ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ

ಪತ್ನಿ ಮತ್ತು ಐವರು ಮಕ್ಕಳನ್ನು ಮಾಸ್ಟರ್‌ ಹಿರಣ್ಣಯ್ಯ ಅವರು ಅಪಾರ ಬಂಧು ಬಳಗವನ್ನು ಅಗಲಿದ್ದು, ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ. 

Last Updated : May 2, 2019, 11:39 AM IST
ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ title=

ಬೆಂಗಳೂರು: ಹಿರಿಯ ನಟ, ರಂಗಕರ್ಮಿ, ಕನ್ನಡ ನಾಡು ಕಂಡ ಪ್ರಸಿದ್ಧ ಕಲಾವಿದ ಮಾಸ್ಟರ್‌ ಹಿರಣ್ಣಯ್ಯ ಅವರು ಗುರುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಸ್ಟರ್ ಹಿರಣ್ಣಯ್ಯ, ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. 

ಪತ್ನಿ ಮತ್ತು ಐವರು ಮಕ್ಕಳನ್ನು ಮಾಸ್ಟರ್‌ ಹಿರಣ್ಣಯ್ಯ ಅವರು ಅಪಾರ ಬಂಧು ಬಳಗವನ್ನು ಅಗಲಿದ್ದು, ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಹಿರಣ್ಣಯ್ಯ ಅವರ ಪಾರ್ಥಿವ ಶರೀರವನ್ನು ಕುಟುಂಬಸ್ಥರು ಸ್ವಗೃಹಕ್ಕೆ ತರಲಿದ್ದಾರೆ. 

1934 ಫೆಬ್ರವರಿ 15 ರಂದು ಮೈಸೂರಿನಲ್ಲಿ ಹಿರಣ್ಣಯ್ಯ ಮತ್ತು ಶಾರಾದಮ್ಮ ದಂಪತಿಗಳ ಮಗನಾಗಿ ಜನಿಸಿದರು. ಮಾಸ್ಟರ್‌ ಹಿರಣ್ಣಯ್ಯ ಅವರ ಮೂಲಕ ಹೆಸರು ನರಸಿಂಹಮೂರ್ತಿ. ತಂದೆಯಿಂದ ರಕ್ತಗತವಾಗಿ ಕಲೆ ಮೈಗೂಡಿಸಿಕೊಂಡ ಮಾಸ್ಟರ್‌ ಹಿರಣ್ಣಯ್ಯ ತನ್ನ ಕಲಾ ಪ್ರತಿಭೆಯನ್ನು ನಾಡಿನಾದ್ಯಂತ ಬೆಳಗಿದರು. 

ಲಂಚಾವತಾರ, ಮಕ್ಮಲ್‌ ಟೋಪಿ, ಸದಾರಮೆ ಮೊದಲಾದ ಪ್ರಸಿದ್ಧ ನಾಟಕಗಳನ್ನು ನೀಡುವ ಮೂಲಕ ಮನೆಮಾತಾಗಿದ್ದ ಹಿರಣ್ಣಯ್ಯ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ರಂಗಭೂಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ನವರತ್ನ ರಾಂ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ದೊರೆತಿವೆ. ಅಲ್ಲದೆ, ಕಲಾಗಜ ಸಿಂಹ ಹಾಗೂ ನಟ ರತ್ನಾಕರ ಎಂಬ ಬಿರುದುಗಳು ಇವೆ. 

Trending News