ಬೆಳಗಾವಿ : ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಗಳ ಕೊರತೆ ವಿಚಾರವಾಗಿ ಪ್ರಶ್ನೋತ್ತರ ಕಲಾಪದಲ್ಲಿ ಸದನದ ಭಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಕುಣಿಗಲ್ ಶಾಸಕ ರಂಗನಾಥ್ ಅವರಿಗೆ ಸಚಿವ ಗೋವಿಂದ ಕಾರಜೋಳ ಇದು ಪದ್ದತಿ ಅಲ್ಲ, ನಡೀರಿ, ಹೊರಗೆ ಹೋಗಿ ಮೊದಲು ಎಂದು ಜೋರಾಗಿ ಗದರಿದ್ದಾರೆ. ಇದಕ್ಕೆ ಜೆ.ಸಿ ಮಾಧುಸ್ವಾಮಿ ಕೂಡಾ ಧ್ವನಿಗೂಡಿಸಿದರು.
ಸಚಿವ ಕಾರಜೋಳ ಮಾತಿಗೆ ಆಕ್ರೋಶಗೊಂಡ ಕಾಂಗ್ರೆಸ್ -ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಹೀಗಾಗಿ ಸದನವನ್ನು ಹತ್ತು ನಿಮಿಷ ಕಲಾಪ ಮುಂದೂಡಲಾಯಿತು.
ಇದನ್ನೂ ಓದಿ : ದೇಶದ ಬಹುತೇಕ ಕ್ರಾಂತಿಕಾರಿಗಳನ್ನು ಬ್ರಿಟಿಷರಿಗೊಪ್ಪಿಸಿದವರೇ ಕಾಂಗ್ರೆಸಿಗರು: ಬಿಜೆಪಿ ಆಕ್ರೋಶ
ಪ್ರಶ್ನೋತ್ತರ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಬಸ್ ಗಳ ಕೊರತೆ ವಿಚಾರವಾಗಿ ಶಾಸಕ ಸಿದ್ದು ಸವದಿ ಪ್ರಸ್ತಾಪ ಮಾಡಿದರು. ಇದಕ್ಕೆ ಇತರ ಸದಸ್ಯರು ಕೂಡಾ ಧ್ವನಿಗೂಡಿಸಿ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಂಡರು. ಇದಕ್ಕೆ ಸಾರಿಗೆ ಸಚಿವ ಶ್ರೀರಾಮುಲು ನೀಡಿದ ಉತ್ತರಕ್ಕೆ ತೃಪ್ತಿಯಾಗದ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿದರು. ಸಮಸ್ಯೆ ಬಗೆಹರಿಸುವ ಭರವಸೆಯನ್ನು ಶ್ರೀರಾಮುಲು ನೀಡಿದ ಬಳಿಕ ಪ್ರತಿಭಟನಾನಿರತರು ಬಾವಿಯಿಂದ ವಾಪಸ್ ಆದರು. ಆದರೆ ಕಾಂಗ್ರೆಸ್ ಸದಸ್ಯ ಕುಣಿಗಲ್ ರಂಗನಾಥ್ ಬಾವಿಯಲ್ಲಿ ಇದ್ದು ಏಕಾಂಗಿಯಾಗಿ ಪ್ರತಿಭಟನೆ ಮುಂದುವರಿಸಿದರು.
ಕಾಂಗ್ರೆಸ್ ಸದಸ್ಯ ಕುಣಿಗಲ್ ರಂಗನಾಥ್ ಬಾವಿಯೊಳಗೆ ಇದ್ದಾರೆ ಎಂದು ಅವರ ಪರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಲು ಮುಂದಾದಾಗ, ಮಧ್ಯಪ್ರವೇಶ ಮಾಡಿದ ಸಚಿವ ಗೋವಿಂದ ಕಾರಜೋಳ, ಪ್ರಶ್ನೋತ್ತರ ಅವಧಿಯಲ್ಲಿ ಬಾವಿಗಿಳಿದು ಪ್ರತಿಭಟನೆ ಮಾಡಬಾರದು ಎಂದರು . ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಸದಸ್ಯರ ಮೇಲೆ ಯಾಕ್ರಿ ಕೂಗಾಡುತ್ತೀರಿ. ಅದು ಅವರ ಹಕ್ಕು ಎಂದರು. ಈ ವೇಳೆ ಕಾಂಗ್ರೆಸ್ ನ ಎಲ್ಲಾ ಸದಸ್ಯರು ಸದನದ ಬಾವಿಗಿಳಿದರು. ಈ ವೇಳೆ ಮತ್ತಷ್ಟು ಗರಂ ಆದ ಕಾರಜೋಳ ಇದು ಪದ್ದತಿ ಅಲ್ಲ, ಹೊರಗೆ ಹಾಕಿ ಅವರನ್ನು, ಏನು ಹುಡುಗಾಟಿಕೆ ಮಾಡ್ತಿದ್ದೀರಾ ಎಂದು ಏರು ಧ್ವನಿಯಲ್ಲಿ ಮಾತನಾಡಿದರು.
ಇದನ್ನೂ ಓದಿ : "ಯಾವುದೇ ಶ್ರೀಗಳ ಬಗ್ಗೆ ಹಗುರ ಮಾತು ಬೇಡ"
ಕಾರಜೋಳ ಮಾತಿಗೆ ಕಾಂಗ್ರೆಸ್ ಸದಸ್ಯರು ಕೂಡಾ ಆಕ್ಷೇಪ ವ್ಯಕ್ತಪಡಿಸಿದರು. ಈ ತರ ಕೂಗಾಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯರು ಪ್ರಶ್ನೆ ಕೇಳಿದಾಗ ಸರ್ಕಾರ ಉತ್ತರ ಕೊಡಬೇಕು. ಆದರೆ ಮಂತ್ರಿಯಾಗಿ ಬಾಯಿಗೆ ಬಂದ ಹಾಗೆ ಮಾತನಾಡಿದರೆ ಹೇಗೆ? ಎಂದು ಗರಂ ಆಗಿ ಪ್ರಶ್ನಿಸಿದರು. ಈ ವೇಳೆ ಆಡಳಿತ ಹಾಗೂ ವಿಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ವಾಕ್ಸಮರ ನಡೆಯಿತು. ಸಚಿವರ ನಡೆಗೆ ಕಾಂಗ್ರೆಸ್ ಸದಸ್ಯರು ಧಿಕ್ಕಾರ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಸದಸ್ಯರು ಕೂಡಾ ಘೋಷಣೆ ಕೂಗಿದರು. ವಾಕ್ಸಮರ ತೀವ್ರಗೊಂಡಾದ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಲಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.