ಬೆಂಗಳೂರು: ಚುನಾವಣಾ ಪೂರ್ವ ಕಾಂಗ್ರೆಸ್ ಜನತೆಗೆ ನೀಡಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಉಂಟಾಗಿರುವ ಗೊಂದಲ ವಿಚಾರವನ್ನು ಪ್ರಸ್ತಾಪಿಸಿ ಪ್ರತಿಪಕ್ಷ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಇಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ ನಡೆದು ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ ಉಂಟಾಯಿತು.
ಇದು ಇಷ್ಟಕ್ಕೆ ನಿಲ್ಲದೆ ಬಿಜೆಪಿ ಸದ್ಯರು ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪಕ್ಕೆ ಅವಕಾಶ ನೀಡುವಂತೆ ಪಟ್ಟು ಹಿಡಿದು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದ್ದರಿಂದ ಸದನದ ಕಲಾಪವನ್ನು ಕೆಲಕಾಲ ಮುಂದೂಡಿದ ಪ್ರಸಂಗ ನಡೆಯಿತು. ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ ಮರುದಿನವೇ ವಿಧಾನಸಭೆ ಇಂದು ಬೆಳಗ್ಗೆ ಆರಂಭವಾಗುತ್ತಿದ್ದಂತೆಯೇ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಕಾರ್ಯಸೂಚಿಯಂತೆ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡರು.
ಕಾಂಗ್ರೆಸ್ ಸದಸ್ಯ ಶಿವಲಿಂಗೇಗೌಡರಿಗೆ ಪ್ರಶ್ನೆ ಕೇಳಲು ಆಹ್ವಾನಿಸಿದ ನಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉತ್ತರ ನೀಡಲು ಮುಂದಾಗುತ್ತಿದ್ದಂತೆಯೇ ಏಕಾಏಕಿ ಎದ್ದುನಿಂತ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಸುನೀಲ್ ಕುಮಾರ್ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿಗಳ ವಿಚಾರದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ನಾವು ನಿಲುವಳಿ ಸೂಚನೆ ನೀಡಿದ್ದೇವೆ. ಇದಕ್ಕೆ ಪ್ರಸ್ತಾವಿಕವಾಗಿ ಮಾತನಾಡಲು ಅವಕಾಶ ನೀಡಬೇಕೆಂದು ಸಭಾಧ್ಯಕ್ಷರನ್ನು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ಈಗಾಗಲೇ ಪ್ರಶ್ನೋತ್ತರ ಕಲಾಪ ನಡೆಯುತ್ತಿದೆ. ಶಾಸಕರ ಪ್ರಶ್ನೆಗೆ ಗೃಹಸಚಿವರು ಉತ್ತರ ನೀಡುತ್ತಿದ್ದಾರೆ. ಈ ಹಂತದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಲು ಬರುವುದಿಲ್ಲ. ಪ್ರಶ್ನೋತ್ತರ ಮತ್ತು ಶೂನ್ಯವೇಳೆ ಮುಗಿದ ನಂತರ ಅವಕಾಶ ನೀಡುವುದಾಗಿ ಭರವಸೆ ನೀಡಿದರು. ಇದಕ್ಕೆ ಸಮಾಧಾನಗೊಳ್ಳದ ಬೊಮ್ಮಾಯಿ ಹಾಗೂ ಇತರ ಬಿಜೆಪಿ ಸದಸ್ಯರು, ಪ್ರಶ್ನೋತ್ತರ ಮುಂದೂಡಿ ರೂಲಿಂಗ್ ನೀಡುವ ಮೂಲಕ ನಿಲುವಳಿಗೆ ಪ್ರಸ್ತಾವಿಕವಾಗಿ ಮಾತನಾಡಲು ಅವಕಾಶ ಕೊಡಬೇಕೆಂದು ಪಟ್ಟು ಹಿಡಿದರು.
