Israel-Palestine War : ಪ್ಯಾಲೆಸ್ತೀನಿನ ಉಗ್ರಗಾಮಿಗಳು ಶನಿವಾರ, ಅಕ್ಟೋಬರ್ 7ರ ಬೆಳಗ್ಗೆ ಜೆರುಸಲೇಮ್ ಮತ್ತು ಇಸ್ರೇಲಿನ ಇತರ ನಗರಗಳನ್ನು ಗುರಿಯಾಗಿಸಿ, ಗಾಜಾ ಪಟ್ಟಿಯಂದ 5,000ಕ್ಕೂ ಹೆಚ್ಚು ರಾಕೆಟ್ ದಾಳಿ ನಡೆಸಿದ್ದಾರೆ. ಈ ಮೂಲಕ ಆರಂಭಗೊಂಡ ನೂತನ ಯುದ್ಧದಲ್ಲಿ, 100ಕ್ಕೂ ಹೆಚ್ಚು ಇಸ್ರೇಲಿ ನಾಗರಿಕರು ಮತ್ತು 200ಕ್ಕೂ ಹೆಚ್ಚು ಪ್ಯಾಲೆಸ್ತೀನ್ ನಾಗರಿಕರು ಸಾವಿಗೀಡಾಗಿದ್ದಾರೆ. ನೂರಾರು ಹಮಾಸ್ ಉಗ್ರಗಾಮಿಗಳು ಎಸ್ಯುವಿಗಳಲ್ಲಿ, ದ್ವಿಚಕ್ರ ವಾಹನಗಳ ಮೂಲಕ, ಪ್ಯಾರಾಗ್ಲೈಡರ್ಗಳ ಮೂಲಕ ಇಸ್ರೇಲ್ ಒಳಗೆ ನುಗ್ಗಿ, ಇಸ್ರೇಲ್ ನಾಗರಿಕರ ಮೇಲೆ ಅರ್ಧ ಗಂಟೆಗೂ ಹೆಚ್ಚು ಕಾಲ ಗುಂಡಿನ ದಾಳಿ ನಡೆಸಿದ್ದಾರೆ. ಇಸ್ರೇಲಿ ಸುದ್ದಿಪತ್ರಿಕೆ ಹಾರೆಟ್ಜ್ ಈ ಕುರಿತು ವರದಿ ಮಾಡಿದ್ದು, ದಕ್ಷಿಣ ಇಸ್ರೇಲಿನಲ್ಲಿರುವ ನಾಗರಿಕರು ಭದ್ರತಾ ಪಡೆಗಳನ್ನು ಕಳುಹಿಸುವಂತೆ ಸೇನೆಯನ್ನು ಬೇಡಿಕೊಳ್ಳುತ್ತಿದ್ದಾರೆ ಎಂದಿದೆ. ಹಮಾಸ್ ಉಗ್ರರು ನಮ್ಮನ್ನು ಹತ್ಯೆಗೈಯುತ್ತಿದ್ದು, ಸಹಾಯದ ಅವಶ್ಯಕತೆಯಿದೆ ಎಂದು ಮೊರೆಯಿಡುತ್ತಿದ್ದಾರೆ ಎಂದಿದೆ.
