Tipu Sulthan: ಟಿಪ್ಪು ಕಾಲದ ‘ಸಲಾಂ ಆರತಿ’ಗೆ ಬ್ರೇಕ್ ಹಾಕಲು ಬಿಜೆಪಿ ಸರ್ಕಾರ ನಿರ್ಧಾರ!

Salaam Aarti: ಇನ್ನುಮುಂದೆ ‘ದೀವಟಿಗೆ ಸಲಾಂ’ ಪದದ ಬದಲಾಗಿ ‘ದೀವಟಿಗೆ ನಮಸ್ಕಾರ’, ‘ಸಲಾಂ ಆರತಿ’ ಪದದ ಬದಲಾಗಿ ‘ಆರತಿ ನಮಸ್ಕಾರ’ ಎಂದು ಹಾಗೂ ‘ಸಲಾಂ ಮಂಗಳಾರತಿ” ಪದದ ಬದಲಾಗಿ ‘ಮಂಗಳಾರತಿ ನಮಸ್ಕಾರ’ ಎಂದು ಹೆಸರು ಬದಲಾಯಿಸಿ ಸೇವಾಕಾರ್ಯ ಮುಂದುವರೆಸಲು ಸುತ್ತೋಲೆ ಹೊರಡಿಸಲಾಗಿದೆ.

Written by - Puttaraj K Alur | Last Updated : Dec 11, 2022, 12:23 PM IST
  • ಟಿಪ್ಪು ಸುಲ್ತಾನ್ ಕಾಲದಲ್ಲಿ ಜಾರಿಗೆ ತಂದಿದ್ದ ‘ಸಲಾಂ ಆರತಿ’ ಪದ್ಧತಿಗೆ ಬ್ರೇಕ್ ಹಾಕಲು ನಿರ್ಧಾರ
  • ‘ಸಲಾಂ ಆರತಿ’, ‘ಸಲಾಂ ಮಂಗಳ ಆರತಿ’ ಮತ್ತು ‘ದೀವಟಿಗೆ ಸಲಾಂ’ ಹೆಸರುಗಳಿಗೆ ಮರುನಾಮಕರಣ
  • ಈ ಬಗ್ಗೆ ಸೂತ್ತೊಲೆ ಹೊರಡಿಸಲು ನಿರ್ಧರಿಸಲಾಗಿದೆ ಎಂದ ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ
Tipu Sulthan: ಟಿಪ್ಪು ಕಾಲದ ‘ಸಲಾಂ ಆರತಿ’ಗೆ ಬ್ರೇಕ್ ಹಾಕಲು ಬಿಜೆಪಿ ಸರ್ಕಾರ ನಿರ್ಧಾರ!  title=
‘ಸಲಾಂ ಆರತಿ’ ಪದ್ಧತಿಗೆ ಬ್ರೇಕ್!

ಬೆಂಗಳೂರು: ಟಿಪ್ಪು ಸುಲ್ತಾನ್ ತನ್ನ ಕಾಲದಲ್ಲಿ ಜಾರಿಗೆ ತಂದಿದ್ದ ‘ಸಲಾಂ ಆರತಿ’ ಪದ್ಧತಿಗೆ ಬ್ರೇಕ್ ಹಾಕಲು ಬಿಜೆಪಿ ಸರ್ಕಾರ  ನಿರ್ಧರಿಸಿದೆ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ‘ಸಲಾಂ ಆರತಿ’, ‘ಸಲಾಂ ಮಂಗಳ ಆರತಿ’, ‘ದೀವಟಿಗೆ ಸಲಾಂ’ಗಳನ್ನು ನಿಷೇಧಿಸಿ ಹೆಸರು ಬದಲಾಯಿಸಲು ನಿರ್ಧರಿಸಲಾಗಿದೆ. ಈ ಪದ್ಧತಿಗಳನ್ನು ಸ್ಥಳೀಯ ಹೆಸರುಗಳೊಂದಿಗೆ ಮರುನಾಮಕರಣಕ್ಕೆ ತೀರ್ಮಾನಿಸಲಾಗಿದೆ. ಈ ಹೆಸರು ಬದಲಾವಣೆಗೆ ಬಿಜೆಪಿ ಸರ್ಕಾರ ಕಾರಣವನ್ನು ಸಹ ನೀಡಿದೆ.   

