ಶಿವಮೊಗ್ಗ: ಶಿವಮೊಗ್ಗ ಮತ್ತು ಬೆಂಗಳೂರು ನಡುವಿನ ಬಹುನಿರೀಕ್ಷಿತ ಜನ ಶತಾಬ್ದಿ ರೈಲು ಸಂಚಾರ ನಾಳೆಯಿಂದ (ಫೆ. 3) ಆರಂಭವಾಗಲಿದೆ. ನೈಋುತ್ಯ ರೈಲ್ವೆ ಮೈಸೂರು ವಿಭಾಗವು ಎರಡು ದಿನಗಳ ಹಿಂದಷ್ಟೇ ಪ್ರಕಟಿಸಿದ್ದ ಶಿವಮೊಗ್ಗ- ಯಶವಂತಪುರ ಜನ ಶತಾಬ್ದಿ ರೈಲು ಸಂಚಾರವನ್ನು 3 ದಿನದಿಂದ 4 ದಿನಗಳಿಗೆ ವಿಸ್ತರಿಸಿದೆ.
ವಾರದಲ್ಲಿ ನಾಲ್ಕು ದಿನ ಸಂಚರಿಸುವ ರೈಲು, ಶಿವಮೊಗ್ಗ ಟೌನ್‌ನಿಂದ ಯಶವಂತಪುರ ರೈಲು ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸಲಿದೆ. ಭಾನುವಾರ ಸಂಜೆ 6 ಗಂಟೆಗೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಜನಶತಾಬ್ದಿ ಓಡಾಟಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ಸಂಜೆ ಶಿವಮೊಗ್ಗದಿಂದ ಬೆಂಗಳೂರಿನ ಯಶವಂಪುರಕ್ಕೆ ತೆರಳಲಿರುವ ರೈಲು, ಸೋಮವಾರದಿಂದ ವಾರದಲ್ಲಿ ನಾಲ್ಕು ದಿನ ಸಂಚರಿಸಲಿದೆ.
ಈ ರೈಲು ಪ್ರತಿದಿನ ಮುಂಜಾನೆ 5.15ಕ್ಕೆ ಹೊರಟು ಯಶವಂತಪುರಕ್ಕೆ ಬೆಳಗ್ಗೆ 10.10ಕ್ಕೆ ತಲುಪಲಿದೆ. ಯಶವಂತಪುರದಿಂದ ಸಂಜೆ 5.30ಕ್ಕೆ ಹೊರಟು ರಾತ್ರಿ 10.25ಕ್ಕೆ ಶಿವಮೊಗ್ಗ ತಲುಪಲಿದೆ. ಇದರ ಮಧ್ಯದಲ್ಲಿ ಭದ್ರಾವತಿ, ಕಡೂರು ಮತ್ತು ತುಮಕೂರಲ್ಲಿ ಮಾತ್ರ ನಿಲುಗಡೆ ಇರಲಿದೆ.
ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಓಡಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಈಗಿರುವ ರೈಲು ಸಂಪರ್ಕ ಸಾಲುತ್ತಿರಲಿಲ್ಲ. ಹೀಗಾಗಿ ಪ್ರಯಾಣಿಕರ ದಟ್ಟಣೆಯನ್ನು ತಗ್ಗಿಸಲು, ಅವರಿಗೆ ಅನುಕೂಲಕರವಾದ ಸಮಯದಲ್ಲಿ ವಾರದಲ್ಲಿ ನಾಲ್ಕು ದಿನ ಜನಶತಾಬ್ದಿ ರೈಲು ಸಂಪರ್ಕ ಕಲ್ಪಿಸಲಾಗಿದೆ.