ನವದೆಹಲಿ: ಬ್ಯಾಂಕ್ ನಲ್ಲಿ ಖಾತೆ ತೆರೆಯಲು ಗ್ರಾಹಕರು ತಮ್ಮ ಧರ್ಮ ನಮೂದಿಸುವುದು ಅಗತ್ಯವಾಗಿದೆ ಎಂಬ ವದಂತಿಗಳನ್ನು ತಳ್ಳಿ ಹಾಕಿರುವ ಕೇಂದ್ರ ಹಣಕಾಸು ಸಚಿವಾಲಯ, 'ನಿಮ್ಮ ಗ್ರಾಹಕರನ್ನು ಅರಿಯಿರಿ (KNOW YOUR CUSTOMER)' ಫಾರ್ಮ್ ಭರ್ತಿ ಮಾಡುವ ವೇಳೆ ಭಾರತೀಯ ನಾಗರಿಕರ ಧರ್ಮದ ಮಾಹಿತಿ ಅನಗತ್ಯ ಎಂದು ಹೇಳಿದೆ.
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ರಾಜೀವ್ ಕುಮಾರ್, "ಪ್ರಸ್ತುತ ಖಾತೆ ಹೊಂದಿರುವ ಗ್ರಾಹಕರು ಹಾಗೂ ಹೊಸದಾಗಿ ಖಾತೆ ತೆರೆಯ ಬಯಸುವ ಗ್ರಾಹಕರು ಬ್ಯಾಂಕ್ ಖಾತೆ ತೆರೆಯುವಾಗ ತಮ್ಮ ಧರ್ಮದ ಕುರಿತು ಮಾಹಿತಿ ನೀಡುವುದು ಅನಗತ್ಯ ಮತ್ತು ಇದು KYCಗೂ ಅನ್ವಯಿಸುತ್ತದೆ" ಎಂದು ಹೇಳಿದ್ದಾರೆ.
There is no requirement for #Indian citizens to declare their religion for opening/ existing #Bank account or for #KYC. Do not fall for baseless rumours about any such move by Banks @PIB_India @DDNewsLive @PTI_News @FinMinIndia @PMOIndia
— Rajeev kumar (@rajeevkumr) December 21, 2019
ಹಣಕಾಸು ಸಚಿವಾಲಯದ FEMA ನಿಯಮಾವಳಿಗಳ ಅಡಿ ಭಾರತೀಯ ನಾಗರಿಕರು ಭಾರತದ ಯಾವುದೇ ಬ್ಯಾಂಕ್ ನಲ್ಲಿ ಖಾತೆ ತೆರೆಯಲು ಅಥವಾ ಯಾವುದೇ ಬ್ಯಾಂಕಿನ ಖಾತೆದಾರರು ತಮ್ಮ ಧರ್ಮದ ಕುರಿತು ಮಾಹಿತಿ ನೀಡುವುದು ಕಡ್ಡಾಯ ಎಂಬ ವದಂತಿಗಳ ಹಿನ್ನೆಲೆ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳ ವರದಿಗಳ ಪ್ರಕಾರ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳಿಂದ ವಲಸೆ ಬಂದು ದೀರ್ಘಾವಧಿಯ ವಿಸಾ ಹೊಂದಿರುವ ಹಿಂದೂ , ಸಿಖ್, ಬೌದ್ಧ, ಜೈನ, ಪಾರಸಿ ಹಾಗೂ ಕ್ರಿಶ್ಚಿಯನ್ ಸಮುದಾಯದ ನಾಗರಿಕರು ಬ್ಯಾಂಕ್ ಖಾತೆ ತೆರೆಯುವಾಗ KYC ಫಾರ್ಮ್ ನಲ್ಲಿ ತಮ್ಮ ಧರ್ಮದ ಮಾಹಿತಿ ನೀಡುವುದು ಅನಿವಾರ್ಯವಾಗಿದೆ ಎನ್ನಲಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.