ಮತ್ತೆ ಮೈಸೂರಿಗೆ ಸ್ವಚ್ಛತಾ ನಗರಿ ಎಂಬ ಗರಿ ಮೂಡುವುದೇ? ನಾಳೆ ಗೊತ್ತಾಗಲಿದೆ

ನಾಳೆ ಬೆಳಿಗ್ಗೆ 11ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi)  2020ನೇ ಸಾಲಿನ ಸ್ವಚ್ಛತಾ ಸಮೀಕ್ಷೆ  ಫಲಿತಾಂಶಗಳನ್ನು ಪ್ರಕಟಿಸಲಿದ್ದಾರೆ. 

Yashaswini V Yashaswini V | Updated: Aug 19, 2020 , 08:10 AM IST
ಮತ್ತೆ ಮೈಸೂರಿಗೆ ಸ್ವಚ್ಛತಾ ನಗರಿ ಎಂಬ ಗರಿ ಮೂಡುವುದೇ? ನಾಳೆ ಗೊತ್ತಾಗಲಿದೆ

ನವದೆಹಲಿ: ರಾಜ್ಯದ ಸಾಂಸ್ಕೃತಿಕ ನಗರ, ಸ್ವಚ್ಚತಾ ನಗರ, ರಾಜ್ಯದ ಮೂರನೇ ಅತಿದೊಡ್ಡ ನಗರ ಎಂಬೆಲ್ಲಾ ಖ್ಯಾತಿಗಳಿಸಿರುವ ಮೈಸೂರು (Mysore) ಈ ಬಾರಿ ಮತ್ತೊಮ್ಮೆ 'ಸ್ವಚ್ಛ ನಗರ' (Clean City) ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆಯೇ ಎಂಬುದು ನಾಳೆ ಗೊತ್ತಾಗಲಿದೆ.

ನಾಳೆ ಬೆಳಿಗ್ಗೆ 11ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi)  2020ನೇ ಸಾಲಿನ ಸ್ವಚ್ಛತಾ ಸಮೀಕ್ಷೆ  ಫಲಿತಾಂಶಗಳನ್ನು ಪ್ರಕಟಿಸಲಿದ್ದಾರೆ. ಇದು ದೇಶದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯ ಐದನೇ ಆವೃತ್ತಿಯಾಗಿದೆ.

ಸ್ವಚ್ಛತಾ ಸಮೀಕ್ಷೆ 2020 ಫಲಿತಾಂಶಗಳ ಡ್ಯಾಶ್ಬೋರ್ಡ್ ಗೆ ಅವರು ಚಾಲನೆ ನೀಡಲಿದ್ದಾರೆ. ಒಟ್ಟು 4,242 ನಗರಗಳು, 62 ಕಂಟೋನ್ಮೆಂಟ್ ಮಂಡಳಿಗಳು ಮತ್ತು 92  ಪಟ್ಟಣಗಳ 1.87 ಕೋಟಿ ಜನರು ಇ ಸಮೀಕ್ಷೆ ಯಲ್ಲಿ ಭಾಗವಹಿಸಿದ್ದಾರೆ‌. ಇದು ವಿಶ್ವದ ಅತಿದೊಡ್ಡ ಸ್ವಚ್ಛತಾ ಸಮೀಕ್ಷೆ ಎನಿಸಿಕೊಂಡಿದೆ. ಇದು 28 ದಿನಗಳ ಸಮಯದಲ್ಲಿ ಹೊಸ ಮಾದರಿಯಲ್ಲಿ ನಡೆಸಿರುವ ಇದು ಸಂಪೂರ್ಣವಾದ ಡಿಜಿಟಲ್ ಸಮೀಕ್ಷೆಯಾಗಿದೆ.

ಸ್ವಚ್ಚತಾ ವಿಷಯದಲ್ಲಿ ಉತ್ತಮ ಕೆಲಸ ಮಾಡಿರುವ ನಗರಗಳು ಮತ್ತು ರಾಜ್ಯಗಳಿಗೆ ಒಟ್ಟು 129 ಪ್ರಶಸ್ತಿಗಳನ್ನು ನೀಡಲಾಗುವುದು. ಇದೇ ವೇಳೆ ಸ್ವಚ್ಛ ಭಾರತ ಅಭಿಯಾನ -ನಗರ (ಎಸ್ಬಿಎಂ-ಯು) ಅಡಿಯಲ್ಲಿ ದೇಶದ ವಿವಿಧ ಭಾಗಗಳ ಆಯ್ದ ಫಲಾನುಭವಿಗಳು, ಸ್ವಚ್ಛಗ್ರಾಹಿಗಳು ಮತ್ತು ಪೌರ ಕಾರ್ಮಿಕರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.

ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಭಾರತದಲ್ಲಿ ಸ್ವಚ್ಛ ನಗರಗಳಾಗಲು ಆರೋಗ್ಯಕರ ಸ್ಪರ್ಧಾ ಮನೋಭಾವವನ್ನು ಹುಟ್ಟುಹಾಕಲು ಹಾಗೂ ಸ್ವಚ್ಚತಾ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯ ನಾಗರಿಕರು ಪಾಲ್ಗೊಳ್ಳುವಂತೆ ಮಾಡಲು ಈ ಸ್ವಚ್ಛತಾ ಸಮೀಕ್ಷೆಯನ್ನು ನಡೆಸಲಾಗುತ್ತಿದೆ.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಜನವರಿ 2016ರಲ್ಲಿ 73 ಪ್ರಮುಖ ನಗರಗಳ ನಡುವೆ  ಸ್ವಚ್ಛತಾ ಸಮೀಕ್ಷೆ ನಡೆಸಿತ್ತು. 2017ರಲ್ಲಿ 434 ನಗರಗಳ ನಡುವೆ ಸಮೀಕ್ಷೆ  ನಡೆಸಿತ್ತು. 2018ರಲ್ಲಿ 4,203 ನಗರಗಳೊಂದಿಗೆ ಸ್ವಚ್ಛತಾ ಸಮೀಕ್ಷೆ ನಡೆಸಿತ್ತು‌. 2019ರಲ್ಲಿ 4,237 ನಗರಗಳನ್ನು ಒಳಗೊಂಡ ಸ್ವಚ್ಛತಾ ಸಮೀಕ್ಷೆ ನಡೆಸಿದೆ. ಸಮೀಕ್ಷೆಯ ಮೊದಲ ಆವೃತ್ತಿಯಲ್ಲಿ ಮೈಸೂರು ಭಾರತದ ಅತಿ ಸ್ವಚ್ಛ ನಗರ ಪ್ರಶಸ್ತಿಯನ್ನು ಪಡೆದರೆ, ಇಂದೋರ್ ಸತತ ಮೂರು ವರ್ಷಗಳಿಂದ (2017, 2018, 2019) ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. 

•    1.7 ಕೋಟಿ ನಾಗರಿಕರು ಸ್ವಚ್ಛತಾ ಆ್ಯಪ್ನಲ್ಲಿ ನೋಂದಾಯಿಸಿಕೊಂಡಿದ್ದರು.
•    ಸಾಮಾಜಿಕ ಮಾಧ್ಯಮದಲ್ಲಿ 11 ಕೋಟಿಗೂ ಹೆಚ್ಚು ಅನಿಸಿಕೆಗಳು ಬಂದಿವೆ.
•    5.5 ಲಕ್ಷಕ್ಕೂ ಹೆಚ್ಚು ನೈರ್ಮಲ್ಯ ಕಾರ್ಮಿಕರು ಸಮಾಜ ಕಲ್ಯಾಣ ಯೋಜನೆಗಳೊಂದಿಗೆ ಸೇರಿಕೊಂಡಿದ್ದಾರೆ. 84,000ಕ್ಕೂ ಹೆಚ್ಚು ಅನೌಪಚಾರಿಕ ತ್ಯಾಜ್ಯ ಆಯುವವರು ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದಾರೆ.
•    21,000ಕ್ಕೂ ಹೆಚ್ಚು ತ್ಯಾಜ್ಯ ಸ್ಥಳಗಳನ್ನು ಗುರುತಿಸಲಾಗಿದೆ.

ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (ಯುಎಸ್ಎಐಡಿ), ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ (ಬಿಎಂಜಿಎಫ್), ಗೂಗಲ್ ಸೇರಿದಂತೆ ಸ್ವಚ್ಛ ಭಾರತ ಅಭಿಯಾನ – ನಗರ ಪ್ರಯಾಣದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯೊಂದಿಗೆ ಸಹಭಾಗಿಯಾಗಿರುವ ಸಮೀಕ್ಷೆ ನಡೆಸಲಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi)  2020ನೇ ಸಾಲಿನ ಸ್ವಚ್ಛತಾ ಸಮೀಕ್ಷೆ  ಫಲಿತಾಂಶ ಪ್ರಕಟಿಸುವ ಕಾರ್ಯಕ್ರಮದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ, ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿ ದುರ್ಗಾಶಂಕರ್ ಮಿಶ್ರಾ, ವಿವಿಧ ನಗರಗಳ ಮೇಯರ್ ಗಳು, ರಾಜ್ಯಗಳ ಅಭಿಯಾನ ನಿರ್ದೇಶಕರು, ಪುರಸಭೆ ಆಯುಕ್ತರು ಮತ್ತು ನಗರ ಪ್ರದೇಶದ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯ ಇತರ ಪಾಲುದಾರರು ಪಾಲ್ಗೊಳ್ಳಲಿದ್ದಾರೆ.