ಹಾಸನ: ನಾನು ಅವರಿಗೆ ಲೆಕ್ಕಕ್ಕೆ ಇದೀನಾ? ಅವರಿಗೆ ಸರಿಸಾಟಿ ಇದೀನಾ ಇಲ್ಲವಾ? ಎಂಬುದನ್ನು ಜನರು ಚುನಾವಣೆಯಲ್ಲಿಯೇ ತೀರ್ಮಾನ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ರಾಮನಾಥಪುರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾಧ್ಯಮಗಳ ಜತೆ ಅವರು ಮಾತನಾಡಿದರು.
ಇದನ್ನೂ ಓದಿ: ಸಂಜು ಸ್ಯಾಮ್ಸನ್ ಪತ್ನಿ ಯಾರು ಗೊತ್ತಾ? ಈಕೆಯ ಅಂದದ ಮುಂದೆ ಅನುಷ್ಕಾ, ಸಾಕ್ಷಿ ಯಾವ ಲೆಕ್ಕಾ! ಅಂಥಾ ಸೌಂದರ್ಯದ ಗಣಿ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಖಾರವಾಗಿ ತಿರುಗೇಟು ಕೊಟ್ಟ ಅವರು; ಹೊಸ ತೊಡಕು ದಿನ ನಮ್ಮ ತೋಟದಲ್ಲಿ ಏನು ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನನಗೆ ಅಷ್ಟು ಜ್ಞಾನ ಇಲ್ಲವೇ? ಆದರೆ ಊಟವನ್ನೇ ದೊಡ್ಡ ವಿವಾದ ಮಾಡುತ್ತಿರುವ ಕಾಂಗ್ರೆಸ್ ನವರು ಅದೆಷ್ಟು ಹತಾಶರಾಗಿದ್ದಾರೆ ಎನ್ನುವುದು ಇದರಿಂದ ಅರ್ಥವಾಗುತ್ತದೆ ಎಂದರು.
ನಾನು ಜಾತಿ ಆಧಾರದಲ್ಲಿ ರಾಜಕಾರಣ ಮಾಡಿದವನಲ್ಲ. ಪಾಪ ನನ್ನ ಸ್ನೇಹಿತರಿಗೆ ಹಣದ ಮದ ನೆತ್ತಿಗೇರಿದೆ. ಕುಮಾರಸ್ವಾಮಿ ನನಗೆ ಡೋಂಟ್ ಕೇರ್ ಅಂದಿದ್ದಾರೆ, ನಾನೇನು ಲೆಕ್ಕಕ್ಕೆ ಇಟ್ಟಿಕೋ ಎಂದು ಹೇಳಿದ್ದೀನಾ? ರಾಜ್ಯದ ಜನ ತೀರ್ಮಾನ ಮಾಡುತ್ತಾರೆ. ಇವರ ಹಣ ಅಧಿಕಾರ ಯಾವುದನ್ನೂ ತೀರ್ಮಾನ ಮಾಡಲ್ಲ. ಆರೂವರೆ ಕೋಟಿ ಜನ ಕುಮಾರಸ್ವಾಮಿ ಅವಶ್ಯಕತೆ ಇದೆಯೊ ಇಲ್ಲವೊ ಎಂದು ತೀರ್ಮಾನ ಮಾಡುತ್ತಾರೆ. ಅವರು ಏನೋ ಐ ಆಮ್ ಸ್ಟ್ರೈಟ್ ಫೈಟರ್ ಎಂದು ಹೇಳಿದಾರೆ. ಹೌದು ಕಣಪ್ಪ ನನಗೂ ಗೊತ್ತು, ನೀನು ಸ್ಟ್ರೈಟ್ ಪೈಟರ್ ಅಂತ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಗುಡುಗಿದರು.
ಕೊತ್ಚಾಲ್ ರಾಮಚಂದ್ರನ ಗರಡಿಯಲ್ಲಿ ಬಂದಿರುವವರು ನೀವು. ನೀವು ಸ್ಟ್ರೈಟ್ ಫೈಟರ್ ಆಗಿದ್ದರೆ ವಿಧಾನಸೌಧದಲ್ಲಿ ಪೈಟ್ ಮಾಡ್ತೀರಾ. ನೀವು ಬಂದಿರುವ ಹಿನ್ನೆಲೆ ಅಂತದ್ದೇ ಅಲ್ಲವೇ? ನಿಮ್ಮಮದ ಇದೆಯಲ್ಲ, ಅದನ್ನು ಇಳಿಸುವ ಕಾಲ ಸನಿಹಕ್ಕೆ ಬಂದಿದೆ ಎಂದು ಕಿಡಿಕಾರಿದರು.
ಅವನ್ಯಾರೋ ಹೇಳುತ್ತಾನೆ, ನನ್ನ ಆದಾಯ ಆಲೂಗಡ್ಡೆ ಬೆಳೆದು ಬಂದಿದ್ದು ಎಂದು. ಬಂದು ನನ್ನ ತೋಟ ನೋಡಪ್ಪ ಮಹಾನುಭಾವ.. ನಾನು ಇನ್ನೊಬ್ಬರ ಥರ ಸರಕಾರದ ಜಾಗಕ್ಕೆ ಬೇಲಿ ಹಾಕಿ ಸಂಪಾದನೆ ಮಾಡಿಲ್ಲ. ಕಷ್ಟಪಟ್ಟು ಅಸ್ತಿ ಸಂಪಾದನೆ ಮಾಡಿದ್ದೇವೆ ಎಂದು ತಿರುಗೇಟು ಕೊಟ್ಟರು.
ಆದಿಚುಂಚನಗಿರಿ ಶ್ರೀಗಳ ಪೋನ್ ಟ್ಯಾಪಿಂಗ್ ಬಗ್ಗೆ ಸಚಿವ ಚೆಲುವರಾಯಸ್ವಾಮಿ ಮಾಡಿರುವ ಆರೋಪದ ಬಗ್ಗೆ ತೀಕ್ಷ್ಣವಾಗಿ ಉತ್ತರಿಸಿದ ಅವರು, ನಾನು ಫೋನ್ ಟ್ಯಾಪಿಂಗ್ ಮಾಡಿಕೊಳ್ಳುತ್ತಿದ್ದರೆ ನನ್ನ ಸರ್ಕಾರವನ್ನು ಯಾಕೆ ಬೀಳಿಸಿಕೊಳ್ಳುತ್ತಿದ್ದೆ? ಅವರು ತನಿಖೆ ಮಾಡಿಕೊಳ್ಳಲಿ, ಈವರೆಗೆ ತನಿಖೆ ಮಾಡಿದರಲ್ಲ, ಅದು ಏನಾಯಿತು? ಎಂದು ತರಾಟೆಗೆ ತೆಗೆದುಕೊಂಡರು.
ಆದಿಚುಂಚನಗಿರಿ ಮಠಕ್ಕೆ ಪರ್ಯಾಯವಾಗಿ ಮಠ ಮಾಡಿದರು ಎನ್ನುವ ಬಗ್ಗೆ ಕೇಳಲಾದ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಅವರು, ಬೇರೆ ಸಮುದಾಯಗಳಲ್ಲೂ ಎಷ್ಟು ಮಠಗಳಿಲ್ಲ? ನಮ್ಮ ಸಮುದಾಯದಲ್ಲೂ ಅಂಥ ಬೆಳವಣಿಗೆ ಆಗಲಿ ಎಂದು ಇನ್ನೊಬ್ಬರಿಗೂ ಸಹಾಯ ಮಾಡಿದ್ದೆವೆ. ಅದರಲ್ಲಿ ಏನಿದೆ? ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಕಾ? ಎಂದು ಕೇಳಿದರು.
