Zaheer Khan: ಭಾರತ ಕ್ರಿಕೆಟ್ ತಂಡದ ಕೋಚಿಂಗ್ನಲ್ಲಿ ವಿಶ್ವಕಪ್ ವಿಜೇತ ಹಾಗೂ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರ ಯುಗ ಆರಂಭವಾಗಿದೆ. ಗಂಭೀರ್ ಅವರನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಬಿಸಿಸಿಐ ನೇಮಕ ಮಾಡಿದೆ. ಈ ವಿಷಯವನ್ನು ಮಂಗಳವಾರ ಅಧಿಕೃತವಾಗಿ ಬಹಿರಂಗಪಡಿಸಲಾಗಿದೆ. ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಿ ಗಂಭೀರ್ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಈ ತಿಂಗಳ ಅಂತ್ಯದಲ್ಲಿ ಆರಂಭವಾಗಲಿರುವ ಶ್ರೀಲಂಕಾ ಪ್ರವಾಸದಿಂದ ಗಂಭೀರ್ ಅವರ ಆಕ್ಷನ್ ಆರಂಭವಾಗಲಿದೆ. ಆದರೆ, ಹೊಸ ಕೋಚ್ ಗಂಭೀರ್ ಬಿಸಿಸಿಐಗೆ ಸಹಾಯಕ ಸಿಬ್ಬಂದಿಯ ಆಯ್ಕೆಯಲ್ಲಿ ಸ್ವಾತಂತ್ರ್ಯ ನೀಡುವಂತೆ ಕೇಳಿಕೊಂಡಿದ್ದಾರೆ. ಮಂಡಳಿಯಿಂದ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟಿಂಗ್ ಕೋಚ್ ಅಭಿಷೇಕ್ ನಾಯರ್ ಅವರನ್ನು ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಿ ಗಂಭೀರ್ ಶಿಫಾರಸು ಮಾಡಿದ್ದಾರೆ.
ಟಿ ದಿಲೀಪ್ ಫೀಲ್ಡಿಂಗ್ ಕೋಚ್ ಆಗಿ ಮುಂದುವರಿಯಬೇಕೆಂದು ಗಂಭೀರ್ ಬಯಸಿದ್ದಾರೆ. ಆದ್ರೆ ಬೌಲಿಂಗ್ ಕೋಚ್ ಯಾರು ಅನ್ನೋದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಈ ಹಿನ್ನಲೆಯಲ್ಲಿ ಕರ್ನಾಟಕದ ವೇಗದ ಬೌಲರ್ ವಿನಯ್ ಕುಮಾರ್ ಅವರ ಹೆಸರನ್ನು ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂಬ ಪ್ರಚಾರವೂ ಜೋರಾಗಿ ನಡೆಯುತ್ತಿದೆ. ಇದಕ್ಕೆ ಬಿಸಿಸಿಐ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ವಿನಯ್ ಕುಮಾರ್ ಅವರನ್ನು ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡಲು ಬಿಸಿಸಿಐ ಸಿದ್ಧವಿಲ್ಲ ಎಂದು ಹೇಳಿದ್ದಾರೆ.
ಜಹೀರ್ ಖಾನ್ ಮತ್ತು ಲಕ್ಷ್ಮೀಪತಿ ಬಾಲಾಜಿ ಈ ಒಬ್ಬರಲ್ಲಿ ಯಾರು ಕೋಚ್ ಆಗಲಿದ್ದಾರೆ ಎಂದು ಹೇಳಲಾಗುವುದಿಲ್ಲ. ಇಬ್ಬರಲ್ಲಿ ಒಬ್ಬರನ್ನು ನೇಮಿಸಲು ಚರ್ಚೆಗಳು ನಡೆಯುತ್ತಿವೆ. ಹರ್ಷಿತ್ ರಾಣಾ, ಮಯಾಂಕ್ ಯಾದವ್ ಮತ್ತು ತುಷಾರ್ ದೇಶಪಾಂಡೆಯಂತಹ ಯುವ ಬೌಲರ್ಗಳನ್ನು ಮ್ಯಾಚ್ ವಿನ್ನರ್ಗಳನ್ನಾಗಿ ಮಾಡಲು ಅಪಾರ ಅನುಭವ ಹೊಂದಿರುವ ವೇಗದ ಬೌಲರ್ ಅನ್ನು ಆಯ್ಕೆ ಮಾಡಲು ಬಿಸಿಸಿಐ ಅಗಾದವಾದ ಯೋಜನೆ ನಡೆಸಿದೆ.
45 ವರ್ಷದ ಜಹೀರ್ ಖಾನ್ 92 ಟೆಸ್ಟ್, 200 ODI ಮತ್ತು 17 T20I ಗಳನ್ನು ಆಡಿದ್ದಾರೆ. 2011ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಜಹೀರ್ ಖಾನ್ ಪ್ರಮುಖ ಪಾತ್ರ ವಹಿಸಿದ್ದರು. 42 ವರ್ಷದ ಬಾಲಾಜಿ 8 ಟೆಸ್ಟ್, 30 ODI ಮತ್ತು 5 T20I ಪಂದ್ಯಗಳನ್ನು ಆಡಿದ್ದಾರೆ. ಅವರು CSK ಮತ್ತು KKR ತಂಡಗಳಿಗೆ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಿದರು.