Orchestra Mysore: ಸಂಕ್ರಾಂತಿ ಹಬ್ಬಕ್ಕೆ ಸೌಂಡ್ ಮಾಡಲಿರುವ ಡಾಲಿ ಬಳಗದ ‘ಆರ್ಕೇಸ್ಟ್ರಾ ಮೈಸೂರು’

Orchestra Mysuru Release date : ಡಾಲಿ ಧನಂಜಯ್ ಸ್ನೇಹಿತರೆಲ್ಲಾ ಸೇರಿ ಮಾಡಿರುವ ಸಿನಿಮಾ, ಆರ್ಕೇಸ್ಟ್ರಾ’ದ ಕಥೆ ಆಧರಿಸಿರುವ "ಆರ್ಕೇಸ್ಟ್ರಾ ಮೈಸೂರು" ಸಿಬಿಮಾ ಜನವರಿ 12ರಂದು ತೆರೆಗೆ ಬರುತ್ತಿದೆ‌.

Written by - Puttaraj K Alur | Last Updated : Jan 5, 2023, 12:13 PM IST
  • ಸಂಕ್ರಾಂತಿ ಹಬ್ಬಕ್ಕೆ ಸಖತ್ ಸೌಂಡ್ ಮಾಡಲು ಬರುತ್ತಿದೆ ‘ಆರ್ಕೇಸ್ಟ್ರಾ ಮೈಸೂರು’
  • ಜನವರಿ 12ರಂದು ತೆರೆಗೆ ಬರುತ್ತಿರುವ ಡಾಲಿ ಧನಂಜಯ್ ಗೆಳೆಯರ ಬಳಗದ ಸಿನಿಮಾ
  • ಟ್ರೈಲರ್ ಮೂಲಕ ತೀವ್ರ ಕುತೂಹಲ ಮೂಡಿಸಿ, ನಿರೀಕ್ಷೆ ಹೆಚ್ಚಿಸಿರುವ ಹೊಸಬರ ಚಿತ್ರ
Orchestra Mysore: ಸಂಕ್ರಾಂತಿ ಹಬ್ಬಕ್ಕೆ ಸೌಂಡ್ ಮಾಡಲಿರುವ ಡಾಲಿ ಬಳಗದ ‘ಆರ್ಕೇಸ್ಟ್ರಾ ಮೈಸೂರು’ title=
ಜ.12ಕ್ಕೆ ‘ಆರ್ಕೇಸ್ಟ್ರಾ ಮೈಸೂರು’ ಬಿಡುಗಡೆ

ಬೆಂಗಳೂರು: ಗಣೇಶನ ಹಬ್ಬ, ರಾಜ್ಯೋತ್ಸವ ಮುಂತಾದ ಸಂದರ್ಭಗಳಲ್ಲಿ ಎಲ್ಲಾ ಕಡೆ "ಆರ್ಕೇಸ್ಟ್ರಾ"ಗಳದ್ದೇ ಕಾರುಬಾರು. ಇಂತಹ "ಆರ್ಕೇಸ್ಟ್ರಾ" ಆರಂಭವಾಗಿದ್ದು ಮೈಸೂರಿನಲ್ಲೇ ಎನ್ನುತ್ತಾರೆ. ‘ಆರ್ಕೇಸ್ಟ್ರಾ’ದ ಕಥೆ ಆಧರಿಸಿರುವ "ಆರ್ಕೇಸ್ಟ್ರಾ ಮೈಸೂರು" ಸಿಬಿಮಾ ಜನವರಿ 12ರಂದು ತೆರೆಗೆ ಬರುತ್ತಿದೆ‌. ಇತ್ತೀಚೆಗೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ  ಕುತೂಹಲ ಹೆಚ್ಚಿಸಿದೆ.

ಮೂಲತಃ ಮೈಸೂರಿನವರಾದ ಡಾಲಿ ಧನಂಜಯ್ ಸ್ನೇಹಿತರೆಲ್ಲಾ ಸೇರಿ ಮಾಡಿರುವ ಸಿನಿಮಾ ಇದು. ಅದರಲ್ಲೂ ಡಾಲಿ ಅವರೇ ಈ ಚಿತ್ರದ ಎಲ್ಲಾ ಹಾಡುಗಳನ್ನು ಬರೆದಿರುವುದು ವಿಶೇಷ. ಟ್ರೈಲರ್ ಬಿಡುಗಡೆ ಮಾಡಿದ ಡಾಲಿ ಧನಂಜಯ್ ಈ ಚಿತ್ರದ ಕುರಿತು ಭಾವನಾತ್ಮಕವಾಗಿ ಮಾತನಾಡಿದರು. ‘ನಮ್ಮ ಮೈಸೂರಿನ ಅನೇಕ ಸ್ನೇಹಿತರು ಸೇರಿ ಮಾಡಿರುವ ಚಿತ್ರವಿದು. ಸುನೀಲ್ ಮೈಸೂರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪೂರ್ಣಚಂದ್ರ ನಾಯಕನಾಗಿ ನಟಿಸಿದ್ದಾರೆ‌. ನಾನು ಈ ಚಿತ್ರದ ಎಲ್ಲಾ ಹಾಡುಗಳನ್ನು ಬರೆದಿದ್ದೇನೆ.‌ ನಾನು ಡಾಲಿ ಆಗುವುದಕ್ಕೆ ಮುಂಚಿತವಾಗಿ ಈ ಚಿತ್ರದ ಹಾಡುಗಳನ್ನು ಬರೆದಿದ್ದೇನೆ’ ಎಂದು ಹೇಳಿದರು.‌