ವರದಿಯೊಂದರ ಪ್ರಕಾರ, ಹಮಾಸ್ ಮುಖಂಡ ಸಾಲೆಹ್ ಅಲ್ ಅರೌರಿ ತನ್ನ ಹೇಳಿಕೆಯಲ್ಲಿ "ಪ್ಯಾಲೆಸ್ತೀನ್ ಬಳಿ ಇಸ್ರೇಲಿನ ಜೈಲಿನಲ್ಲಿರುವ ಪ್ಯಾಲೆಸ್ತೀನಿ ಖೈದಿಗಳನ್ನು ಬಿಡಿಸಿಕೊಳ್ಳುವಷ್ಟು ಇಸ್ರೇಲಿ ಒತ್ತೆಯಾಳುಗಳಿದ್ದಾರೆ" ಎಂದಿದ್ದಾರೆ. ಇಸ್ರೇಲ್ ಯುದ್ಧ ಪರಿಸ್ಥಿತಿ ಘೋಷಿಸಿದ್ದು, ವಾಯು ದಾಳಿಗಳು ಮತ್ತು ಭೂ ಕಾರ್ಯಾಚರಣೆಗಳ ಮೂಲಕ ಗಾಜಾ ಪಟ್ಟಿಯಲ್ಲಿರುವ ಹಮಾಸ್ ನೆಲೆಗಳನ್ನು ಗುರಿಯಾಗಿಸಿದೆ. ಈ ಕದನದ ಪರಿಣಾಮವಾಗಿ, ಭಾರೀ ಸಾವುನೋವುಗಳು ಮತ್ತು ವಿನಾಶ ಸಂಭವಿಸಿದೆ. ಅಂತಾರಾಷ್ಟ್ರೀಯ ಸಮುದಾಯ ತಕ್ಷಣವೇ ಕದನ ವಿರಾಮ ಘೋಷಿಸುವಂತೆ ಆಗ್ರಹಿಸಿದ್ದು, ಇಸ್ರೇಲ್ - ಪ್ಯಾಲೆಸ್ತೀನ್ ನಡುವಿನ ದೀರ್ಘಕಾಲದ ವಿವಾದಕ್ಕೆ ಶಾಂತಿಯುತ ಪರಿಹಾರ ಕಂಡುಹಿಡಿಯಬೇಕು ಎಂದಿದೆ.
ಈ ಯುದ್ಧ ಭಾರತದ ಮೇಲೆ ಬೀರುವ ಪರಿಣಾಮಗಳೇನು?
ಇಸ್ರೇಲಿನ ಯುದ್ಧ ಭಾರತದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರಿದೆ. ಮೊದಲನೆಯದಾಗಿ, ಪ್ರಮುಖ ವಿಮಾನಯಾನ ಸಂಸ್ಥೆಗಳು ಯುದ್ಧ ಆರಂಭಗೊಂಡ ತಕ್ಷಣವೇ ಇಸ್ರೇಲ್ ಒಳಗೆ ಮತ್ತು ಹೊರಗೆ ಪ್ರಯಾಣದ ಮೇಲೆ ತಕ್ಷಣವೇ ನಿರ್ಬಂಧ ಹೇರಿವೆ. ಏರ್ ಇಂಡಿಯಾ ಶನಿವಾರ ದೆಹಲಿಯಿಂದ ಟೆಲ್ ಅವೀವ್ ನಗರಕ್ಕೆ ವಿಮಾನವನ್ನು ನಿಷೇಧಿಸಿದ್ದು, ಅಲ್ಲಿಂದ ದೆಹಲಿಗೆ ಮರು ಪ್ರಯಾಣವನ್ನೂ ರದ್ದುಗೊಳಿಸಿದೆ.
ಇದನ್ನೂ ಓದಿ : ಈ ದೇಶದ ಸುಂದರ 'ರಾಜಕುಮಾರಿ' ಇದೀಗ ಮತ್ತೆ ಸುದ್ದಿಯಲ್ಲಿದ್ದಾಳೆ, ಕಾರಣ ಇಲ್ಲಿದೆ
ಪ್ರಾದೇಶಿಕವಾಗಿ ಪ್ರಬಲ ಶಕ್ತಿ ಮತ್ತು ಇಸ್ರೇಲಿನ ಕಾರ್ಯತಂತ್ರದ ಸಹಯೋಗಿಯೂ ಆಗಿರುವ ಭಾರತ ಮಧ್ಯ ಪೂರ್ವದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತ ಇಸ್ರೇಲ್ ಕುರಿತು ಸಹಾನುಭೂತಿ ವ್ಯಕ್ತಪಡಿಸಿದ್ದು, ಹಮಾಸ್ ಉಗ್ರಗಾಮಿಗಳ ಉಗ್ರ ಕೃತ್ಯವನ್ನು ಖಂಡಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಇಸ್ರೇಲ್ ಜೊತೆಯಾಗಿ ನಿಂತಿದೆ ಎಂದಿದ್ದು, ಮೃತಪಟ್ಟ ಅಮಾಯಕರು ಮತ್ತು ಅವರ ಕುಟುಂಬಸ್ತರ ಭಾರತದ ಯೋಚನೆಗಳು ಮತ್ತು ಪ್ರಾರ್ಥನೆಗಳಿವೆ ಎಂದಿದ್ದಾರೆ. ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಡನೆ ಮಾತುಕತೆ ನಡೆಸಿದ್ದು, ಆಕ್ರಮಣಶೀಲತೆಯ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳಲು ಇಸ್ರೇಲಿಗೆ ಹಕ್ಕಿದ್ದು, ಅದಕ್ಕೆ ಭಾರತದ ಬೆಂಬಲವಿದೆ ಎಂದಿದ್ದಾರೆ.
