ಬೆಂಗಳೂರು: ಉತ್ತರಪ್ರದೇಶ ಉಪಚುನಾವಣೆ ಫಲಿತಾಂಶದ ಬಗ್ಗೆ ಒಂದರ ಹಿಂದೆ ಒಂದರಂತೆ ಟೀಕಾ ಪ್ರಹಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಕಿಡಿ ಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಉತ್ತರ ಪ್ರದೇಶ ಹಾಗೂ ಬಿಹಾರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಠೇವಣಿ ಕಳೆದು ಕೊಂಡಿದೆ. ಆದರೂ ತಮ್ಮ ಪಕ್ಷದಲ್ಲೇ ಹುಳುಕಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇರೆ ಪಕ್ಷಗಳ ಗೆಲುವನ್ನು ಸಂಭ್ರಮಿಸುವಂತಹ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಮುಂದುವರೆದು ಹೇಳಿರುವ ಅವರು, ಮುಳುಗುತ್ತಿರುವ ವ್ಯಕ್ತಿಗೆ ಹುಲ್ಲು ಕಡ್ಡಿ ಆಸರೆ ಎಂಬಂತೆ ಬೇರೆ ಪಕ್ಷದ ಗೆಲುವನ್ನು ಸಂಭ್ರಮಿಸಿಕೊಳ್ಳುತ್ತಿದ್ದಾರೆಂದು ಯಡಿಯೂರಪ್ಪ ಟೀಕಿಸಿದ್ದಾರೆ.
ಮುಳುಗುತ್ತಿರುವ ವ್ಯಕ್ತಿಗೆ ಹುಲ್ಲುಕಡ್ಡಿಯೇ ಆಸರೆ ಎನ್ನುವಂತೆ, ಉತ್ತರ ಪ್ರದೇಶದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತಿದ್ದರೂ, ಅನ್ಯಪಕ್ಷಗಳ ಗೆಲುವನ್ನೇ ಸಿದ್ದರಾಮಯ್ಯನವರು ಸಂಭ್ರಮಿಸುವ ಮಟ್ಟಕ್ಕೆ ಇಳಿದಿದ್ದಾರೆ.
— B.S. Yeddyurappa (@BSYBJP) March 15, 2018
ಉತ್ತರಪ್ರದೇಶ ಮತ್ತು ಬಿಹಾರ ಉಪಚುನಾವಣೆ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳ ಮೈತ್ರಿಯಿಂದಾಗ ಗೆಲುವನ್ನು ಸಿದ್ದರಾಮಯ್ಯ ಹೊಗಳಿ, ಆ ಪಕ್ಷಗಳಿಗೆ ಅಭಿನಂದಿಸಿದ್ದರು. ಅಲ್ಲದೆ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಡಳಿತ ಸಾಮರ್ಥ್ಯದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.