ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಈ ಬಾರಿ ದುರ್ಗಾ ಪೂಜೆಗೆ ಮುಂಚಿತವಾಗಿ ಬಿಜೆಪಿ ಸಿದ್ಧತೆ ಆರಂಭಿಸಿದ್ದು, ಜನರನ್ನು ಪಕ್ಷದತ್ತ ಸೆಳೆದು, ಉತ್ತಮ ಸಂಪರ್ಕ ಸಾಧಿಸಲು ದುರ್ಗಾ ಪೂಜಾ ಸ್ಪರ್ಧೆ ಏರ್ಪಡಿಸಿದೆ.
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಈ ಮಾಸ್ಟರ್ ಪ್ಲಾನ್ ಮಾಡಿದ್ದು, ಪಕ್ಷ ಬಲವರ್ಧನೆಗಾಗಿ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಲು ದುರ್ಗಾ ಪೂಜಾ ಸ್ಪರ್ಧೆಯನ್ನು ಆಯೋಜಿಸಿದ್ದು, ಇದನ್ನೇ ಪ್ರಬಲ ಅಸ್ತ್ರವಾಗಿ ಬಳಸಿದೆ.
ಈ ಸ್ಪರ್ಧೆಯು ದುರ್ಗಾ ಪೂಜಾ ಪೆಂಡಾಲ್ ನ ಅಲಂಕಾರವಾಗಲೀ, ದುರ್ಗಾ ಮಾತೆಯ ವಿಗ್ರಹದ ಸೌಂದರ್ಯವನ್ನಾಗಲೀ ಅವಲಂಬಿಸಿಲ್ಲ. ಪೂಜೆಯ ಆಚರಣೆ ಹಾಗೂ ಸಂಪ್ರದಾಯಬದ್ಧತೆ ಮೇಲೆ ಅವಲಂಬಿತವಾಗಿರಲಿದೆ. ಯಾವ ದುರ್ಗಾ ಪೂಜಾ ಸಮಿತಿಯು ಉತ್ತಮವಾಗಿ ಪೂಜಾ ವಿಧಿವಿಧಾನ ಮತ್ತು ಆಚರಣೆ ನಡೆಸುತ್ತದೆಯೋ ಆ ಸಮಿತಿಗೆ ಬಹುಮಾನ ದೊರೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆದರೆ, ಬಹುಮಾನ ಏನು ಎಂಬುದನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ಪ್ರಸ್ತುತ ಪಶ್ಚಿಮ ಬಂಗಾಳದ 42000ಕ್ಕೂ ಹೆಚ್ಚು ಸ್ಥಳಗಳಲ್ಲಿ ದುರ್ಗಾ ಪೂಜೆಯನ್ನು ಆಯೋಜಿಸಲಾಗಿದ್ದು, ಇದರಲ್ಲಿ ಸುಮಾರು 200 ಆರಾಧನಾ ಸಮಿತಿಗಳು ತೃಣಮೂಲ ಕಾಂಗ್ರೆಸ್ ವಶದಲ್ಲಿವೆ. ಈ ಬಗ್ಗೆ ಬಿಜೆಪಿ ಮುಖಂಡ ಮುಕುಲ್ ರಾಯ್ ಪಕ್ಷದ ಇತರ ಮುಖಂಡರೊಂದಿಗೆ ಸಭೆ ನಡೆಸಿದ್ದು, ಈ ಯೋಜನೆಯ ಸಂಪೂರ್ಣ ಜವಾಬ್ದಾರಿ ಹೊರಲಿದ್ದಾರೆ ಎನ್ನಲಾಗಿದೆ.