ಈ ಹಿಂದೆ ಭಾರತದ ಸಂಕಷ್ಟದ ಸಮಯದಲ್ಲಿ ಇಸ್ರೇಲ್ ಸಹಾಯ ನೀಡಿದ್ದು, ಅದರಲ್ಲೂ 1999ರ ಕಾರ್ಗಿಲ್ ಯುದ್ಧದಲ್ಲಿ ಇಸ್ರೇಲ್ ಬೆಂಬಲಿಸಿದೆ. ಇಸ್ರೇಲ್ ಭಾರತಕ್ಕೆ ಮೋರ್ಟರ್, ಆಯುಧಗಳು, ಲೇಸರ್ ನಿರ್ದೇಶಿತ ಕ್ಷಿಪಣಿಗಳು, ಹಾಗೂ ವಿಚಕ್ಷಣಾ ಡ್ರೋನ್ಗಳನ್ನು ಒದಗಿಸಿ, ಪಾಕಿಸ್ತಾನದ ದುರಾಕ್ರಮಣವನ್ನು ಎದುರಿಸಲು ನೆರವಾಯಿತು. ಅಂದಿನಿಂದ, ಭಾರತ ಮತ್ತು ಇಸ್ರೇಲ್ ಬಲವಾದ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಸ್ಥಾಪಿಸಿದ್ದು, ಇಸ್ರೇಲ್ ಭಾರತದ ಅತಿದೊಡ್ಡ ಆಯುಧ ಮತ್ತು ಮಿಲಿಟರಿ ಉಪಕರಣಗಳ ಪೂರೈಕೆದಾರನಾಗಿದೆ. ಭಾರತ ಮತ್ತು ಇಸ್ರೇಲ್ಗಳು ಕೃಷಿ, ನೀರಿನ ನಿರ್ವಹಣೆ, ಆವಿಷ್ಕಾರ, ಶಿಕ್ಷಣ ಮತ್ತು ಸಂಸ್ಕೃತಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಹಯೋಗ ಹೊಂದಿವೆ.
ಬದಲಾಗುತ್ತಾ ಬಂದಿರುವ ನೀತಿಗಳು
ಇಸ್ರೇಲ್ - ಪ್ಯಾಲೆಸ್ತೀನ್ ವಿವಾದಕ್ಕೆ ಸಂಬಂಧಿಸಿದಂತೆ ಭಾರತದ ನಿಲುವು ಕಾಲಕಾಲಕ್ಕೆ ಬದಲಾಗುತ್ತಾ ಬಂದಿದೆ. ಸ್ವಾತಂತ್ರ್ಯಾನಂತರ ನಾಲ್ಕು ದಶಕಗಳ ಕಾಲ ಭಾರತ ನಿಸ್ಸಂದಿಗ್ಧವಾಗಿ ಪ್ಯಾಲೆಸ್ತೀನ್ ಅನ್ನು ಬೆಂಬಲಿಸಿತ್ತು. ಅದಾದ ಬಳಿಕ, ಮೂರು ದಶಕಗಳ ಕಾಲ ಇಸ್ರೇಲ್ ಜೊತೆಗೂ ಸ್ನೇಹ ಸಂಬಂಧವನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ, ಭಾರತದ ನೀತಿಗಳನ್ನು ಇಸ್ರೇಲ್ ಪರ ಎಂದು ಪರಿಗಣಿತವಾಗಿದ್ದು, ಅದರಲ್ಲೂ ಮೋದಿಯವರು 2017ರಲ್ಲಿ ಇಸ್ರೇಲ್ಗೆ ಭೇಟಿ ನೀಡಿ, ಇಸ್ರೇಲಿಗೆ ತೆರಳಿದ ಮೊದಲ ಭಾರತೀಯ ಪ್ರಧಾನಿ ಎನಿಸಿದರು. ಭಾರತ ತಾನು ಎರಡೂ ರಾಷ್ಟ್ರಗಳು ಪರಸ್ಪರ ಗುರುತಿಸುವಿಕೆ ಮತ್ತು ಸಹಬಾಳ್ವೆ ನಡೆಸುವಂತಹ ದ್ವಿರಾಷ್ಟ್ರ ಸಿದ್ಧಾಂತವನ್ನು ಬೆಂಬಲಿಸುವುದಾಗಿ ಹೇಳಿದೆ. ಆದರೆ ಭಾರತ ಇಸ್ರೇಲನ್ನು ಟೀಕಿಸುವಂತಹ ವಿಶ್ವಸಂಸ್ಥೆಯ ಹಲವು ನಿರ್ಣಯಗಳಲ್ಲಿ ಮತ ಚಲಾಯಿಸದೆ ದೂರ ಉಳಿದಿದೆ.
