ಬೆಂಗಳೂರು: ಗುರುವಾರ ವಿಶ್ವಾಸ ಮತಯಾಚನೆ ನಡೆಯದ ಕಾರಣ ಸದನದಲ್ಲಿ ಅಹೋರಾತ್ರಿ ಧರಣಿಗೆ ನಿರ್ಧರಿಸಿದ್ದ ಬಿಜೆಪಿ ಶಾಸಕರು ರಾತ್ರಿ ಸದನದ ಬಾವಿಯಲ್ಲಿ ಮಲಗಿರುವುದು ಕಂಡುಬಂದಿತು.
ಹಲವು ವಾರಗಳಿಂದ ನಡೆಯುತ್ತಿರುವ ಕರ್'ನಾಟಕಕ್ಕೆ ಗುರುವಾರ ವಿಶ್ವಾಸ ಮತಯಾಚನೆ ಮೂಲಕ ತೆರೆ ಬಿಳಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಗುರುವಾರ ಕಲಾಪದಲ್ಲಿ ವಿಪ್ ನೆಪ ಒಡ್ಡಿದ ಆಡಳಿತ ಪಕ್ಷಗಳು ಸದನದಲ್ಲಿ ಕಾಲಹರಣಕ್ಕೆ ಪ್ರಯತ್ನಿಸಿವೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು.
"ವಿಶ್ವಾಸ ಮತ ಯಾಚನೆ ನಡೆಯದ ಹಿನ್ನಲೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಯಡಿಯೂರಪ್ಪ, ಈ ಮೈತ್ರಿ ಸರ್ಕಾರವು ಬಹುಮತವನ್ನು ಕಳೆದುಕೊಂಡಿದೆ. ಗುರುವಾರ ವಿಶ್ವಾಸಮತ ಯಾಚನೆ ಮಾಡುವುದಾಗಿ ತಿಳಿಸಿದ್ದ ಮುಖ್ಯಮಂತ್ರಿಗಳು ಇಂದು(ಗುರುವಾರ) ವಿಪ್ ನೆಪ ಒಡ್ಡುತ್ತಿದ್ದಾರೆ. ರಾಜ್ಯಪಾಲರ ಸೂಚನೆಯನ್ನು ಸ್ಪೀಕರ್ ಪಾಲಿಸಲಿಲ್ಲ. ಆದರೆ ವಿಶ್ವಾಸಮತ ಯಾಚನೆ ಆಗುವವರೆಗೂ ನಾವು ಸದನದಲ್ಲೇ ಇರುತ್ತೇವೆ. ವಿಶ್ವಾಸ ಮತಯಾಚನೆಯಾಗುವವರೆಗೂ ತಾವು ಅಹೋರಾತ್ರಿ ಸತ್ಯಾಗ್ರಹ ನಡೆಸುತ್ತೇವೆ" ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಪಕ್ಷದ ಶಾಸಕರೊಂದಿಗೆ ಸದನದಲ್ಲಿ ಮಲಗಿದ್ದರು. ಅನೇಕ ಬಿಜೆಪಿ ಶಾಸಕರು ಸದನದ ಬಾವಿಯಲ್ಲಿ ಮತ್ತು ಬಾವಿಗೆ ಹೋಗುವ ಹಾದಿಯಲ್ಲಿ ಮಲಗಿದ್ದನ್ನು ಕಾಣಬಹುದು.
#WATCH Karnataka: BJP state president BS Yeddyurappa sleeps at the Vidhana Soudha in Bengaluru. BJP legislators of the state are on an over night 'dharna' at the Assembly over their demand of floor test. pic.twitter.com/e4z6ypzJPz
— ANI (@ANI) July 18, 2019
ಇದಕ್ಕೂ ಮುನ್ನ ರಾಜ್ಯ ಬಿಜೆಪಿ ಮುಖ್ಯಸ್ಥ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಚರ್ಚಿಸುತ್ತಿರುವುದು ಕಂಡುಬಂತು. ಬಿಜೆಪಿ ಶಾಸಕರು ವಿಧಾನಸಭೆಯ ಪ್ರತಿಪಕ್ಷದ ಕೋಣೆಯಲ್ಲಿಯೇ ಭೋಜನ ಮಾಡಿದರು.
ಶುಕ್ರವಾರ ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತುಪಡಿಸಲು ಸಿಎಂಗೆ ರಾಜ್ಯಪಾಲರಿಂದ ನಿರ್ದೇಶನ ಗುರುವಾರವೇ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚನೆ ನೀಡಿದ್ದರೂ ವಿಧಾನಸಭೆ ಕಲಾಪ ಸಂದರ್ಭದಲ್ಲಿ ಆಡಳಿತ ಮತ್ತು ವಿಪಕ್ಷ ನಾಯಕರ ಗದ್ದಲದಿಂದಾಗಿ ಕಲಾಪ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಿದ ಬೆನ್ನಲ್ಲೇ ರಾಜ್ಯಪಾಲ ವಜುಬಾಯಿ ವಾಲಾ ಅವರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಆರ್ಟಿಕಲ್ 175(2)ರ ಪ್ರಕಾರ ಬಹುಮತ ಸಾಬೀತಿಗೆ ರಾಜ್ಯಪಾಲರು ಗಡುವು ನೀಡಿದ್ದಾರೆ. ಶುಕ್ರವಾರ ಮಧ್ಯಾಹ್ನ 1.30ರೊಳಗೆ ಸಿಎಂ ಬಹುಮತ ಸಾಬೀತುಪಡಿಸುವಂತೆ ಮಹತ್ವದ ನಿರ್ದೇಶನ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ನೀವು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೀರಿ. ಕರ್ನಾಟಕ ವಿಧಾನಸಭೆಯು 224 ಸಂಖ್ಯಾಬಲವನ್ನು ಹೊಂದಿದ್ದು, ಇದರಲ್ಲಿ ಜೆಡಿಎಸ್ 37, ಕಾಂಗ್ರೆಸ್ 79, ಕೆಪಿಜೆಪಿ ಯಿಂದ 1, ಬಿಎಸ್ಪಿ ಪಕ್ಷದಿಂದ 1, ಪಕ್ಷೇತರ ಶಾಸಕ 1 ಮತ್ತು ಭಾರತಿಯ ಜನತಾ ಪಕ್ಷದ 105 ಸದಸ್ಯರಿದ್ದಾರೆ. ಕೆಲ ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಕೆಲ ಸದಸ್ಯರು ನನ್ನನ್ನು ಭೇಟಿಯಾಗಿ ರಾಜೀನಾಮೆ ನೀಡಿರುವ ಬಗ್ಗೆ ತಿಳಿಸಿದ್ದಾರೆ.