ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಈಜುಕೊಳವನ್ನು ಬಾಲಿವುಡ್ ನಟಿಯರಾದ ಸನ್ನಿ ಲಿಯೋನ್, ದೀಪಿಕಾ ಪಡುಕೋಣೆ ನಾಳೆ ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ! ಹಾಗಂತ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್ ಆಗಿದೆ. ಆದರೆ ಈ ಸುದ್ದಿ ಹಿಂದಿರೋ ಸತ್ಯನೇ ಬೇರೆ!
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿಯಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡಿದ ಕೆಲವೇ ತಿಂಗಳಲ್ಲಿ ಆ ರಸ್ತೆಗಳಲ್ಲಿ ಗುಂಡಿ ಬಿದ್ದು ಹದಗೆಟ್ಟಿದೆ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಅಷ್ಟೇ ಏಕೆ, ಇದೀಗ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಹದಗೆಟ್ಟ ರಸ್ತೆಗಳಲ್ಲಿ ದೊಡ್ಡ ಗಾತ್ರದ ಗುಂಡಿಗಳು ನಿರ್ಮಾಣವಾಗಿದ್ದು, ಅದರಲ್ಲಿ ನೀರು ನಿಂತಿದೆ. ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವವರಿಗೆ ರಸ್ತೆ ಯಾವುದು, ಗುಂಡಿ ಯಾವುದು ಎಂದು ತಿಳಿಯದೆ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಮಾಡಿಕೊಂಡ ಘಟನೆಗಳೂ ನಡೆದಿವೆ. ಈ ಬಗ್ಗೆ ಗಮನಹರಿಸದ ಅಲ್ಲಿನ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿರುವ ಜನತೆ, ಈ ಗುಂಡಿಗಳನ್ನೇ ಈಜು ಕೊಳ ಎಂದು ಬಿಂಬಿಸಿ ಅಲ್ಲಿ ಬಾಲಿವುಡ್ ತಾರೆಯರಾದ ಸನ್ನಿಲಿಯೋನ್, ದೀಪಿಕಾ ಪಡುಕೋಣೆ ಕುಳಿತಿರುವ ಹಾಗೆ ಫೋಟೊ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಈ ಫೋಟೊ ಈಗ ಸಖತ್ ವೈರಲ್ ಆಗಿದೆ.
ರಸ್ತೆ ನಿರ್ಮಾಣವಾದ ಕೆಲವೇ ದಿನಗಳಲ್ಲಿ ಗುಂಡಿ ಬಿದ್ದಿದ್ದರೂ ಇದರ ದುರಸ್ಥಿ ಕಾರ್ಯಕ್ಕೆ ಕ್ರಮ ಕೈಗೊಳ್ಳದ ಅಧಿಕಾರಿಗಳ ನಡೆಯಲ್ಲಿ ಖಂಡಿಸಿರುವ ಗ್ರಾಮಸ್ಥರು, ಅವರ ವಿರುದ್ಧ ಈ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.