ನವದೆಹಲಿ: ಕೊರೊನಾವೈರಸ್ (Covid-19) ಸೋಂಕಿನಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ. ಏತನ್ಮಧ್ಯೆ ಶಾಲಾ ಶುಲ್ಕ ಹೆಚ್ಚಳ, ಶಾಲೆಗಳಿಗೆ ಮುಂಗಡ ಶುಲ್ಕ ಪಾವತಿ ಎಲ್ಲವೂ ಪೋಷಕರಿಗೆ ಮತ್ತಷ್ಟು ಹೊರೆಯನ್ನುಂಟು ಮಾಡಿವೆ. ಇದೀಗ ಶಾಲಾ-ಕಾಲೇಜುಗಳಿಗೆ ತ್ರೈಮಾಸಿಕ ಮುಂಗಡ ಮತ್ತು ಶಾಲಾ ಬಸ್ ಶುಲ್ಕವನ್ನು ತೆಗೆದುಕೊಳ್ಳದಂತೆ ಉತ್ತರ ಪ್ರದೇಶ ಸರ್ಕಾರ ನಿರ್ದೇಶನ ನೀಡಿದ್ದು ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಈ ವರ್ಷ ಶಾಲಾ ಶುಲ್ಕ ಹೆಚ್ಸಿಸದಂತೆ ಖಾಸಗಿ ಶಾಲೆಗಳಿಗೆ ಮಾನವ ಸಂಪನ್ಮೂಲ ಸಚಿವರ ಮನವಿ
ಕರೋನಾದ ದುರಂತದಿಂದಾಗಿ ಶಾಲೆಗಳನ್ನು ಮುಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಆದರೂ ಮಕ್ಕಳ ವಾಹನ ಶುಲ್ಕವನ್ನೂ ಪಾವತಿಸುವಂತೆ ಶಾಲೆಗಳು ಸೂಚನೆ ನೀಡಿರುವುದು ಗಮನಕ್ಕೆ ಬಂದಿದೆ. ಮಕ್ಕಳು ಶಾಲೆಗೆ ಹೋಗದಿರುವಾಗಲೂ ಅವರಿಂದ ಶಾಲಾ ಬಸ್ ಶುಲ್ಕವನ್ನು ಏಕೆ ಕೇಳಲಾಗುತ್ತಿದೆ ಎಂದು ಪ್ರೌಢ ಶಿಕ್ಷಣ ಪ್ರಧಾನ ಕಾರ್ಯದರ್ಶಿ ಆರಾಧನಾ ಶುಕ್ಲಾ ಪ್ರಶ್ನಿಸಿದ್ದಾರೆ. ಇದು ಮಾತ್ರವಲ್ಲ ಶಾಲಾ ಶುಲ್ಕವನ್ನು ಠೇವಣಿ ಮಾಡಲು ಪೋಷಕರ ಮೇಲೆ ಒತ್ತಡ ಹೇರಬಾರದು. ಮುಂಗಡ ಶುಲ್ಕವನ್ನು ಯಾವುದೇ ವೆಚ್ಚದಲ್ಲಿ ಜಮಾ ಮಾಡಬಾರದು ಎಂದವರು ತಿಳಿಸಿದ್ದಾರೆ.
ಮುಂಗಡ ಶುಲ್ಕ ಅಥವಾ ಸಾರಿಗೆ ಶುಲ್ಕವನ್ನು ಪಾವತಿಸದ ಕಾರಣ ಆನ್ಲೈನ್ ತರಗತಿಗಳಿಂದ ಮಕ್ಕಳನ್ನು ಬೇರ್ಪಡಿಸುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ಡಿಎಂ ಮತ್ತು ಡಿಐಒಎಸ್ಗೆ ಪ್ರೌಢ ಶಿಕ್ಷಣ ಮಂಡಳಿ ಸೂಚನೆ ನೀಡಿದೆ. ಜೊತೆಗೆ ಎಂತಹದೇ ಸನ್ನಿವೇಶವಿದ್ದರೂ ಎಲ್ಲಾ ಮಕ್ಕಳಿಗೆ ಒಟ್ಟಿಗೆ ಆನ್ಲೈನ್ ತರಗತಿಗಳ ಪ್ರಯೋಜನವನ್ನು ನೀಡಬೇಕು ಎಂದು ಶಾಲೆಗಳಿಗೆ ನಿರ್ದೇಶಿಸಲಾಗಿದೆ.
