ನವದೆಹಲಿ: ವಿರಾಟ್ ಕೊಹ್ಲಿ ಈಗ ಮುಟ್ಟಿದ್ದೆಲ್ಲವೂ ದಾಖಲೆ ಎನ್ನುವಂತಾಗಿದೆ. ಕಳೆದ ಪಂದ್ಯದಲ್ಲಿ ಅತಿ ವೇಗವಾಗಿ ಏಕದಿನ ಕ್ರಿಕೆಟ್ ನಲ್ಲಿ 11 ಸಾವಿರ ರನ್ ಗಳಿಸಿ ಸಾಧನೆ ಮಾಡಿದ್ದ ಕೊಹ್ಲಿ ಈಗ ಮತ್ತೊಂದು ನೂತನ ದಾಖಲೆ ಮಾಡುವ ಹೊಸ್ತಿಲಲ್ಲಿ ಇದ್ದಾರೆ.
ಹೌದು, ಇನ್ನು 104 ರನ್ ಗಳಿಸಿದರೆ ಸಾಕು ಈಗ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ವೇಗವಾಗಿ 20 ಸಾವಿರ ರನ್ ಗಳನ್ನು ಗಳಿಸಿದ ಆಟಗಾರ ಎನ್ನುವ ಖ್ಯಾತಿಗೆ ಒಳಗಾಗಲಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಕೇವಲ 415 ಇನ್ನಿಂಗ್ಸ್ಗಳಲ್ಲಿ 131 ಟೆಸ್ಟ್,222, ಏಕದಿನ ಪಂದ್ಯ ಹಾಗೂ 62 ಟಿ-20 ಪಂದ್ಯಗಳಲ್ಲಿ 19,896ರನ್ ಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗಳಿಸಿದ್ದಾರೆ. ಇದೇ ದಾಖಲೆಯನ್ನು ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ 453 ಇನ್ನಿಂಗ್ಸ್ಗಳಲ್ಲಿ ದಾಖಲೆಯನ್ನು ಸಾಧಿಸಿದ್ದಾರೆ. ಇನ್ನೊಂದೆಡೆಗೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 468 ಇನ್ನಿಂಗ್ಸ್ಗಳನ್ನು ತೆಗೆದುಕೊಂಡಿದ್ದಾರೆ.
ಈ ವಿಶ್ವಪ್ ಕ್ರಿಕೆಟ್ನಲ್ಲಿ ಭಾರತದ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 18 ರನ್ ಗಳಿಸಿದರು. ತದನಂತರ ಆಸ್ಟ್ರೇಲಿಯಾ ವಿರುದ್ಧ 82 ರನ್, ಪಾಕಿಸ್ತಾನದ ವಿರುದ್ಧ 77 ರನ್ ಗಳಿಸಿದರು. ಸದ್ಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮಳೆ ಕಾರಣದಿಂದಾಗಿ ರದ್ದು ಆಗಿದ್ದು ಬಿಟ್ಟರೆ ಉಳಿದೆಲ್ಲ ಪಂದ್ಯಗಳನ್ನು ಸುಲಭವಾಗಿ ಗೆದ್ದಿದೆ. ವಿಶ್ವಕಪ್ ಟೂರ್ನಿಯ ಅಂಕಗಳ ಪಟ್ಟಿಯಲ್ಲಿ ಭಾರತ ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿದೆ.