತಾ ಕೂತಿದ್ದರು. ಸರಿಯಾದ ಕ್ರಮದಲ್ಲಿ ಈ ಕಾರ್ಖಾನೆಯನ್ನು ನಡೆಸಿದ್ರೆ ಎಂದಿಗೂ ನಷ್ಟವಾಗಲ್ಲ. ಕೋ ಜನರೇಷನ್ ಮಾಡಬೇಕು, ಲಿಕ್ಕರ್ ಮತ್ತು ಎಥೆನಾಲ್ ತಯಾರು ಮಾಡಿದಾಗ ಮಾತ್ರ ಸಕ್ಕರೆ ಕಾರ್ಖಾನೆ ಲಾಭದಲ್ಲಿ ನಡೆಯಲು ಸಾಧ್ಯವಾಗುತ್ತದೆ.
ಇದನ್ನೂ ಓದಿ- Pathaan kranti : ಕರುನಾಡಲ್ಲಿ ಕಿಂಗ್ ಖಾನ್ ʼಪಠಾಣ್ʼ ಕಲೆಕ್ಷನ್‌ಗೆ ದರ್ಶನ್ ʼಕ್ರಾಂತಿʼ ಕಿಚ್ಚು ತಟ್ಟುತ್ತಾ..!?
ಬೊಮ್ಮಾಯಿ ಅವರು ಕಳೆದ ವರ್ಷ ಮೈಶುಗರ್ ಸಕ್ಕರೆ ಕಾರ್ಖಾನೆಗೆ 50 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದ್ದರು, ಆದರೆ ಈ ವರೆಗೆ ನೀಡಿರುವುದು ಕೇವಲ 30 ಕೋಟಿ ರೂ. ಮಾತ್ರ. ಉಳಿದ 20 ಕೋಟಿ ರೂ. ಕೊಡಿ ಎಂದು ಕೇಳಿದರೆ ಸಾಲ ತೆಗೆದುಕೊಳ್ಳಲು ಹೇಳಿದ್ದಾರಂತೆ. ಅವರೇ ಸಾಲ ಮಾಡುವುದಾದರೆ ಬೊಮ್ಮಾಯಿ ಯಾಕಿದ್ದಾರೆ? ನಾವು ಅಧಿಕಾರಕ್ಕೆ ಬಂದ ಮೇಲೆ ಈ ಕಾರ್ಖಾನೆಯನ್ನು ಆಧುನೀಕರಣಗೊಳಿಸಿ, ಈ ಭಾಗದ ಎಲ್ಲಾ ರೈತರ ಕಬ್ಬನ್ನು ಅರೆಯಲು ಎಷ್ಟೇ ಹಣ ಖರ್ಚಾದರೂ ನಾವು ಈ ಕೆಲಸ ಮಾಡುತ್ತೇವೆ.
ಮಂಡ್ಯದಲ್ಲಿ ರಾಜಕೀಯ ಬದಲಾವಣೆ ಆದರೆ ಇಡೀ ರಾಜ್ಯದಲ್ಲಿ ಬದಲಾವಣೆ ಆಗುತ್ತದೆ. ಕಳೆದ ಬಾರಿ 7 ಸ್ಥಾನಗಳಲ್ಲಿ ನಮಗೆ ಒಂದೂ ಸ್ಥಾನ ಸಿಗಲಿಲ್ಲ, ಈ ಬಾರಿ 7 ಸ್ಥಾನಗಳಲ್ಲಿ ಕನಿಷ್ಠ 5 ರಿಂದ 6 ಸ್ಥಾನಗಳನ್ನು ಗೆಲ್ಲಿಸಿಕೊಡುವ ಕೆಲಸ ಮಾಡಿ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ನಾವು ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ, ಇದನ್ನು ನಾನು ನಾಡಿನ ಜನರ ನಾಡಿ ಮಿಡಿತವನ್ನು ನೋಡಿ ಹೇಳುತ್ತಿದ್ದೇನೆ. ನಾವು ಅಧಿಕಾರಕ್ಕೆ ಬಂದ ವೇಳೆ ಈ ಭಾಗದಿಂದಲೂ ಶಾಸಕರು ನಮ್ಮ ಜೊತೆ ಇರಬೇಕು, ನಿಮಗೆ ಯಾವುದೇ ಕಷ್ಟ ಬಂದರೂ ನಾವು ನಿಮ್ಮ ಜೊತೆ ಇರುತ್ತೇವೆ.
ಜೆಡಿಎಸ್ ನ ನಂಬಬೇಡಿ, ಇಲ್ಲಿ ನಮಗೆ ಮತ್ತು ಜೆಡಿಎಸ್ ಗೆ ಹೋರಾಟ ಇದೆ. ನಾವು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದೆವು, ಅವರಿಂದ ಶಾಸಕರನ್ನು ಸರಿಯಾಗಿ ನೋಡಿಕೊಳ್ಳಲು ಆಗದೆ ಹೋಗಿದ್ದಕ್ಕೆ 17 ಜನ ಬಿಜೆಪಿಗೆ ಹೋದರು. ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರ ಬೀಳಲು ನಾನು ಕಾರಣ ಎಂದು ಹೇಳುತ್ತಿದ್ದಾರೆ, ನಮ್ಮ ಶಾಸಕರನ್ನು ನಾನು ಕಳಿಸಿದ್ದಾದರೆ, ಜೆಡಿಎಸ್ ಶಾಸಕರನ್ನು ಕಳಿಸಿದ್ದು ಯಾರಪ್ಪ? ನೀವೆ ಕಳಿಸಿದ್ರಾ? ನೀವು ವೆಸ್ಟೆಂಡ್ ಹೋಟೆಲ್ ನಲ್ಲಿ ಉಳಿದುಕೊಂಡು ಅಧಿಕಾರ ಮಾಡಲು ಆಗುತ್ತಾ? ಜನರು, ಮಂತ್ರಿಗಳು, ಅಧಿಕಾರಿಗಳು, ಶಾಸಕರನ್ನು ಭೇಟಿ ಮಾಡಿದರೆ ಮಾತ್ರ ಒಳ್ಳೆ ಅಧಿಕಾರ ನೀಡಲು ಸಾಧ್ಯವಾಗುತ್ತದೆ. ಗಾಜಿನ ಮನೆಯಲ್ಲಿ ಕೂತು ಅಧಿಕಾರ ನಡೆಸಲು ಹೊರಟದ್ದೆ ಕುಮಾರಸ್ವಾಮಿ ತಪ್ಪು.
ನಮ್ಮ ಪಕ್ಷದಿಂದ 80 ಶಾಸಕರು ಆಯ್ಕೆಯಾಗಿದ್ದರೂ, 37 ಜನ ಶಾಸಕರು ಇದ್ದ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದೆವು, ಇದಕ್ಕೆ ಕಾರಣ ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬುದು. ಆದರೆ ಕುಮಾರಸ್ವಾಮಿ ಕೈಲಿ ಅಧಿಕಾರ ಉಳಿಸಿಕೊಳ್ಳಲು ಆಗಲಿಲ್ಲ. ಕೊಟ್ಟ ಕುದುರೆ ಏರಲಾರದವ ವೀರನೂ ಅಲ್ಲ, ಶೂರನೂ ಅಲ್ಲ ಎಂಬ ಅಲ್ಲಮಪ್ರಭುಗಳ ಮಾತುಗಳು ಅವರಿಗೆ ಹೊಂದಿಕೆಯಾಗುತ್ತದೆ.
ಮಾತೆತ್ತಿದರೆ ನಾವು 123 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಜೆಡಿಎಸ್ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಸಾಧ್ಯವೇ ಇಲ್ಲ. ನಾವಿದ್ದಾಗಲೇ 59 ಸ್ಥಾನ ಗೆದ್ದಿತ್ತು, ನಾವು ಬಿಟ್ಟ ಮೇಲೆ 29 ಸ್ಥಾನ ಬಂದಿತ್ತು. ಈ ಬಾರಿ 20 ರಿಂದ 22 ಜನ ಗೆದ್ದರೆ ಅದೇ ಹೆಚ್ಚು. ಇಂಥವರ ಕೈಗೆ ಅಧಿಕಾರ ಕೊಡುತ್ತೀರ?
ಬಿಜೆಪಿ ಒಂದು ಕೋಮುವಾದಿ ಪಕ್ಷ. ಧರ್ಮ ಧರ್ಮಗಳ ನಡುವೆ ಸಂಘರ್ಷ ಉಂಟುಮಾಡಿ, ಸಮಾಜ ಒಡೆಯುವ ಕೆಲಸ ಮಾಡಿದ್ದಾರೆ. ಹಿಜಾಬ್, ಹಲಾಲ್, ಜಾತ್ರೆಗಳಲ್ಲಿ ವ್ಯಾಪಾರ ನಿರ್ಬಂಧ ಮಾಡಿ ಯುವಜನರ ಮನಸುಗಳನ್ನು ಒಡೆದಿದ್ದಾರೆ, ಹಾಗಾಗಿಯೇ ರಾಹುಲ್ ಗಾಂಧಿ ಅವರು ಒಡೆದ ಸಮಾಜವನ್ನು ಜೋಡಿಸಬೇಕು ಎಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3570 ಕಿ.ಮೀ ಉದ್ದದ ಭಾರತ್ ಜೋಡೋ ಯಾತ್ರೆ ಮೂಲಕ ನಡಿಗೆ ಕೈಗೊಂಡಿದ್ದಾರೆ. ದೇಶದಲ್ಲಿ ಸಹೋದರತ್ವ, ಸಾಮರಸ್ಯ ಮೂಡಬೇಕು ಎಂಬುದು ರಾಹುಲ್ ಗಾಂಧಿ ಅವರ ಉದ್ದೇಶ.
ಮಂಡ್ಯದಲ್ಲಿ 4 ಲಕ್ಷದ 80 ಸಾವಿರ ಜಾನುವಾರುಗಳಿವೆ. ಚರ್ಮಗಂಟು ರೋಗದಿಂದ ಮಂಡ್ಯದಲ್ಲಿ ಸುಮಾರು 5000 ಜಾನುವಾರುಗಳು ನರಳುತ್ತಿವೆ. ವೈದ್ಯರು, ಔಷಧಿ, ಲಸಿಕೆ ಈ ಯಾವುದೂ ಇಲ್ಲದೆ ಹಾಲಿನ ಉತ್ಪಾದನೆಯ ಪ್ರಮಾಣ ಕಡಿಮೆಯಾಗಿದೆ. ಜೂನ್ ನಲ್ಲಿ ರಾಜ್ಯದಲ್ಲಿ ನಿತ್ಯ ಉತ್ಪಾದನೆಯಾಗುತ್ತಿದ್ದ ಹಾಲು 94 ಲಕ್ಷ ಲೀಟರ್, ಈಗ ಅದು 76 ಲಕ್ಷ ಲೀಟರ್ ಗೆ ಇಳಿಕೆ ಕಂಡಿದೆ. ಮಂಡ್ಯ ಜಿಲ್ಲೆಯೊಂದರಲ್ಲೇ ಒಂದು ಲಕ್ಷ ಲೀಟರ್ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಬೊಮ್ಮಾಯಿ ಸರ್ಕಾರದ ಪಶುಸಂಗೋಪನಾ ಸಚಿವರಿಗೆ ಈ ಯಾವ ಲೆಕ್ಕವೂ ಗೊತ್ತಿಲ್ಲ. ಸದನದಲ್ಲಿ ಪ್ರಶ್ನೆ ಕೇಳಿದ್ರೆ ಉತ್ತರ ಕೊಡದೆ ತಪ್ಪಿಸಿಕೊಂಡು ಓಡಿಹೋದರು. ಹಿಂದೆ ನಾವು ಅಧಿಕಾರದಲ್ಲಿದ್ದಾಗ ಒಂದು ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹಧನವನ್ನು ನೀಡುತ್ತಿದ್ದೆವು, ಕುಮಾರಸ್ವಾಮಿ ಬಂದಮೇಲೆ ಇದನ್ನು ಹೆಚ್ಚು ಮಾಡಿಲ್ಲ, ಮತ್ತೆ ನಾವು ಅಧಿಕಾರಕ್ಕೆ ಬಂದ ಮೇಲೆ 6ರೂ. ಗೆ ಹೆಚ್ಚು ಮಾಡುತ್ತೇವೆ.
ಹಾಲು ಉತ್ಪಾದನಾ ಘಟಕದಲ್ಲೇ ಲಂಚದ ಹಾವಳಿ ಇದೆ. ಬಡವರ ರಕ್ತವನ್ನು ಹೀರಿ ಸರ್ಕಾರ ನಡೆಸುತ್ತಿದ್ದಾರೆ. ಹಾಲು, ಮೊಸರು, ಮಜ್ಜಿಗೆ, ಪೆನ್ನು, ಪುಸ್ತಕ, ಪೆಟ್ರೋಲ್, ಡೀಸೆಲ್, ಗ್ಯಾಸ್, ಗೊಬ್ಬರ, ಸಿಮೆಂಟ್, ಅಡುಗೆ ಎಣ್ಣೆ ಮೇಲೆ ಅತ್ಯಧಿಕ ಜಿಎಸ್‌ಟಿ ಹಾಕಿ ಜನರ ಲೂಟಿ ಮಾಡುತ್ತಿದ್ದಾರೆ. ಮನಮೋಹನ್ ಸಿಂಗ್ ಅವರ ಸರ್ಕಾರ ಇದ್ದಾಗ 414 ರೂ. ಇದ್ದ ಗ್ಯಾಸ್ ಬೆಲೆ ಇಂದು 1,150 ರೂ. ಆಗಿದೆ. ನಾಡಿನ ಮಹಿಳೆಯರಿಗೆ ಇಷ್ಟು ಹಣ ಕೊಡಲು ಹೊಟ್ಟೆ ಉರಿಯುವುದಿಲ್ವಾ? ತಿಗಣೆಗಳ ರೀತಿ ಜನರ ರಕ್ತ ಕುಡಿಯುತ್ತಿದ್ದಾರೆ. ಈ ಸರ್ಕಾರ ಅಲಿಬಾಬಾ ಮತ್ತು 40 ಮಂದಿ ಕಳ್ಳರ ಗುಂಪು.
ಈ ಭ್ರಷ್ಟ, ರೈತ ವಿರೋಧಿ, ಜನವಿರೋಧಿ ಸರ್ಕಾರವನ್ನು ಕಿತ್ತುಹಾಕಿ, ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡುವ ಕೆಲಸ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.