ಆರತಿಗಳ ಹೆಸರು ಬದಲಾಯಿಸಲು ನಿರ್ಧಾರ

ಟಿಪ್ಪು ಸುಲ್ತಾನ್ ಕಾಲದಲ್ಲಿ ಜಾರಿಯಾಗಿದ್ದ ‘ಸಲಾಂ ಆರತಿ’, ‘ದೀವಟಿಗೆ ಸಲಾಂ’ ಮತ್ತು ‘ಸಲಾಂ ಮಂಗಲ ಆರತಿ’ ಹೆಸರನ್ನು ಸ್ಥಳೀಯ ಹೆಸರಿಗೆ ಬದಲಾಯಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಆದರೆ ನಾವು ಈ ಸಂಪ್ರದಾಯವನ್ನು ನಿಲ್ಲಿಸುವುದಿಲ್ಲವೆಂದು ಇದೇ ವೇಳೆ ಸಚಿವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮಳೆಯ ಕಾರಣ; ಪಂಚರತ್ನ ರಥಯಾತ್ರೆ ಮುಂದೂಡಿಕೆ

ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಸಚಿವೆ ಶಶಿಕಲಾ ಜೊಲ್ಲೆ, ‘ನಮ್ಮ ಸಂಪ್ರದಾಯದ ಹೆಸರುಗಳನ್ನು ನೀಡುವ ಬಗ್ಗೆ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ಚರ್ಚಿಸಲಾಗಿದೆ. ಈ ಪೂಜಾ ಕಾರ್ಯಗಳ ಹೆಸರುಗಳನ್ನು ನಮ್ಮ ಸ್ಥಳೀಯ ಭಾಷೆಯ ಪದಗಳಿಗೆ ಬದಲಿಸುವ ಬಗ್ಗೆ ಮಾತ್ರ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ಆರತಿಗಳ ಹೊಸ ಹೆಸರು ಯಾವವು?

ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಆಗಮ ಪಂಡಿತರ ಅಭಿಪ್ರಾಯದಂತೆ ದೇವಾಲಯಗಳಲ್ಲಿ ಇನ್ನುಮುಂದೆ ‘ದೀವಟಿಗೆ ಸಲಾಂ’ ಎಂಬ ಪದದ ಬದಲಾಗಿ ‘ದೀವಟಿಗೆ ನಮಸ್ಕಾರ’ ಎಂದು, ‘ಸಲಾಂ ಆರತಿ’ ಎಂಬ ಪದದ ಬದಲಾಗಿ ‘ಆರತಿ ನಮಸ್ಕಾರ’ ಎಂದು ಹಾಗೂ ‘ಸಲಾಂ ಮಂಗಳಾರತಿ” ಎಂಬ ಪದದ ಬದಲಾಗಿ ‘ಮಂಗಳಾರತಿ ನಮಸ್ಕಾರ’ ಎಂದು ಹೆಸರು ಬದಲಾಯಿಸಿ ಸೇವೆ ಮತ್ತು ಸೇವಾಕಾರ್ಯಗಳನ್ನು ಮುಂದುವರೆಸಲು ಸುತ್ತೋಲೆ ಹೊರಡಿಸಲು ನಿರ್ಧರಿಸಲಾಗಿದೆ’ ಎಂದು ಎಂದು ಸಚಿವೆ ಜೊಲ್ಲೆ ತಿಳಿಸಿದ್ದಾರೆ.