ಇದನ್ನೂ ಓದಿ: ಬಂಡೀಪುರ ಸಿಎಫ್ಒ ವಿರುದ್ಧ ಭ್ರಷ್ಟಾಚಾರ ಆರೋಪ, ಎಂಎಂಹಿಲ್ಸ್, ಕಾವೇರಿ ಡಿಸಿಎಫ್ ಕೊಡ್ತಾರಂತೆ ಕಿರುಕುಳ
ಈ ವೇಳೆ ಮಧ್ಯಪ್ರವೇಶಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ಸದಸ್ಯರು ಉತ್ಸಾಹದಲ್ಲಿದ್ದಾರೆ. ಅವರ ನುಡಿಮುತ್ತುಗಳನ್ನು ಕೇಳಲು ನಾವು ಸಹ ಕಾತರರಾಗಿದ್ದೇವೆ. ನಾವು 5 ಗ್ಯಾರಂಟಿಗಳನ್ನು ನೀಡಿರುವುದು ಅವರಿಂದ ತಡೆದುಕೊಳ್ಳಲು ಆಗುತ್ತಿಲ್ಲ. ಕಳೆದ 45 ದಿನಗಳಿಂದ ಅವರು ಸಂಕಟ ಅನುಭವಿಸುತ್ತಿದ್ದಾರೆ. ಪ್ರಶ್ನೋತ್ತರ ಕಲಾಪದ ನಂತರ ಚರ್ಚೆಗೆ ಅವಕಾಶ ಕೊಡಿ ಎಂದು ಸಭಾಧ್ಯಕ್ಷರ ಬೆಂಬಲಕ್ಕೆ ನಿಂತರು. ಶಿವಕುಮಾರ್ ಅವರ ಮಾತುಗಳಿಗೆ ಸಮಾಧಾನಗೊಳ್ಳದ ಪ್ರತಿಪಕ್ಷದ ಸದಸ್ಯರು ತಮ್ಮ ನಿಲುವಿಗೆ ಅಂಟಿಕೊಂಡರು. ಈ ಹಂತದಲ್ಲಿ ವಾದ-ವಾಗ್ವಾದ ಜೋರಾಗಿ ನಡೆಯಿತು. ಈ ವೇಳೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಉಚಿತ, ನಿಶ್ಚಿತ, ಖಚಿತಗಳ ಬಗ್ಗೆ ಚರ್ಚೆ ಆಗಲೇಬೇಕು. ನಿಲುವಳಿಗೆ ಪೂರ್ವಭಾವಿಯಾಗಿ ಪ್ರಸ್ತಾಪ ಮಾಡಲು ಅವಕಾಶ ನೀಡಲೇಬೇಕು ಎಂದು ಆಗ್ರಹಿಸಿದರು.
ಗದ್ದಲದ ನಡುವೆಯೇ ಎದ್ದುನಿಂತ ಸಿಎಂ ಸಿದ್ದರಾಮಯ್ಯ, ಪ್ರತಿಪಕ್ಷದ ಸದಸ್ಯರು ನೀಡಿರುವ ನೋಟಿಸ್ ಅನ್ನು ಓದಲಾರಂಭಿಸಿದರು. ನಿಯಮ 60ರ ಮೇರೆಗೆ ನಿಲುವಳಿ ಸೂಚನೆಯಡಿ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಶ್ನೋತ್ತರ ಮತ್ತು ಶೂನ್ಯ ವೇಳೆ ನಂತರ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಅವರೇ ಕೇಳಿದ್ದಾರೆ. ಪ್ರಶ್ನೋತ್ತರ ನಂತರ ಚರ್ಚೆ ಮಾಡಬಹುದಾಗಿದೆ. ಅದರ ಬದಲು ಮೊಂಡಾಟ ಮಾಡುವುದು ಸರಿಯಲ್ಲ ಎಂದದ್ದು ಬಿಜೆಪಿ ಸದಸ್ಯರನ್ನು ಕೆರಳಿಸಿತು.
ಬಿಜೆಪಿ ಹಿರಿಯ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಮೊಂಡಾಟ ಎಂಬ ಪದವನ್ನು ಆಡಿದ್ದು ಸಿದ್ದರಾಮಯ್ಯರಿಗೆ ಶೋಭೆ ತರುವುದಿಲ್ಲ. ಈ ಪದವನ್ನು ಕಡತದಿಂದ ತೆಗೆಸಬೇಕೆಂದು ಒತ್ತಾಯಿಸಿದರು. ಈ ಹಂತದಲ್ಲಿ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಸಿದ್ದರಾಮಯ್ಯರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಲು ಮುಂದಾದರು. ಈ ವೇಳೆ ಮಧ್ಯಪ್ರವೇಶಿಸಿದ ಸಿದ್ದಾರಾಮಯ್ಯನವರು, ನೀವು ಮಂತ್ರಿಯಾಗಿದ್ದವರು, ಭಾವನಾತ್ಮಕವಾಗಿ ಮಾತನಾಡಬೇಡಿ ಎಂದು ಅಶ್ವತ್ಥ್ ನಾರಾಯಣ್ರಿಗೆ ತಿಳಿಸಿದರು.