ಈ ಯುದ್ಧದ ಪರಿಣಾಮವಾಗಿ, ಭಾರತ ಮತ್ತು ಇಸ್ರೇಲ್ ನಡುವಿನ ವ್ಯಾಪಾರ ಮತ್ತು ರಕ್ಷಣಾ ಸಹಕಾರ ತೊಂದರೆಗೊಳಗಾಗಬಹುದು. ಅದರೊಡನೆ, ಈ ಪ್ರದೇಶದ ಇತರ ರಾಷ್ಟ್ರಗಳಾದ ಇರಾನ್, ಸೌದಿ ಅರೇಬಿಯಾ, ಟರ್ಕಿಗಳೊಡನೆ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಭಾರತ ಇರಾನ್ ಜೊತೆಗೆ ಸಂಕೀರ್ಣ ಮತ್ತು ಸೂಕ್ಷ್ಮ ಸಂಬಂಧ ಹೊಂದಿದ್ದು, ಇರಾನ್ ಭಾರತಕ್ಕೆ ತೈಲದ ಮೂಲವಾಗಿದ್ದು, ಭಾರತವನ್ನು ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾಗೆ ಸಂಪರ್ಕಿಸುವ ಚಾಬಹಾರ್ ಬಂದರು ನಿರ್ಮಾಣಕ್ಕೆ ಸಹಯೋಗಿಯಾಗಿದೆ. ಇರಾನ್ ಪ್ಯಾಲೆಸ್ತೀನಿನ ಪ್ರಬಲ ಬೆಂಬಲಿಗನಾಗಿದ್ದು, ಇಸ್ರೇಲಿನ ವಿರೋಧಿಯಾಗಿದೆ. ಭಾರತ ಎರಡೂ ಬದಿಗಳೊಡನೆ ಸಮತೋಲಿತ ಸಂಬಂಧ ಹೊಂದಲು ಪ್ರಯತ್ನಿಸುತ್ತಿದ್ದು, ಈಗ ವಿಷಮಗೊಳ್ಳುತ್ತಿರುವ ಪರಿಸ್ಥಿತಿಯ ಮಧ್ಯೆ ತನ್ನ ತಟಸ್ಥ ನೀತಿಯನ್ನು ಅನುಸರಿಸಲು ಕಷ್ಟವಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ : Viral News: ಭಿಕ್ಷಾಟನೆಗಾಗಿ ವಿಮಾನದಲ್ಲಿ ಸೌದಿಗೆ ತೆರಳುತ್ತಿದ್ದ 16 ಪಾಕಿಸ್ತಾನಿ ಭಿಕ್ಷುಕರ ಬಂಧನ!