ಸ್ವಾಮಿಜಿ ಅವರನ್ನು ಭೇಟಿ ಮಾಡುವುದಕ್ಕೆ ಇವರು ಎಷ್ಟು ಜನ ಹೋಗಿದ್ದರು? ಎಲ್ಲಾ ಟಿವಿಗಳಲ್ಲಿ ವೀಡಿಯೋ ಬಂದಿದೆಯಲ್ಲ.. ಇವರು ಏನು ಬೇಕಾದರೂ ಮಾಡಬಹುದು, ನಾವು ಮಾಡುವ ಹಾಗಿಲ್ಲವೇ? ಅದು ಕೂಡ ಒಂದು ದೊಡ್ಡ ರಾಜಕೀಯನಾ? ವರ್ಷದ ಮೊದಲ ದಿನ ನಮ್ಮ ಸಮುದಾಯದ ಗುರು ಹಿರಿಯರ ಆಶೀರ್ವಾದ ಪಡೆಯುತ್ತೇವೆ. ಅದೇನು ಮಹಾ ಅಪರಾಧವಾ? ಜ್ವರ ಬಂದಾಗ ಆಸ್ಪತ್ರೆಗೆ ಹೋಗದೆ ಇನ್ನೆಲ್ಲಿಗೆ ಹೋಗಲು ಸಾಧ್ಯ? ನಾನು 140 ಮಠಗಳಿಗೆ ಅನುದಾನ ನೀಡಿದ್ದೆ. ಮಠಗಳು ಮಾಡುತ್ತಿರುವ ಒಳ್ಳೆಯ ಕೆಲಸಗಳಿಗೆ ಸಹಕಾರ ನೀಡಿದ್ದೆ. ಇದೇನು ಹೊಸದಲ್ಲ ಎಂದು ಖಾರವಾಗಿ ಟಾಂಗ್ ಕೊಟ್ಟರು.
ಒಂದು ವರ್ಷದೊಳಗೆ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಆಗಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಕಾದು ನೋಡಿ. ರಾಜಕೀಯ ಎಂದರೆ ಅದು ಹರಿಯುವ ನೀರು. ಯಾವಾಗ ಏನೇನಾಗುತ್ತದೆಯೋ ನಮಗೂ ಗೊತ್ತಾಗಲ್ಲ. ಅವರಿಗೂ ಗೊತ್ತಾಗೋದಿಲ್ಲ. ಸಚಿವರೇ ಹೇಳುತ್ತಿದ್ದಾರೆ, ಕಾಂಗ್ರೆಸ್ ನಾಯಕರೇ ದಿನ ಬೆಳಗಾದರೆ ಹೇಳುತ್ತಿದ್ದಾರಲ್ಲ, ನೀವು ಅವರನ್ನೇ ಕೇಳಿ ಎಂದು ಮಾಧ್ಯಮಗಳಿಗೆ ತಿಳಿಸಿದರು ಕುಮಾರಸ್ವಾಮಿ ಅವರು.
ಜೆಡಿಎಸ್ ಎಲ್ಲಿದೆ ಎನ್ನುವ ದುರಹಾಂಕರ ಮಾತುಗಳನ್ನು ಇವರು ಆಡುತ್ತಿದ್ದಾರೆ. ಸಹವಾಸ ಮಾಡಿದಕ್ಕೆ ಈಗ ಜೆಡಿಎಸ್ ಈ ಹಂತಕ್ಕೆ ಬಂದಿದೆ. ಐದು ವರ್ಷ ಅಧಿಕಾರ ಮಾಡಿ ಅಂತ ಕೊಟ್ಟು ಬುಡ ಸಮೇತ ತೆಗೆಯೋಕೆ ಹೊರಟರಲ್ಲ, ಅದಕ್ಕೆ ಮರು ಜೀವ ಕೊಡುವುದಕ್ಕೆ ಪ್ರಯತ್ನ ಮಾಡುತ್ತಿದ್ದೇನೆ.ಪಕ್ಕದಲ್ಲಿಯೇ ಕೂತು ಹಳ್ಳ ತೋಡಿದ್ರಲ್ಲ, ಎಲ್ಲಾ ನೆನಪಿದೆ ನನಗೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಧರ್ಮಸ್ಥಳದಲ್ಲಿ ಸರ್ಕಾರ ತೆಗೆಯಲು ಷಡ್ಯಂತ್ರ
