ಮೈಸೂರು-ಊಟಿ ಹೆದ್ದಾರಿ ಮುಳುಗಡೆ; ಸಂಚಾರ ಅಸ್ತವ್ಯಸ್ತ

ಕಪಿಲಾ ನದಿ ತುಂಬಿ ಹರಿದ ಪರಿಣಾಮ ಮೈಸೂರು-ಊಟಿ ನಡುವಿನ ಹೆದ್ದಾರಿ ಸಂಪೂರ್ಣ ಮುಳುಗಡೆಯಾಗಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. 

Updated: Aug 10, 2018 , 04:34 PM IST
ಮೈಸೂರು-ಊಟಿ ಹೆದ್ದಾರಿ ಮುಳುಗಡೆ; ಸಂಚಾರ ಅಸ್ತವ್ಯಸ್ತ

ಮೈಸೂರು: ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಪಿಲಾ ನದಿ ತುಂಬಿ ಹರಿದ ಪರಿಣಾಮ ಮೈಸೂರು-ಊಟಿ ನಡುವಿನ ಹೆದ್ದಾರಿ ಸಂಪೂರ್ಣ ಮುಳುಗಡೆಯಾಗಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. 

ಮೈಸೂರು ಜಿಲ್ಲೆಯ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದ ಬಳಿ ಹೆದ್ದಾರಿ ಸಂಪೂರ್ಣ ನೀರಿನಿಂದ ಆವೃತವಾಗಿದ್ದು, ಮಲ್ಲನಮೂಲ ಬಳಿ ಹೆದ್ದಾರಿ ಮೇಲೆ ನೀರು ಹರಿಯುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಇನ್ನು ಹೆದ್ದಾರಿ ಮೇಲೆ ನೀರು ಹರಿಯುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಬದಲಿ ಮಾರ್ಗದ ಮೂಲಕ ಪ್ರಯಾಣಿಕರಿಗೆ ಊರಿಗೆ ತೆರಳಲು ಸೂಚನೆ ನೀಡಿದ್ದಾರೆ. 

ಸುಮಾರು 40 ವರ್ಷಗಳ ಬಳಿಕ ಮೈಸೂರು ಊಟಿ ಹೆದ್ದಾರಿ ಮುಳುಗಡೆಯಾಗಿದ್ದು, ಮೈಸೂರಿನಿಂದ ಬಂದು ಕಡಕೋಳ ಬಳಿಯಿಂದ ಎಡಕ್ಕೆ ತಾಂಡ ಕೈಗಾರಿಕಾ ಪ್ರದೇಶದ ಬಳಿ ನಂಜನಗೂಡಿನತ್ತ ತೆರಳಲು ಮಾರ್ಗ ಕಲ್ಪಿಸಲಾಗಿದ್ದು, ನಂಜನಗೂಡಿನಿಂದ ಮೈಸೂರಿಗೆ ಬರಲು ಇಮ್ಮಾವು, ಉಳಿಮಾವು ಮೂಲಕ ಬರಲು ಸೂಚಿಸಲಾಗಿದೆ.