ಕೊಡಗಿನ ಜನರ ನೆರವಿಗೆ ಮುಂದಾದ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು

ಉಸ್ತುವಾರಿ ಸಚಿವ‌ ಸಿ.ಎಸ್. ಪುಟ್ಟರಾಜು ನೇತೃತ್ವದಲ್ಲಿ ಮಂಡ್ಯ ಜನಪ್ರತಿನಿಧಿಗಳು ಇಂದು  ಕೊಡಗಿಗೆ

Last Updated : Aug 20, 2018, 07:45 AM IST
ಕೊಡಗಿನ ಜನರ ನೆರವಿಗೆ ಮುಂದಾದ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು title=

ಮಂಡ್ಯ: ಕೊಡಗಿನಲ್ಲಿ ಸುರಿಯುತ್ತಿರುವ‌ ಮಹಾಮಳೆಗೆ ಜನ ಸಂಕಷ್ಟಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಕೊಡಗಿನ ಜನರ ನೆರವಿಗೆ ಮಂಡ್ಯ ಜಿಲ್ಲೆಯ ಜನತೆ ಮುಂದಾಗಿದೆ. ಈ ಉದ್ದೇಶದಿಂದ ಸಣ್ಣ ನೀರಾವರಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ‌.ಎಸ್. ಪುಟ್ಟರಾಜು ಅವರ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ಶಾಸಕರುಗಳು ಹಾಗೂ ಇತರ ಜನಪ್ರತಿನಿಧಿಗಳು ಕೊಡಗು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯಲು ಸೋಮವಾರ ಮಡಿಕೇರಿಗೆ ತೆರಳುತ್ತಿದ್ದಾರೆ. 

ಸೋಮವಾರ‌ ಆ.20 ರಂದು ಬೆಳಗ್ಗೆ 8.30ರ ಸುಮಾರಿಗೆ ಶ್ರೀರಂಗಪಟ್ಟಣದಿಂದ ತೆರಳುವ ನಿಯೋಗ, ಪಾಲಹಳ್ಳಿ, ಪಂಪ್ ಹೌಸ್ ಮಾರ್ಗವಾಗಿ ಬೆಳಗ್ಗೆ 9.00 ಗಂಟೆಗೆ ಮೈಸೂರಿನ ಇಲವಾಲ ಗ್ರಾಮದಲ್ಲಿ ಸೇರುವರು. ಅಲ್ಲಿಂದ ಕೊಡಗು ಜಿಲ್ಲೆ ಕಡೆಗೆ ಪ್ರಯಾಣ ಬೆಳೆಸುವರು. 

ಕೊಡಗಿನ ಜನರ ಕಷ್ಟಗಳಿಗೆ ಸ್ಪಂದಿಸಬೇಕಾಗಿದೆ. ಆದ್ದರಿಂದ ಅಲ್ಲಿನ ಬೇಕು-ಬೇಡಗಳನ್ನು ತಿಳಿಯಬೇಕಾಗಿದೆ. ಇದಕ್ಕಾಗಿ ಕೊಡಗು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಲು ತೆರಳುತ್ತಿರುವುದಾಗಿ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮಂಡ್ಯ ಹಾಲು ಉತ್ಪಾದಕರ‌ ಸಂಘಗಳ ಒಕ್ಕೂಟದಿಂದ ಹಾಲು ರವಾನೆ ಮಾಡಲು ಈಗಾಗಲೆ ಕ್ರಮ ವಹಿಸಲಾಗಿದೆ. ಇತರೆ ಎಲ್ಲಾ ರೀತಿಯ ನೆರವನ್ನು ಸಹ ಮಂಡ್ಯ ಜಿಲ್ಲೆಯಿಂದ ನೀಡಲು ಸಿದ್ಧರಿದ್ದೇವೆ ಎಂದು ಸಚಿವ ಪುಟ್ಟರಾಜು ತಿಳಿಸಿದ್ದಾರೆ.

Trending News