ತುಮಕೂರು: ಮಿಲಿಟರಿ ಕ್ಯಾಂಟೀನ್ ಹಾಗೂ ಆಸ್ಪತ್ರೆ ಮಾದರಿಯಲ್ಲಿ ರಾಜ್ಯದಲ್ಲಿ ಪೊಲೀಸ್ ಕ್ಯಾಂಟೀನ್ ಹಾಗೂ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ತುಮಕೂರು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿ್ಗಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಎಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಸೆ.23ರಂದು ಹಮ್ಮಿಕೊಂಡಿದ್ದ 20ನೇ ವರ್ಷದ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಕ್ಯಾಂಟೀನ್ ವ್ಯವಸ್ಥೆ ಇದೆ. ಆದರೆ, ವ್ಯವಸ್ಥಿತವಾಗಿಲ್ಲ. ಮಿಲಿಟರಿಯಲ್ಲಿ ಅತ್ಯುನ್ನತ ಕ್ಯಾಂಟೀನ್ ಹಾಗೂ ಆಸ್ಪತ್ರೆ ನಿರ್ಮಿಸಲಾಗಿದೆ. ಇದೇ ಮಾದರಿಯಲ್ಲಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಒಟ್ಟು 1.6 ಲಕ್ಷ ಪೊಲೀಸ್ ಹುದ್ದೆಗಳಿದ್ದು, ಸುಮಾರು 80 ಸಾವಿರ ಪೊಲೀಸರು ಕೆಲಸ ನಿರ್ವಹಿಸುತ್ತಿದ್ದಾರೆ. ಮಿಕ್ಕ ಹುದ್ದೆಗಳು ಖಾಲಿ ಇವೆ. ಕಳೆದ ಬಾರಿ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ 23 ಸಾವಿರ ಪೊಲೀಸರನ್ನು ನೇಮಕ ಮಾಡಲಾಗಿತ್ತು. ಆದರೆ ಪ್ರತಿ ವರ್ಷ ನಿವೃತ್ತಿಯಾಗುತ್ತಿರುವುದರಿಂದ ಖಾಲಿ ಹುದ್ದೆ ಭರ್ತಿ ಮಾಡಬೇಕಿದೆ. ಆದಷ್ಟು ಶೀಘ್ರವೇ ಖಾಲಿ ಹುದ್ದೆ ತುಂಬಲಾಗುವುದು ಎಂದರು.
ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿ ಸಂಬಳ ತೀರ ಕಡಿಮೆ ಇದೆ:
ಕಂದಾಯ ಇನ್ಸ್‌ಪೆಕ್ಟರ್‌ಗೆ ನಮ್ಮ ಇಲಾಖೆಯ ಪೊಲೀಸ್ ಕಾನ್ಸ್‌ಟೇಬಲ್ ಸಮಾನರು. ಆದರೆ ವೇತನದಲ್ಲಿ ಸಮಾನತೆ ಇಲ್ಲ. ಈ ತಾರತಮ್ಯ ಹೋಗಲಾಡಿಸಲು ರಚಿಸಲಾಗಿದ್ದ ಔರಾದ್ಕರ್ ಅವರ ನೇತೃತ್ವದ ಸಮಿತಿ ವರದಿ ನೀಡಿದೆ. ವರದಿ ಅನುಷ್ಠಾನಕ್ಕೆ ಆರನೇ ವೇತನ ಆಯೋಗಕ್ಕೆ ಕಳುಹಿಸಲಾಗಿದ್ದು, ಅನುಷ್ಠಾನಕ್ಕೆ ಒತ್ತಾಯ ಮಾಡುತ್ತಿದ್ದೇನೆ ಎಂದರು.