‘ಈ ಚಿತ್ರದಲ್ಲಿ ನಾಯಕ ಗೆಲುವನ್ನು ಸಂಭ್ರಮಿಸುವ ಹಾಡೊಂದನ್ನು ಬರೆಯಬೇಕಿತ್ತು. ನನಗೆ ಆಗ ಆ ಗೆಲುವನ್ನು ಸಂಭ್ರಮಿಸಿ ಗೊತ್ತಿರಲಿಲ್ಲ.‌ ಆನಂತರ "ಟಗರು" ಚಿತ್ರದ ಯಶಸ್ಸಿನ ನಂತರ ಈ ಹಾಡನ್ನು ಪೂರ್ಣ ಮಾಡಿದ್ದೆ. ಸಂಕ್ರಾಂತಿ ಸಮಯದಲ್ಲಿ ಸಾಮಾನ್ಯವಾಗಿ ಕನ್ನಡ ಸಿನಿಮಾಗಳು ಬಿಡುಗಡೆಯಾಗುವುದಿಲ್ಲ. ಆದರೆ ನಮ್ಮ ಚಿತ್ರ ಇದೇ ಸಂದರ್ಭದಲ್ಲಿ (ಜ.12) ಬಿಡುಗಡೆಯಾಗುತ್ತಿದೆ. ಡಾಲಿ ಪಿಕ್ಚರ್ಸ್ ಹಾಗೂ ಕೆ.ಆರ್.ಜಿ ಸ್ಟುಡಿಯೋಸ್ ಈ ಚಿತ್ರವನ್ನು ಅರ್ಪಿಸುತ್ತಿದೆ. ಅಶ್ವಿನ್ ವಿಜಯ್ ಕುಮಾರ್ ಹಾಗೂ ರಘು ದೀಕ್ಷಿತ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಕನ್ನಡ ಕಲಾರಸಿಕರು ನೋಡಿ ಹಾರೈಸಬೇಕು ಎಂದು ಡಾಲಿ ಧನಂಜಯ್ ಹೇಳಿದರು.

ಇದನ್ನೂ ಓದಿ: ನಿರ್ದೇಶಕ ಸಿಂಪಲ್ ಸುನಿ ಮುಂದಿನ ಚಿತ್ರಕ್ಕೆ ವಿನಯ್ ರಾಜ್ ಕುಮಾರ್ ನಾಯಕ

‘2015 ರಲ್ಲಿ ‘ಬಾರಿಸು ಕನ್ನಡ ಡಿಂಡಿಮವ’ ಎಂಬ ಹಾಡನ್ನು ನಾವೆಲ್ಲಾ ಗೆಳೆಯರು ಸೇರಿ ಮಾಡಿದ್ದೆವು. ಮೈಸೂರಿನಲ್ಲೇ ಈ ಹಾಡಿನ ಚಿತ್ರೀಕರಣ ನಡೆದಿತ್ತು. ಈ ಹಾಡಿಗೆ ಸಿಕ್ಕ ಜನ ಬೆಂಬಲ ನಾವು ಚಿತ್ರ ನಿರ್ಮಾಣ ಮಾಡಲು ಸ್ಫೂರ್ತಿಯಾಯಿತು. ಆನಂತರ ನಮ್ಮ "ಆರ್ಕೇಸ್ಟ್ರಾ ಮೈಸೂರು" ಚಿತ್ರ ಆರಂಭವಾಯಿತು. "ಆರ್ಕೇಸ್ಟ್ರಾ"ದಲ್ಲಿ ಹಾಡಬೇಕೆಂದು ಆಸೆ ಹೊತ್ತ ಹುಡುಗನ ಕನಸು ನನಸಾಗುವುದಾ? ಎಂಬುದೇ ಚಿತ್ರದ ಮೂಲ ಕಥೆ. ಬೆಂಗಳೂರಿನ ಹಾಗೆ ಮೈಸೂರಿನಲ್ಲೂ ಒಂದು ಗಾಂಧಿನಗರವಿದೆ. ಅಲ್ಲಿ ಸಾಕಷ್ಟು ಆರ್ಕೇಸ್ಟ್ರಾ ಕಂಪನಿಗಳೂ ಇವೆ. ಈ ರೀತಿ "ಆರ್ಕೇಸ್ಟ್ರಾ" ದೊಂದಿಗೆ ನಮ್ಮ ಚಿತ್ರದ ಕಥೆ ಸಾಗುತ್ತದೆ’ ಎಂದು ನಿರ್ದೇಶಕ ಸುನೀಲ್ ಮೈಸೂರು ತಿಳಿಸಿದರು.

