ಬಿಜೆಪಿ ಈಗಲೂ ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬರುತ್ತಿದೆ: ವಿ.ಎಸ್. ಉಗ್ರಪ್ಪ ಆರೋಪ

ರಾಜ್ಯಪಾಲರ ನಿಲುವು ಸಂವಿಧಾನ ಬಾಹಿರ ಹಾಗೂ ಜನಾದೇಶಕ್ಕೆ ವಿರುದ್ಧವಾದದ್ದಾಗಿದೆ. ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಎಸಗುತ್ತಿರುವ ಅಪಚಾರ- ವಿ.ಎಸ್. ಉಗ್ರಪ್ಪ  

Last Updated : Jul 26, 2019, 04:14 PM IST
ಬಿಜೆಪಿ ಈಗಲೂ ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬರುತ್ತಿದೆ: ವಿ.ಎಸ್. ಉಗ್ರಪ್ಪ ಆರೋಪ title=
File Image

ಬೆಂಗಳೂರು:  ಬಹುಮತ ಇಲ್ಲದೇ ಇದ್ದರೂ ಸರ್ಕಾರ ರಚನೆಗೆ ಬಿಜೆಪಿಗೆ ರಾಜ್ಯಪಾಲರು ಆಹ್ವಾನ ನೀಡಿರುವ ಕ್ರಮ ಕಾನೂನು ಬಾಹಿರ. ಬಿಜೆಪಿ ಈಗಲೂ ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬರುತ್ತಿದೆ ಎಂದು ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಎಸ್. ಉಗ್ರಪ್ಪ, ರಾಜ್ಯ ವಿಧಾನಸಭೆಯ ಸಂಖ್ಯೆ 225 ಅದರಲ್ಲಿ ಮೂವರು ಅನರ್ಹಗೊಂಡಿದ್ದಾರೆ, ಉಳಿದವರು 222. ಸರ್ಕಾರ ರಚನೆಗೆ 111 ಶಾಸಕರ ಬಲ ಅವಶ್ಯತೆ ಇದೆ. ಆದರೆ ಬಿಜೆಪಿ ಕೇವಲ 105 ಶಾಸಕರ ಬಲ ಹೊಂದಿದೆ. ಕಾಂಗ್ರೆಸ್ -ಜೆಡಿಎಸ್ ಸಂಖ್ಯೆ 101 ಇದೆ. ಹದಿಮೂರು ಶಾಸಕರ ಅನರ್ಹ ಪ್ರಕರಣ ಇನ್ನೂ ಬಾಕಿ ಇದೆ. ಅಲ್ಪ ಮತದ ಪಕ್ಷಕ್ಕೆ ರಾಜ್ಯಪಾಲರು ಅವಕಾಶ ನೀಡುತ್ತಿದ್ದಾರೆ. ರಾಜ್ಯಪಾಲರು ಕುದುರೆ ವ್ಯಾಪಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯಪಾಲರು ಯೋಚನೆ ಮಾಡದೇ ಬಿ.ಎಸ್. ಯಡಿಯೂರಪ್ಪ ಅವರಿಗೆ ಪ್ರಮಾಣವಚನಕ್ಕೆ ಅವಕಾಶ ನೀಡಿದ್ದು ಹೇಗೆ? ನಿಮಗೆ 112 ಜನರ ಬಹುಮತ ಇದೆಯಾ ಎಂಬ ಬಗ್ಗೆ ರಾಜ್ಯಪಾಲರು ಬಿ.ಎಸ್.ಯಡಿಯೂರಪ್ಪ ಅವರನ್ನು ಕೇಳಬೇಕಿತ್ತು. ಆದರೆ, ಅವರೇ ಕುದುರೆ ವ್ಯಾಪಾರದ ಮೂಲಕ ರಚನೆ ಆಗಲಿರುವ ಯಡಿಯೂರಪ್ಪ ಅವರ ಸರ್ಕಾರದ ರಚನೆಗೆ ಆವಕಾಶ ನೀಡಿದ್ದು ಖಂಡನೀಯ. ರಾಜ್ಯಪಾಲರ ನಿಲುವು ಸಂವಿಧಾನ ಬಾಹಿರ ಹಾಗೂ ಜನಾದೇಶಕ್ಕೆ ವಿರುದ್ಧವಾದದ್ದಾಗಿದೆ. ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಎಸಗುತ್ತಿರುವ ಅಪಚಾರ ಎಂದರು.

Trending News