ಬೆಂಗಳೂರು: ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ಹೊಸನಗರ ರಾಮಚಂದ್ರಾಪುರ ಮಠದ ಸುಪರ್ದಿಗೆ ವಹಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ರಾಜ್ಯ ಹೈಕೋರ್ಟ್ ರದ್ದುಪಡಿಸಿದೆ.
2008ರ ಆಗಸ್ಟ್ 12ರಂದು ಅಂದಿನ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿತ್ತು. ಈ ವೇಳೆ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಬಾಲಕೃಷ್ಣ ದೀಕ್ಷಿತ್ ಎಂಬುವರು ರಾಜ್ಯ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.
ಪಿಐಎಲ್ ಅನ್ನು ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗಿಯ ಪೀಠ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಶುಕ್ರವಾರ ಈ ಬಗ್ಗೆ ತನ್ನ ತೀರ್ಪು ಪ್ರಕಟಿಸಿದ್ದು, ರಾಜ್ಯದ ಸರ್ಕಾರದ ಆದೇಶದಲ್ಲಿ ಲೋಪದೋಷಗಳಿವೆ. ಮಹಾಬಲೇಶ್ವರ ದೇವಸ್ಥಾನವನ್ನು ಧಾರ್ಮಿಕ ದತ್ತಿ ಪಟ್ಟಿಯಿಂದ ಕೈಬಿಟ್ಟಿದ್ದು ಸರಿಯಲ್ಲ. ಹೀಗಾಗಿ, ಬಿ.ಎಸ್. ಯಡಿಯೂರಪ್ಪ ಸರ್ಕಾರದ ಆದೇಶವನ್ನು ರದ್ದುಗೊಳಿಸುತ್ತಿದ್ದೇವೆ. ಗೋಕರ್ಣ ದೇವಸ್ಥಾನವು ಧಾರ್ಮಿಕ ದತ್ತಿ ದೇಗುಲವಾಗಿ ಮುಂದುವರಿಯಲಿ ಎಂದು ಹೈಕೋರ್ಟ್ ಪೀಠ ತನ್ನ 256 ಪುಟಗಳ ತೀರ್ಪಿನಲ್ಲಿ ತಿಳಿಸಿದೆ.
ಗೋಕರ್ಣ ದೇವಸ್ಥಾನಕ್ಕೆ ತತ್ಕ್ಷಣವೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಉಸ್ತುವಾರಿ ಸಮಿತಿ ರಚನೆಯಾಗಬೇಕು ಎಂದು ಆದೇಶಿಸಿದ ನ್ಯಾಯಾಲಯವು, ಸಮಿತಿಯ ಸಲಹೆಗಾರರಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರನ್ನು ನೇಮಿಸಿದೆ. ಸೆಪ್ಟೆಂಬರ್ 10ರಂದು ಉಸ್ತುವಾರಿ ಸಮಿತಿ ಅಸ್ತಿತ್ವಕ್ಕೆ ಬರಲಿದ್ದು, ಅಲ್ಲಿಯವರೆಗೂ ಗೋಕರ್ಣ ಕ್ಷೇತ್ರವು ರಾಮಚಂದ್ರಾಪುರ ಮಠದ ಸುಪರ್ದಿಯಲ್ಲೇ ಇರಲಿದೆ.