ನಿಮ್ಮ ಸರ್ಕಾರ ತೆಗೆದವರು ಯಾರು ಎಂದು ಹಾಸನಾಂಬೆ ಸನ್ನಿಧಿಗೆ ಬಂದು ಆಣೆ ಮಾಡಿ ಎಂದು ಡಿ.ಕೆ ಶಿವಕುಮಾರ್ ಹಾಕಿರುವ ಸವಾಲಿಗೆ ತಿರುಗೇಟು ಕೊಟ್ಟ ಕುಮಾರಸ್ವಾಮಿ, ಆಣೆ ಯಾಕೆ ಮಾಡಬೇಕು? ಧರ್ಮಸ್ಥಳ ಆಯುರ್ವೇದ ಆಸ್ಪತ್ರೆಯಲ್ಲಿ ಮೈತ್ರಿ ಸರ್ಕಾರ ತೆಗೆಯಲು ಗುಳಿಗೆ ಅರೆದಿದ್ದನ್ನು ನೀವೇ (ಮಾಧ್ಯಮಗಳು) ತೋರಿಸಿದರಲ್ಲ. ಅದಕ್ಕೆ ಹಾಸನಾಂಬೆಯ ಮುಂದೆ ಪ್ರಮಾಣ ಮಾಡಬೇಕಾ? ಧರ್ಮಸ್ಥಳದಲ್ಲಿ ಕುತಂತ್ರ ಮಾಡಿ ಬಂದರಲ್ಲ, ಈ ಸರ್ಕಾರ ಒಂದೇ ವರ್ಷ ಎಂದು ಹೇಳಿದರಲ್ಲ. ಆಮೇಲೆ ಏನಾಯಿತು ಎನ್ನುವುದು ನಾಡಿನ ಜನರಿಗೆ ಗೊತ್ತಿದೆಯಲ್ಲ.
ಮಾಜಿ ಶಾಸಕ ಪ್ರೀತಮ್ ಗೌಡ ಅವರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಪಾಪ.. ಪದೇಪದೆ ಯಾಕೆ ಅವರ ಹೆಸರು ಎಳೆದು ತರುತ್ತೀರಿ? ಅವರು ಎನ್ ಡಿಎ ಪರ ಮತ ಕೇಳಿದ್ದಾರೆ. ಎನ್ ಡಿಎ ಅಭ್ಯರ್ಥಿಗೆ ಮತ ಕೊಡಿ ಎಂದು ಹೇಳಿದ್ದಾರೆ. ಅವರು ರಾಜ್ಯದ ನಾಯಕರಿದ್ದಾರೆ. ಬೇರೆ ಬೇರೆ ಕಡೆ ಜವಾಬ್ದಾರಿ ಕೊಟ್ಟಿದ್ದಾರೆ, ಎಲ್ಲಾ ಕಡೆ ಹೋಗಬೇಕಿದೆ. ಅವರ ಜತೆಗೆ ಬಿಜೆಪಿಯ ಎಲ್ಲಾ ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ, ಯಾವುದೇ ಗೊಂದಲ ಇಲ್ಲ ಎಂದರು.
ಮಂಡ್ಯಕ್ಕೆ ಕುಮಾರಸ್ವಾಮಿ ಹೊರಗಿನವರು ಎಂಬ ಕಾಂಗ್ರೆಸ್ ಆರೋಪದ ಬಗ್ಗೆ ಮಾತನಾಡಿದ ಅವರು, “ಅವರ ತಟ್ಟೆಯಲ್ಲಿ ಹೆಗ್ಗಣವೇ ಸತ್ತು ಬಿದ್ದಿದೆ. ಇಲ್ಲಿ ನೊಣ ಹುಡುಕುತ್ತಿದ್ದಾರೆ. ಸೋನಿಯಾ ಗಾಂಧಿ ಬಂದಾಗ ಅವರಿಗೆ ಬೇರೆ ದೇಶದವರು ಅನ್ನಿಸಲಿಲ್ವ? ಬಳ್ಳಾರಿಗೆ ಬಂದು ಚುನಾವಣೆಗೆ ಬಂದು ನಿಂತರಲ್ಲ. ಅವರೇನು ಬಳ್ಳಾರಿಯವರಾ? ನಾನಾದರೂ ಕನ್ನಡಿಗ. ಈ ರಾಜ್ಯದ ಮಣ್ಣಲ್ಲಿ ಹುಟ್ಡಿದವನು. ಇಂದಿರಾಗಾಂಧಿ ಚಿಕ್ಕಮಗಳೂರಿಗೆ ಯಾಕೆ ಬಂದರು? ರಾಹುಲ್ ಗಾಂಧಿ ಅವರು ವಯನಾಡಿಗೆ ಹೋಗಿಲ್ಲವೇ? ಅಮೇಥಿ ಬಿಟ್ಟು ಯಾಕೆ ಹೋದರು? ನಾನು ಮಂಡ್ಯದಿಂದ ಸ್ಪರ್ಧೆ ಮಾಡಿದರೆ ಅಪರಾಧವೇ?” ಎಂದರು.
