"ಬಿಜೆಪಿ ಸರ್ಕಾರ ಕಿತ್ತೊಗೆಯುವವರೆಗೂ ನಮ್ಮ ಹೋರಾಟ ಮುಂದುವರಿಯಬೇಕು"

ರಾಷ್ಟ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಿತ್ತೊಗೆಯುವವರೆಗೂ ನಮ್ಮ ಹೋರಾಟ ಮುಂದುವರಿಯಬೇಕು. ನಮ್ಮ ಹೋರಾಟ ಶಾಂತಿಯುತವಾಗಿರಬೇಕು. ಗಾಂಧಿ ತತ್ವ ಹಾಗೂ ನಾಯಕತ್ವದಲ್ಲಿ ಶಾಂತಿಯುತ ಹೋರಾಟ ಮಾಡಿದಂತೆ ನಾವು ಹೋರಾಟ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Written by - Zee Kannada News Desk | Last Updated : Jul 21, 2022, 05:11 PM IST
  • ಇಡಿ ಬರಲಿ, ಐಟಿ ಬರಲಿ, ಸಿಬಿಐ ಬರಲಿ, ಬಿಜೆಪಿ ದಂಡೇ ಬರಲಿ,
  • ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಮುಟ್ಟಲು ಸಾಧ್ಯವಿಲ್ಲ.
  • ಇದೇ ಕಾಂಗ್ರೆಸ್ ಪಕ್ಷದ ಶಕ್ತಿ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ, ದೇಶಕ್ಕೆ ತ್ರಿವರ್ಣ ಧ್ವಜ ತಂದುಕೊಟ್ಟ, ರಾಷ್ಟ್ರ ಗೀತೆ ತಂದುಕೊಟ್ಟ, ದೇಶಕ್ಕೆ ಅಭಿವೃದ್ಧಿ ಕೊಟ್ಟ ಪಕ್ಷ ಕಾಂಗ್ರೆಸ್.
"ಬಿಜೆಪಿ ಸರ್ಕಾರ ಕಿತ್ತೊಗೆಯುವವರೆಗೂ ನಮ್ಮ ಹೋರಾಟ ಮುಂದುವರಿಯಬೇಕು" title=

ಬೆಂಗಳೂರು: ರಾಷ್ಟ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಿತ್ತೊಗೆಯುವವರೆಗೂ ನಮ್ಮ ಹೋರಾಟ ಮುಂದುವರಿಯಬೇಕು. ನಮ್ಮ ಹೋರಾಟ ಶಾಂತಿಯುತವಾಗಿರಬೇಕು. ಗಾಂಧಿ ತತ್ವ ಹಾಗೂ ನಾಯಕತ್ವದಲ್ಲಿ ಶಾಂತಿಯುತ ಹೋರಾಟ ಮಾಡಿದಂತೆ ನಾವು ಹೋರಾಟ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಇಡಿ ಬರಲಿ, ಐಟಿ ಬರಲಿ, ಸಿಬಿಐ ಬರಲಿ, ಬಿಜೆಪಿ ದಂಡೇ ಬರಲಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಮುಟ್ಟಲು ಸಾಧ್ಯವಿಲ್ಲ. ಇದೇ ಕಾಂಗ್ರೆಸ್ ಪಕ್ಷದ ಶಕ್ತಿ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ, ದೇಶಕ್ಕೆ ತ್ರಿವರ್ಣ ಧ್ವಜ ತಂದುಕೊಟ್ಟ, ರಾಷ್ಟ್ರ ಗೀತೆ ತಂದುಕೊಟ್ಟ, ದೇಶಕ್ಕೆ ಅಭಿವೃದ್ಧಿ ಕೊಟ್ಟ ಪಕ್ಷ ಕಾಂಗ್ರೆಸ್.