ನಾನು 5 ವರ್ಷ ಪ್ರತಿಪಕ್ಷದ ನಾಯಕನಾಗಿ ಕೆಲಸ ಮಾಡಿದ್ದೇನೆ. ಪ್ರಶ್ನೋತ್ತಕ್ಕೂ ಮುನ್ನ ಎಂದೂ ನಿಲುವಳಿ ಸೂಚನೆ ಕುರಿತ ಚರ್ಚೆಗೆ ಹಿಂದಿನ ಸಭಾಧ್ಯಕ್ಷರು ಕಾಲಾವಕಾಶ ನೀಡಿಲ್ಲ. ಆ ರೀತಿ ಏನಾದರೂ ಆಗಿರುವ ನಿದರ್ಶನ ತೋರಿಸಲಿ, ನಾನು ಈ ಬಗ್ಗೆ ಮಾತನಾಡುವುದಿಲ್ಲ. ಹಿಂದಿನ ಸಭಾಧ್ಯಕ್ಷರು ನಾವು ಕೊಟ್ಟ ನಿಲುವಳಿ ಸೂಚನೆಗಳನ್ನು ನಿಯಮ 69ಕ್ಕೆ ಪರಿವರ್ತಿಸಿ ಚರ್ಚೆಗೆ ಸಮಯ ನಿಗದಿಪಡಿಸಿದ್ದಾರೆಂದು ಪ್ರತಿಪಕ್ಷದ ಸದಸ್ಯರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು. ಪ್ರತಿಪಕ್ಷಗಳು ಎತ್ತುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು ಸಿದ್ಧರಾಗಿದ್ದೇವೆ. ಹೆದರಿಕೊಂಡು ಹೋಗುವುದಿಲ್ಲವೆಂದು ಹೇಳಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯನವರೇ ಕುಂಭಕರ್ಣ ನಿದ್ದೆಗೆ ಕೊನೆ ಯಾವಾಗ?: ಬಿಜೆಪಿ ವ್ಯಂಗ್ಯ
ಬಸವರಾಜ ಬೊಮ್ಮಾಯಿ ಮಾತನಾಡಿ, ನಿಲುವಳಿಗೆ ಪೂರ್ವಭಾವಿ ಪ್ರಸ್ತಾಪಕ್ಕೆ ನಾವು ಒತ್ತಾಯಿಸುತ್ತಿದ್ದೇವೆ. ಪೂರ್ಣಪ್ರಮಾಣದ ಚರ್ಚೆಗೆ ಪ್ರಶ್ನೋತ್ತರ ನಂತರವೇ ಸಭಾಧ್ಯಕ್ಷರು ಅವಕಾಶ ಕೊಡಲಿ, ಅದು ಅವರ ಪರಮಾಧಿಕಾರ ಎಂದರು. ಈ ನಡುವೆ ಮಾಜಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, ಕ್ರಿಯಾಲೋಪ ಎತ್ತಲು ಮುಂದಾದರು. ಇದಕ್ಕೂ ಜಗ್ಗದ ಬಿಜೆಪಿ ಸದಸ್ಯರು ಸಭಾಧ್ಯಕ್ಷ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದರು. ಈ ನಡುವೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಎದ್ದುನಿಂತು, ನಿಮಗೆ ಪ್ರತಿಪಕ್ಷದ ನಾಯಕರೇ ಇಲ್ಲವೆಂದು ಬಿಜೆಪಿ ವಿರುದ್ಧ ಮೂದಲಿಸಿದರು.
ನಂತರ ಸಭಾಧ್ಯಕ್ಷ ಯು.ಟಿ.ಖಾದರ್, ಬಿಜೆಪಿ ಸದಸ್ಯರ ಧೋರಣೆಯನ್ನು ಆಕ್ಷೇಪಿಸಿ, ನಿಮ್ಮ ಅನುಚಿತ ವರ್ತನೆ ಸರಿಯಲ್ಲ. ರಾಜ್ಯದ ಜನರು ನೋಡುತ್ತಿದ್ದಾರೆ. ನಿಮ್ಮ ನೋಟಿಸ್ನಲ್ಲೇ ಪ್ರಶ್ನೋತ್ತರ ನಂತರ ನಿಲುವಳಿ ಸೂಚನೆಗೆ ಅವಕಾಶ ಕೊಡಿ ಎಂಬುದಾಗಿ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ರೀತಿ ಧರಣಿ ಮಾಡುವುದು ಸರಿಯಲ್ಲ. ನಿಮ್ಮ ನಿಮ್ಮ ಸ್ಥಾನಗಳಿಗೆ ತೆರಳಿ ಕಲಾಪ ನಿಯಮಾವಳಿ ಪ್ರಕಾರ ನಡೆಯಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಸ್ಪೀಕರ್ ಮನವಿಗೆ ಓಗೊಡದ ಬಿಜೆಪಿ ಸದಸ್ಯರು ಧರಣಿ ನಡೆಸಿ ಗದ್ದಲ ಎಬ್ಬಿಸಿದರು. ಇದರ ನಡುವೆಯೇ ಸಭಾಧ್ಯಕ್ಷರು ಸದನವನ್ನು 15 ನಿಮಿಷಗಳ ಕಾಲ ಮುಂದೂಡಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.