ಭಾರತ ಸೌದಿ ಅರೇಬಿಯಾ, ಟರ್ಕಿಗಳೊಡನೆಯೂ ಸೌಹಾರ್ದ ಸಂಬಂಧ ಹೊಂದಿದ್ದು, ಅವುಗಳು ಭಾರತದ ಪಾಲಿಗೆ ಶಕ್ತಿ ಸುರಕ್ಷತೆ ಮತ್ತು ಆರ್ಥಿಕ ಉದ್ದೇಶಗಳಿಗೆ ಅವಶ್ಯಕವಾಗಿದೆ. ಆದರೆ, ಎರಡು ರಾಷ್ಟ್ರಗಳೂ ಇಸ್ರೇಲಿನ ಕ್ರಮಗಳನ್ನು ಖಂಡಿಸಿದ್ದು, ಪ್ಯಾಲೆಸ್ತೀನ್ ಜೊತೆ ಸೌಹಾರ್ದತೆಯನ್ನು ವ್ಯಕ್ತಪಡಿಸಿವೆ. ಸೌದಿ ಅರೇಬಿಯಾ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಶನ್ (ಒಐಸಿ) ತುರ್ತು ಸಭೆಯನ್ನು ಕರೆದಿದ್ದು, ಉದ್ವಿಗ್ನ ಪರಿಸ್ಥಿತಿಯನ್ನು ಕುರಿತು ಚರ್ಚಿಸಲಿದೆ. ಟರ್ಕಿ ಈಗಾಗಲೇ ಇಸ್ರೇಲ್ ಮೇಲೆ ಮಾನವಕುಲದ ವಿರುದ್ಧ ನರಮೇಧ ನಡೆಸುತ್ತಿದೆ ಎಂದು ಅರೋಪಿಸಿದೆ. ಭಾರತ ಈ ರಾಜತಾಂತ್ರಿಕ ಭಿನ್ನತೆಗಳನ್ನು ಜಾಗರೂಕವಾಗಿ ನಿಭಾಯಿಸಿ, ದ್ವಿಪಕ್ಷೀಯ ಸಂಬಂಧಗಳ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕಾಗುತ್ತದೆ.
ಆಂತರಿಕ ಒತ್ತಡದ ನಿರ್ವಹಣೆ
ಇಸ್ರೇಲ್ - ಪ್ಯಾಲೆಸ್ತೀನ್ ನಡುವಿನ ಚಕಮಕಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸಕ್ರಿಯ ಪಾತ್ರ ನಿರ್ವಹಿಸುವಂತೆ ಭಾರತದ ಮೇಲೆ ದೇಶೀಯ ಮುಸ್ಲಿಂ ಸಮುದಾಯ ಮತ್ತು ಅಂತಾರಾಷ್ಟ್ರೀಯ ಸಮುದಾಯಗಳು ಒತ್ತಡ ಹೇರುವ ಸಾಧ್ಯತೆಗಳಿವೆ. ಭಾರತದಲ್ಲಿ 200 ಮಿಲಿಯನ್ಗೂ ಹೆಚ್ಚು ಮುಸ್ಲಿಮರಿದ್ದು, ಭಾರತದ ಜನಸಂಖ್ಯೆಯ 14% ಪಾಲು ಹೊಂದಿದ್ದಾರೆ. ಅವರಲ್ಲಿ ಬಹುಪಾಲು ಜನರು ಪ್ಯಾಲೆಸ್ತೀನ್ ಕುರಿತು ಸಹಾನುಭೂತಿ ವ್ಯಕ್ತಪಡಿಸಿದ್ದು, ಪ್ರತಿಭಟನೆ, ಸಾಮಾಜಿಕ ಜಾಲತಾಣಗಳು, ದೇಣಿಗೆ ನೀಡುವ ಮೂಲಕ ಬೆಂಬಲ ನೀಡಿದ್ದಾರೆ. ಹಲವು ಮುಸ್ಲಿಂ ಮುಖಂಡರು ಸರ್ಕಾರಕ್ಕೆ ಇಸ್ರೇಲ್ ವಿರುದ್ಧ ಕಠಿಣ ನಿರ್ಧಾರ ಕೈಗೊಳ್ಳುವಂತೆ ಆಗ್ರಹಿಸಿದ್ದು, ಶಾಂತಿ ಸ್ಥಾಪನೆ ನಡೆಸಲು ಪ್ರಯತ್ನ ನಡೆಸುವಂತೆ ಒತ್ತಾಯಿಸಿದ್ದಾರೆ. ಪ್ರಸ್ತುತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯನಲ್ಲದ ಭಾರತ, ಭದ್ರತಾ ಮಂಡಳಿಯಲ್ಲಿ ರಚನಾತ್ಮಕ ಪಾತ್ರ ನಿರ್ವಹಿಸಬೇಕೆಂಬ ನಿರೀಕ್ಷೆಗಳಿವೆ.
ಲೇಖಕರು - ಗಿರೀಶ್ ಲಿಂಗಣ್ಣ (ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.