ನಾವೆಲ್ಲರೂ ಕಾಂಗ್ರೆಸ್ ಕುಟುಂಬದ ಮಕ್ಕಳು. ನನಗೆ ಇಡಿ, ತಿಹಾರ್ ಜೈಲು, ಐಟಿ, ಸಿಬಿಐನ ಸ್ವಲ್ಪ ಅನುಭವವಿದೆ. ನಾನು ರಾಹುಲ್ ಗಾಂಧಿ ಅವರಿಗೆ ಒಂದು ಸಣ್ಣ ಸಂದೇಶ ಕಳುಹಿಸಿದ್ದೆ. ಅವರು ನನಗೆ ಕರೆ ಮಾಡಿದರು. ಹೊಸ ರೋಗಿಯು ಹಳೆ ರೋಗಿಯ ಜತೆ ಮಾತನಾಡಬೇಕು ಎಂದು ಹೇಳಿದರು. ಆಗ ನಾವು ಕೆಲವು ವಿಚಾರಗಳನ್ನು ಹಂಚಿಕೊಂಡೆವು. ನಾನು ಹಾಗೂ ಸಿದ್ದರಾಮಯ್ಯನವರು ದೆಹಲಿಗೆ ಹೋದಾಗ ಇಡಿ ವಿಚಾರಣೆ ಹೇಗಿತ್ತು ಎಂದು ಕೇಳಿದೆ. ಅವರು ಯಾವುದೇ ರೀತಿಯಲ್ಲೂ ಮಾನಸಿಕವಾಗಿ ಕುಗ್ಗಿರಲಿಲ್ಲ.

ನಿರಂತರವಾಗಿ ವಿಚಾರಣೆ ನಡೆಸಿದರೂ ನೀವು ಕುಗ್ಗಿಲ್ಲವಲ್ಲ ಯಾಕೆ ಎಂದು ಇಡಿ ಅಧಿಕಾರಿಗಳು ರಾಹುಲ್ ಗಾಂಧಿ ಅವರನ್ನು ಕೇಳಿದರಂತೆ. ಅದಕ್ಕೆ ಅವರು ಇಲ್ಲಿ ಕೇವಲ ರಾಹುಲ್ ಗಾಂಧಿ ಒಬ್ಬ ಕೂತಿಲ್ಲ. ದೇಶದ ಕೋಟ್ಯಂತರ ಕಾಂಗ್ರೆಸಿಗರು ಕೂತಿದ್ದಾರೆ ಎಂದು ಉತ್ತರಿಸಿದರಂತೆ.

ಇಂದು ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರು ಮಾತ್ರ ಅಲ್ಲಿ ಕೂತಿಲ್ಲ, ದೇಶದ ಎಲ್ಲ ಕಾಂಗ್ರೆಸಿಗರೂ ಕೂಡ ಅವರ ಜತೆ ಕೂತಿದ್ದಾರೆ. ನಾವು ನಿಮ್ಮ ಜತೆ ಇದ್ದೇವೆ ಎಂದು ಹೇಳಲು ಇಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ನಾಳೆ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ.

ಈ ಹೋರಾಟ ದೇಶಕ್ಕಾಗಿ. ಈ ಹೋರಾಟ ನಮ್ಮ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಬೆಂಬಲ ನೀಡಲು. ನಿಮ್ಮ ಜತೆ ನಾವಿದ್ದೇವೆ ಎಂದು ಧೈರ್ಯ ತುಂಬಲು.

ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ನೊಟೀಸ್ ಗೆ ಹೆದರುವವರಲ್ಲ. ಸೋನಿಯಾ ಗಾಂಧಿ ಅವರು ನಾನು ತಿಹಾರ್ ಜೈಲಿನಲ್ಲಿದ್ದಾಗ ಒಂದೂವರೆ ತಾಸು ಕೂತು ನನ್ನ ಜತೆ ಮಾತನಾಡಿ ನನಗೆ ಶಕ್ತಿ ತುಂಬಿದ್ದರು. ಆಗ ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಇರಲಿಲ್ಲ. ಕಾಂಗ್ರೆಸ್ ಕಾರ್ಯಕರ್ತನ ಜತೆಗೆ ನಾನಿದ್ದೇನೆ ಎಂದು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಧೈರ್ಯ ತುಂಬಿದ್ದರು. ಇಂದು ನಾವು ಅವರಿಗೆ ಧೈರ್ಯ ತುಂಬಬೇಕು.