ಜೆಡಿಎಸ್ ಒಂದು ಸ್ಥಾನ ಗೆಲ್ಲಲ್ಲ ಎಂಬ ಡಿ.ಕೆ.ಶಿವಕುಮಾರ್ ಹೇಳಿರುವ ಬಗ್ಗೆ ಕುಟುಕಿದ ಮಾಜಿ ಮುಖ್ಯಮಂತ್ರಿಗಳು; ಅವರು ಭವಿಷ್ಯ ಹೇಳುವುದರಲ್ಲಿ ಎಕ್ಸಪರ್ಟ್ ಇದ್ದಾರೆ. ಅವರು ಜ್ಯೋತಿಷಿನೇ ಅಲ್ಲವೇ? ಅವರ ಬ್ಯಾಗ್ ತೆಗೆದರೆ ಜ್ಯೋತಿಷ್ಯದ ಬಗ್ಗೆ ಸಾಕಷ್ಟು ಪುಸ್ತಕಗಳು ಸಿಗುತ್ತವೆ. ಅವರು ಸಂಶೋಧನೆ ಮಾಡಿರಬಹುದು. ನಾವೂ ರೀಸರ್ಚ್ ಮಾಡಿದೇವೆ. ಈ ರಾಜ್ಯದಲ್ಲಿ ಕಾಂಗ್ರೆಸ್ ತೆಗೆಯಲು ಏನು ಮಾಡಬೇಕೊ ಜನ ಅದನ್ನೇ ಮಾಡುತ್ತಾರೆ. ಹಿಂದೆ ಹೋದ ಕಡೆ ಜನ ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ ಎಂದು ಕೂಗುತ್ತಿದ್ದರು. ಅದು ಜನರ ಆಶೀರ್ವಾದ. ಈಗ ಕೇಂದ್ರದ ಮಂತ್ರಿ ಆಗುತ್ತಾರೆ ಎಂದು ಕೂಗುತ್ತಿದ್ದಾರೆ. ಅದಕ್ಕೆ ನಾನು ಋಣಿ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14ರಂದು ಮೈಸೂರಿಗೆ ಬರುತ್ತಾರೆ. ನಂತರ ಇನ್ನು ಎರಡು ಮೂರು ಕಡೆ ಬರುವವರಿದ್ದಾರೆ. ನಾನು ಕೂಡ 50 ಸಾರ್ವಜನಿಕ ಸಭೆಗಳಲ್ಲಿ ಪ್ರಚಾರ ಮಾಡುತ್ತೇನೆ. ಕಾಂಗ್ರೆಸ್ ನವರು, ಪಾಪ.. ಕುಮಾರಸ್ವಾಮಿ ಕಾಣೆ ಆಗಿದ್ದಾರೆ ಎಂದು ಮಂಡ್ಯದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಕಾಣೆ ಆಗಿಲ್ಲ. 28ಕ್ಕೆ 28 ಸ್ಥಾನ ಗೆಲ್ಲುವುದಕ್ಕೆ ಬಿಜೆಪಿ ಜತೆ ಸೇರಿ 50 ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ನಕಲಿ ಫ್ರೊಫೈಲ್ ರಚಿಸಿ ಯುವತಿಯರಿಗೆ ವಂಚನೆ : ಮದುವೆ ಆಸೆ ತೋರಿಸಿ ಹಣ ದೋಚುತ್ತಿದ್ದ ವಂಚಕ ಸೆರೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.