ಇದನ್ನೂ ಓದಿ: “ನಾನು 4 ಮಕ್ಕಳಿಗೆ ಜನ್ಮ ನೀಡಲು ಕಾಂಗ್ರೆಸ್ ಪಕ್ಷವೇ ಕಾರಣ”

ಹೆಸರು ಬದಲಾಯಿಸಲು ಕಾರಣವೇನು?

ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಕೆಲವು ದೇವಾಲಯಗಳಲ್ಲಿ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ವೇಳೆ ದೀವಟಿಗೆ ಹಿಡಿದು ದೇವರಿಗೆ ಆರತಿ ಮಾಡುವ ಆಚರಣೆಗೆ ‘ದೀವಟಿಗೆ ಸಲಾಂ’, ‘ಸಲಾಂ ಮಂಗಳಾರತಿ’ ಮತ್ತು ‘ಸಲಾಂ ಆರತಿ’ ಎಂದು ಕರೆಯಲಾಗುತ್ತಿತ್ತು. ಇದನ್ನು ಬದಲಾಯಿಸಬೇಕೆಂದು ಸಾವಿರಾರು ಭಕ್ತರಿಂದ ಒತ್ತಾಯ ಕೇಳಿಬಂದಿತ್ತು. ಧಾರ್ಮಿಕ ಪರಿಷತ್ತಿನ ಸದಸ್ಯರು ಈ ಬಗ್ಗೆ ಸಭೆಯ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ವ್ಯಾಪಕ ಚರ್ಚೆ ಬಳಿಕ ಟಿಪ್ಪು ಕಾಲದ ಆಚರಣೆಗಳಿಗೆ ಮರುನಾಮಕರಣ ಮಾಡಲು ನಿರ್ಧರಿಸಲಾಯಿತು ಎಂದು ತಿಳಿದುಬಂದಿದೆ.  

ಟಿಪ್ಪುನನ್ನು ‘ಮತಾಂಧ’ನೆಂದು ಟೀಕಿಸಿರುವ ಬಿಜೆಪಿ

ಹಿಂದಿನ ಸಂಪ್ರದಾಯದಂತೆ ಆಚಾರ-ವಿಚಾರಗಳು ಮುಂದುವರಿಯಲಿವೆ. ಹೆಸರುಗಳನ್ನು ಮಾತ್ರ ಬದಲಾಯಿಸಲಾಗುವುದು. ಹೆಸರು ನಮ್ಮ ಭಾಷೆಯ ಪದಗಳನ್ನು ಒಳಗೊಂಡಿರುತ್ತದೆ ಎಂದು ಸಚಿವೆ ಜೊಲ್ಲೆ ಹೇಳಿದ್ದಾರೆ.  ಟಿಪ್ಪು ಸುಲ್ತಾನ್ ಬಗ್ಗೆ ಆಡಳಿತಾರೂಢ ಬಿಜೆಪಿಯ ನಿಲುವಿಗೆ ಅನುಗುಣವಾಗಿ ಕರ್ನಾಟಕ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ.

ಗಮನಾರ್ಹವಾಗಿ ಬಿಜೆಪಿ ಮತ್ತು ಕೆಲವು ಹಿಂದೂ ಸಂಘಟನೆಗಳು ಟಿಪ್ಪು ಸುಲ್ತಾನ್ ಅನ್ನು ‘ಮಂತಾಂಧ’ ಮತ್ತು ‘ಕ್ರೂರಿ’ ಎಂದು ಟೀಕಿಸಿವೆ. ಇದಲ್ಲದೇ ಕೆಲವು ಕನ್ನಡಪರ ಸಂಘಟನೆಗಳು ಟಿಪ್ಪು ಸುಲ್ತಾನ್ ಅನ್ನು ಕನ್ನಡ ವಿರೋಧಿ ಎಂದೂ ಸಹ ಕರೆದಿವೆ. ಟಿಪ್ಪು ಸ್ಥಳೀಯ ಭಾಷೆಯ ಬದಲಾಗಿ ಪರ್ಷಿಯನ್ ಭಾಷೆಯನ್ನು ಪ್ರೋತ್ಸಾಹಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News