ಪಕ್ಷಕ್ಕೆ ಕಾರ್ಯಕರ್ತರು ನೀಡಿದ ಹಣವನ್ನು ನಾವು ದೆಹಲಿಗೆ ಕಳುಹಿಸುತ್ತೇವೆ. ಅದೇ ರೀತಿ ನ್ಯಾಷನಲ್ ಹೆರಾಲ್ಡ್ ಸಂಸ್ಥೆ ಉಳಿಸಲು, ಅಲ್ಲಿ ಕೆಲಸ ಮಾಡುತ್ತಿದ್ದವರಿಗೆ ವೇತನ ನೀಡಲು ಕಾಂಗ್ರೆಸಿಗರೆಲ್ಲರೂ ಸೇರಿ ಹಣವನ್ನು ದೇಣಿಗೆ ರೂಪದಲ್ಲಿ ಕೊಟ್ಟರು. ಆಗ ಸುಬ್ರಮಣಿಯನ್ ಸ್ವಾಮಿ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದರು. ಚುನಾವಣಾ ಆಯೋಗ ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ತಿಳಿಸಿತು. ಆದಾಯ ತೆರಿಗೆ ಇಲಾಖೆಯೂ ಇದರಲ್ಲಿ ತಪ್ಪಿಲ್ಲ ಎಂದು ತಿಳಿಸಿತು ಸಂಸತ್ತಿನಲ್ಲಿ ಅರುಣ್ ಜೇಟ್ಲಿ ಇದರಲ್ಲಿ ಅಕ್ರಮವಿಲ್ಲ ಎಂದರು.

ಇಷ್ಟೆಲ್ಲಾ ಆದ ಮೇಲೂ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ಹೆದರಿಸಿದರೆ, ಎಲ್ಲರೂ ಬಿಜೆಪಿಗೆ ಬರುತ್ತಾರೆ ಎಂದು ಭಾವಿಸಿದರೆ, ಇದು ಕೇವಲ ನಿಮ್ಮ ಭ್ರಮೆ. ನಾವೆಲ್ಲರೂ ಮಹಾತ್ಮಾ ಗಾಂಧಿ, ನೆಹರೂ, ಸರ್ದಾರ್ ಪಟೇಲ್, ಅಂಬೇಡ್ಕರ್, ಮೌಲಾನ ಅಜಾದ್ ಸೇರಿದಂತೆ ದೇಶಕ್ಕೆ ತ್ಯಾಗ ಮಾಡಿದವರ ಅನುಯಾಯಿಗಳು.

ಈ ದೇಶಕ್ಕೆ ಬಿಜೆಪಿಯವರು, ಮೋದಿ, ಅಮಿತ್ ಶಾ ಸ್ವಾತಂತ್ರ್ಯ ತಂದುಕೊಟ್ಟಿದ್ದರೇ? ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕನಿಷ್ಠ 1 ಲಕ್ಷ ಜನ ಆಗಸ್ಟ್ 15 ರಂದು ಮೆರವಣಿಗೆ ಹೋಗಬೇಕು. 7 ಕಿ.ಮೀ ಹೆಜ್ಜೆ ಹಾಕಬೇಕು. ನಾಳೆ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ ಮಾಡಬೇಕು.

ನನ್ನ ವಿರುದ್ಧ ಪ್ರಕರಣ ದಾಖಲಾಗಿ 5 ವರ್ಷ ಆಯಿತು. ಜೈಲಿಗೆ ಹೋಗಿ 3 ವರ್ಷ ಆಯಿತು. ಈಗ ನನಗೆ ನಿತ್ಯ ಪ್ರೇಮ ಪತ್ರಗಳು ಬರುತ್ತಿವೆ.ಚುನಾವಣೆ ಸಂದರ್ಭದಲ್ಲಿ ಒಂದು ವರ್ಷ ನನಗೆ ವಿರಾಮ ನೀಡಿ ನಂತರ ನಾನು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಪತ್ರ ಬರೆದಿದ್ದೇನೆ. ಮೂರು ವರ್ಷದಿಂದ ಆರೋಪ ಪಟ್ಟಿ ದಾಖಲಿಸದೇ ಈಗ ಸಲ್ಲಿಕೆ ಮಾಡಿ ವಿಚಾರಣೆಗೆ ಕರೆಯುತ್ತಿದ್ದಾರೆ. ನನ್ನ ಜತೆ ಇರುವವರಿಗೆಲ್ಲ ವಿಚಾರಣೆಗೆ ಕರೆದು ಕಿರುಕುಳ ನೀಡುತ್ತಿದ್ದಾರೆ. ಅದೇ ರೀತಿ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಅವರಿಗೂ ಕಿರುಕುಳ ನೀಡಲು ಹೊರಟಿದ್ದಾರೆ. ಇದರ ವಿರುದ್ಧ ಹೋರಾಟ ಮಾಡೋಣ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡೋಣ ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News