ಮೈಸೂರಿನಲ್ಲಿ ಸೈನ್ಸ್ ಸಿಟಿ ತೆರೆಯಲು ಸುತ್ತೂರು ಮಠದಿಂದ ನಿವೇಶನ!

ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ ಮೈಸೂರಿನಲ್ಲಿ ತಲೆ ಎತ್ತಲಿದೆ ಸೈನ್ಸ್ ಸಿಟಿ.  

Last Updated : Jun 24, 2019, 02:13 PM IST
ಮೈಸೂರಿನಲ್ಲಿ ಸೈನ್ಸ್ ಸಿಟಿ ತೆರೆಯಲು ಸುತ್ತೂರು ಮಠದಿಂದ ನಿವೇಶನ! title=

ಮೈಸೂರು: ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ ಮೈಸೂರಿನಲ್ಲಿ ಸೈನ್ಸ್ ಸಿಟಿ ಮಾಡಲು ನಿರ್ಧರಿಸಿದೆ. ಸೈನ್ಸ್ ಸಿಟಿ ನಿರ್ಮಾಣಕ್ಕೆ 25 ಎಕರೆ ಭೂಮಿ ನೀಡಲು ಸುತ್ತೂರು ಮಠ ಮುಂದೆ ಬಂದಿದ್ದು, ಈ ಜಾಗದ ಒಪ್ಪಿಗೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಐಟಿ-ಬಿಟಿ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.

ಮೈಸೂರು ಜೆಎಸ್‌ಎಸ್ ಮಹಾವಿದ್ಯಾಪೀಠ ಸೈನ್ಸ್ ಸಿಟಿಗಾಗಿ ಪ್ರಸ್ತಾಪಿಸಿರುವ ನಿವೇಶನಕ್ಕೆ ಇಂದು ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಡಾ. ಜಿ. ಪರಮೇಶ್ವರ, ಕೇಂದ್ರ ಸರಕಾರ ಆಯಾ ರಾಜ್ಯ ಸರಕಾರಗಳ ಜೊತೆಗೂಡಿ ಪ್ರತಿ ರಾಜ್ಯದಲ್ಲೂ ಸೈನ್ಸ್ ಸಿಟಿ ಮಾಡಬೇಕೆಂಬ ಯೋಜನೆ ತಂದಿದೆ. ಕರ್ನಾಟಕದ ಮೈಸೂರಿನಲ್ಲಿ ಸೈನ್ಸ್ ಸಿಟಿ ಮಾಡಲು ಪ್ರಸ್ತಾಪಿಸಲಾಗಿದ್ದು, ಇದಕ್ಕಾಗಿ ಸುತ್ತೂರು ಮಠದಿಂದ 25 ಎಕರೆ ಜಾಗ ನೀಡಲು ಮುಂದಾಗಿದ್ದಾರೆ. ಇಂದು ಆ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕೇಂದ್ರದ ನಿಯಮಕ್ಕನುಗುಣವಾಗಿ ಭೂಮಿ ನೀಡುವುದಾಗಿ ಒಪ್ಪಿದ್ದಾರೆ. ಈ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗುವುದು ಎಂದರು. 

ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ನಗರವಾಗಿ ಹೊರಹೊಮ್ಮಲಿರುವ ಮೈಸೂರು ಸೈನ್ಸ್ ಸಿಟಿ:
200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸೈನ್ಸ್ ಸಿಟಿ ಇಡೀ ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ನಗರವಾಗಿ ಹೊರಹೊಮ್ಮಲಿದೆ. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಬೇಕು ಎಂಬ ಉದ್ದೇಶದಿಂದ ಪ್ರತಿ ಜಿಲ್ಲೆಯಲ್ಲಿ ವಿಜ್ಞಾನ ಕೇಂದ್ರವನ್ನು ಮಾಡಲಾಗುತ್ತಿದೆ. 

ಮಂಗಳೂರು ಹಾಗೂ ದಾವಣಗೆರೆಯಲ್ಲಿ ಈಗಾಗಲೇ ಕೆಲಸ ಪ್ರಾರಂಭವಾಗಿದೆ. ಇನ್ನು 19 ಜಿಲ್ಲೆಯಲ್ಲಿ ಸೈನ್ಸ್ ಕೇಂದ್ರ ತೆರೆಯುವ ಕೆಲಸ ಕೂಡ ಪ್ರಗತಿಯಲ್ಲಿದೆ ಎಂದರು. ಮೈಸೂರು ಆಕರ್ಷಣೀಯ ತಾಣ. ಇಲ್ಲಿ ಸೈನ್ಸ್ ಸಿಟಿ ಮಾಡುವುದರಿಂದ ಹೆಚ್ಚು ಉಪಯುಕ್ತ. ಈ ಸಿಟಿಯಲ್ಲಿ ಅರ್ಥ್ ಗ್ಯಾಲಕ್ಸಿ, ಸೋಲಾರ್ ಸಿಸ್ಟಮ್ ಸೇರಿದಂತೆ ಅನೇಕ ವಿಸ್ಮಯಗಳು ಇರಲಿವೆ. ಈ ಸಿಟಿ ನಿರ್ಮಾಣದ ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಸಮಾನವಾಗಿ ಭರಿಸಲಿದೆ. ಇದು ಕೇಂದ್ರದ ಯೋಜನೆಯಾಗಿರುವುದರಿಂದ ಸ್ಥಳದ ಒಪ್ಪಿಗೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಿಟಿ ಪೂರ್ಣಗೊಳ್ಳಲು 5 ವರ್ಷದ ಅವಧಿ ಬೇಕು ಎನ್ನಲಾಗಿದೆ. ಆದರೆ, 3 ವರ್ಷದೊಳಗೆ ಪೂರ್ಣಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು.

ಸುತ್ತೂರು ಮಠ 200 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದೆ. ವಿದ್ಯಾ ಕ್ಷೇತ್ರದಲ್ಲಿ ಹೆಚ್ಚು ಮುಂದಿರುವ ಈ ಮಠದಿಂದ ಸೈನ್ಸ್ ಸಿಟಿಗಾಗಿ ಸ್ಥಳ ನೀಡುತ್ತಿರುವುದು ಶ್ಲಾಘನೀಯ ಎಂದರು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಕೇವಲ ಡಾಕ್ಟರ್, ಇಂಜಿನಿಯರ್ ಮಾಡಬೇಕೆಂಬ ಇಂಗಿತ ಹೊಂದಿರುತ್ತಾರೆ. ಆದರೆ, ವಿಜ್ಞಾನದ ಬಗ್ಗೆ ಆಸಕ್ತಿ ಹೊಂದಿರುವುದಿಲ್ಲ. ಹೀಗಾಗಿ ಅವರಲ್ಲಿ ಆಸಕ್ತಿ ಕೆರಳಿಸಲು ಹಾಗೂ ವಿಜ್ಞಾನ ಕ್ಷೇತ್ರ ಮುಂದುವರೆಯಬೇಕು ಎಂಬ ಉದ್ದೇಶದಿಂದ ಸೈನ್ಸ್ ಕೇಂದ್ರ ಹಾಗೂ ಸಿಟಿ ತೆರೆಯಲಾಗುತ್ತಿದೆ ಎಂದು ಪರಮೇಶ್ವರ ತಿಳಿಸಿದರು.
 

Trending News