ಹೆಣ ಉರುಳದ್ದಿದ್ದರೆ ರಾಜ್ಯದಲ್ಲಿ ಶಾಂತಿ ನೆಲೆಸುತ್ತಿರಲಿಲ್ಲ: ಆರ್‌ಎಸ್‌ಎಸ್‌ ಮುಖಂಡ

ಮಂಗಳೂರಿನಲ್ಲಿ ಎರಡು ಹೆಣ ಬೀಳದಿದ್ದಿದ್ದರೆ ರಾಜ್ಯದಲ್ಲಿ ಶಾಂತಿಯಾಗಿರಲು ಸಾಧ್ಯವಿರಲಿಲ್ಲ ಎಂದು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಹೇಳಿದ್ದಾರೆ.

Last Updated : Jan 20, 2020, 11:13 AM IST
ಹೆಣ ಉರುಳದ್ದಿದ್ದರೆ ರಾಜ್ಯದಲ್ಲಿ ಶಾಂತಿ ನೆಲೆಸುತ್ತಿರಲಿಲ್ಲ: ಆರ್‌ಎಸ್‌ಎಸ್‌ ಮುಖಂಡ title=
Photo Courtesy: Facebook

ಚಿಕ್ಕಬಳ್ಳಾಪುರ: ಪೊಲೀಸರ ಸಮಯ ಪ್ರಜ್ಞೆಯಿಂದ ಆಗಬಹುದಾಗಿದ್ದ ಬಾರಿ ಅನಾಹುತ ತಪ್ಪಿದೆ, ಮಂಗಳೂರಿನಲ್ಲಿ ಎರಡು ಹೆಣ ಬೀಳದಿದ್ದಿದ್ದರೆ ರಾಜ್ಯದಲ್ಲಿ ಶಾಂತಿಯಾಗಿರಲು ಸಾಧ್ಯವಿರಲಿಲ್ಲ ಎಂದು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌, ಇತೀಚೆಗಷ್ಟೇ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ(CAA) ವಿರುದ್ಧ ಭುಗಿಲೆದ್ದಿದ್ದ ಮಂಗಳೂರು ಗಲಭೆಯನ್ನು ಪ್ರಸ್ತಾಪಿಸುತ್ತಾ, ''ಸಿಎಎ ವಿರೋಧಿ ಹೋರಾಟದ ಹೆಸರಲ್ಲಿ ಮಂಗಳೂರಿನಲ್ಲಿ ಭುಗಿಲೆದ್ದಿದ್ದ ಗಲಭೆ ಕಾಶ್ಮೀರ ಮಾದರಿಯಲ್ಲಿದ್ದು, ಕಾಶ್ಮೀರದಲ್ಲಿ ತರಬೇತಿ ಪಡೆದವರೇ ಇಂತಹ ಕುಕೃತ್ಯಕ್ಕೆ ಮುಂದಾಗಿದ್ದರು ಎಂದು ಆರೋಪಿಸಿದರು. ಅಲ್ಲದೆ, ಗಲಭೆ ಭುಗಿಲೆದ್ದಿದ್ದ ಪ್ರದೇಶದಲ್ಲಿಯೇ ಬಂದೂಕಿನ ಅಂಗಡಿ ಇದ್ದು, ಅದರ ಬಾಗಿಲು  ಹೊಡೆಯಲು ಪ್ರಯತ್ನಿಸಲಾಗಿದೆ. ಈ ಸಂದರ್ಭದಲ್ಲಿ ಕಬ್ಬಿಣದ ಬಾಗಿಲು ತೆರೆಯಲು ಸಾಧ್ಯವಾಗದ ಕಾರಣ ಪುಂಡರ ಪ್ರಯತ್ನ ವಿಫಲವಾಗಿದೆ. ಇದರಿಂದಾಗಿ ಅದೃಷ್ಟವಶಾತ್ ನಡೆಯಬೇಕಿದ್ದ ಬಾರೀ ಅನಾಹುತ ತಪ್ಪಿದಂತಾಗಿದೆ. ಒಂದೊಮ್ಮೆ ಆ ಮದ್ದು ಗುಂಡುಗಳು ಕಿಡಿಗೇಡಿಗಳ ಕೈಗೆ ಸಿಕ್ಕಿದ್ದರೆ ರಾಜ್ಯದ ಶಾಂತಿ ಸುವ್ಯವಸ್ಥೆಯ ಬಗ್ಗೆ ಊಹಿಸುವುದೂ ಅಸಾಧ್ಯವಾಗುತ್ತಿತ್ತು" ಎಂದರು.

ಇದೇ ವೇಳೆ ರಾಮನಗರ ಜಿಲ್ಲೆಯಲ್ಲಿ ಯೇಸುವಿನ ಶಿಲುಬೆ ನಿರ್ಮಾಣದ ಬಗ್ಗೆ ಕಿಡಿ ಕಾರಿದ ಕಲ್ಲಡ್ಕ ಪ್ರಭಾಕರ್, ನೀವು ಶಿಲುಬೆ ನಿರ್ಮಿಸಲು ನಮ್ಮ ವಿರೋಧವಿಲ್ಲ. ಆದರೆ ಅದನ್ನು ನಿಮ್ಮ ಜಾಗದಲ್ಲಿ ನಿರ್ಮಿಸಿ, ಅದನ್ನು ಬಿಟ್ಟು ಹಿಂದೂಗಳನ್ನು ತುಳಿದು ಮೇಲೇಳುವುದನ್ನು ಸಹಿಸಲು ಸಾಧ್ಯವಿಲ್ಲ. ರಾಮನಗರ ಜಿಲ್ಲೆಯ ಕನಕಪುರದ ಮುನೇಶ್ವರ ಬೆಟ್ಟದಲ್ಲಿದ್ದ ಮುನೇಶ್ವರ ಕಲ್ಲುಗಳ ಮೇಲೆ ಯೇಸುವಿನ ಶಿಲುಬೆ ನಿರ್ಮಾಣ ಮಾಡಲು ಸಿದ್ಧತೆಗಳನ್ನು ನಡೆಸಲಾಗಿದೆ. ಮಿನಿ ಪಾಕಿಸ್ತಾನ, ಮಿನಿ ಚೀನಾ ಜೊತೆಗೆ ಮಿನಿ ಕ್ರಿಸ್ತಾ ಲ್ಯಾಂಡ್‌ ಮಾಡುವ ಷಡ್ಯಂತರ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.

Trending News