 

‘ರಘುದೀಕ್ಷಿತ್  ಸಂಗೀತ ನೀಡಿರುವ 8 ಹಾಡುಗಳು ನಮ್ಮ ಚಿತ್ರದಲ್ಲಿದೆ. ಅಷ್ಟೂ ಹಾಡುಗಳನ್ನು ಡಾಲಿ ಅವರೇ ಬರೆದಿದ್ದಾರೆ. ಒಂದು ಹಾಡಿನಲ್ಲಿ ಇಡೀ ಮೈಸೂರೇ ಭಾಗಿಯಾಗಿದೆ ಎನ್ನಬಹುದು. ಏಕೆಂದರೆ 15 ಸಾವಿರಕ್ಕೂ ಹೆಚ್ಚಿನ ಜನರು ಈ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಮಹದೇವ್ ನನ್ನ ಜೊತೆ ಸಹ ನಿರ್ದೇಶನ ಮಾಡಿದ್ದಾರೆ. ಒಟ್ಟಿನಲ್ಲಿ ನನ್ನ ತಂಡದ ಸಹಕಾರದಿಂದ ಉತ್ತಮ ಚಿತ್ರವೊಂದು ಇದೇ ಜನವರಿ 12 ಬಿಡುಗಡೆಯಾಗುತ್ತಿದೆ. ನೋಡಿ ಹರಸಿ ಎಂದು ಮನವಿ ಮಾಡಿಕೊಂಡರು.

‘ನಮ್ಮ ಸಿನಿಮಾ ಕನಸಿನ ಜರ್ನಿ ಶುರುವಾಗಿದ್ದು 15 ವರ್ಷದ ಹಿಂದೆ. ನಾಟಕ ಮಾಡಬೇಕಾದರೆ, ನಾವೆಲ್ಲಾ ಬೆಂಗಳೂರಿಗೆ ಹೋಗಿ ಸಿನಿಮಾ ಮಾಡಲು ಆಗುವುದಾ? ಎಂದು ಯೋಚಿಸುತ್ತಿದ್ದೆವು. ಆ ಪೈಕಿ ನಮ್ಮ ಚಿತ್ರದಲ್ಲಿ ನಟಿಸಲು ಮೊದಲು ಬೆಂಗಳೂರಿಗೆ ಬಂದಿದ್ದು ಸ್ನೇಹಿತ ಧನಂಜಯ್. ಆನಂತರ "ಆರ್ಕೇಸ್ಟ್ರಾ ಮೈಸೂರು" ಚಿತ್ರ ಆರಂಭವಾಯಿತು. ಇಡೀ ಮೈಸೂರಿನಲ್ಲಿ ನಮ್ಮ ಚಿತ್ರದ ಚಿತ್ರೀಕರಣ ನಡೆದಿದೆ. ಕಥೆ ಕೇಳಿದ ರಘು ದೀಕ್ಷಿತ್ ನಮ್ಮ ಬೆಂಬಲಕ್ಕೆ ನಿಂತರು. ಡಾಲಿ ಪಿಕ್ಚರ್ಸ್ ಹಾಗೂ ಕೆ.ಆರ್.ಜಿ ಸ್ಟುಡಿಯೋಸ್ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ ಎಂದು ಚಿತ್ರದ ನಾಯಕ ಪೂರ್ಣಚಂದ್ರ ಮೈಸೂರು ಹೇಳಿದರು.

ಇದನ್ನೂ ಓದಿ: Mr Bachelor: ನಾಳೆ ‘MR ಬ್ಯಾಚುಲರ್’ ಆಗಮನ…

ಚಿತ್ರದ ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್, ಮತ್ತೊಬ್ಬ ನಿರ್ಮಾಪಕ ಅಶ್ವಿನ್ ವಿಜಯ್ ಕುಮಾರ್, ನಾಯಕಿ ರಾಜಲಕ್ಷ್ಮೀ, ಸಹ ನಿರ್ದೇಶಕ ಮಹದೇವ್, ಛಾಯಾಗ್ರಾಹಕ ಹಾಗೂ ಸಂಕಲನಕಾರ ಜೋಸೆಫ್ ಕೆ ರಾಜ, ನಟ ನಾಗಭೂಷಣ ಹಾಗೂ ಕೆ.ಆರ್.ಜಿ ಸ್ಟುಡಿಯೋಸ್ ನ ಯೋಗಿ ಚಿತ್ರದ ಕುರಿತು ಇದೇ ವೇಳೆ ಮಾತನಾಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News