ಲಾಕ್ಡೌನ್ ನಡುವೆ ಪೋಷಕರಿಗೆ ಹೊರೆಯಾದ ಶಾಲಾ ಶುಲ್ಕ
ಕೆಲವು ಶಾಲೆಗಳ ಸಾರಿಗೆ ಶುಲ್ಕದ ಬೇಡಿಕೆಯ ಮೇರೆಗೆ ಪ್ರೌಢ ಶಿಕ್ಷಣ ಮಂಡಳಿಯ ಹೆಚ್ಚುವರಿ ನಿರ್ದೇಶಕ ಮಹೇಂದ್ರ ದೇವ್ ಅವರು ಏಪ್ರಿಲ್ 22ರವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಶಾಲಾ ನಿರೀಕ್ಷಕರಿಂದ (ಡಿಐಒಎಸ್) ವರದಿ ಕೋರಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳಿಗೆ ಪ್ರೊಫಾರ್ಮಾ ಕಳುಹಿಸಲಾಗಿದೆ.
ಇದಕ್ಕೂ ಮುನ್ನ ದೆಹಲಿಯ ಖಾಸಗಿ ಶಾಲೆಗಳು ಪ್ರಸ್ತುತ ವಿದ್ಯಾರ್ಥಿಗಳಿಂದ 3 ತಿಂಗಳ ಶುಲ್ಕವನ್ನು ಸಂಗ್ರಹಿಸುವಂತಿಲ್ಲ ಎಂದು ದೆಹಲಿ ಸರ್ಕಾರ ಕೂಡ ಆದೇಶಿಸಿದೆ. ಜೊತೆಗೆ ಈ ವರ್ಷ ಯಾವುದೇ ಶಾಲೆಗಳು ಶುಲ್ಕ ಹೆಚ್ಚಳ ಮಾಡುವಂತಿಲ್ಲ ಎಂದು ಎಲ್ಲಾ ಶಾಲೆಗಳಿಗೆ ದೆಹಲಿ ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ.
ದೆಹಲಿ ಸರ್ಕಾರದ ಶಿಕ್ಷಣ ಇಲಾಖೆಯ ಆದೇಶದಲ್ಲಿ ಯಾವುದೇ ಖಾಸಗಿ ಶಾಲೆಯು ವಿದ್ಯಾರ್ಥಿಗಳಿಂದ ಒಂದು ತಿಂಗಳಿಗಿಂತ ಹೆಚ್ಚಿನ ಬೋಧನಾ ಶುಲ್ಕವನ್ನು ವಿಧಿಸುವಂತಿಲ್ಲ ಎಂದು ಹೇಳಿದೆ. ಇದರೊಂದಿಗೆ ಯಾವುದೇ ಖಾಸಗಿ ಶಾಲೆಗಳು ಈ ಶೈಕ್ಷಣಿಕ ವರ್ಷದಲ್ಲಿ ಶಾಲಾ ಶುಲ್ಕವನ್ನು ಹೆಚ್ಸಿಸುವಂತಿಲ್ಲ. ಬೋಧನಾ ಶುಲ್ಕವನ್ನು ಮೂರು ತಿಂಗಳಿಗೆ ಒಟ್ಟಿಗೆ ಪಡೆಯುವ ಬದಲಿಗೆ ಪ್ರತಿ ತಿಂಗಳು ಠೇವಣಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ನಿರ್ದೇಶನ ನೀಡಲಾಗಿದೆ.
ಯಾವುದೇ ಶಾಲೆಯು 3 ತಿಂಗಳ ಶುಲ್ಕವನ್ನು ಕೇಳಿದರೆ ಅಥವಾ ಶುಲ್ಕವನ್ನು ಹೆಚ್ಚಿಸಿದರೆ ಅಂತಹ ಶಾಲಾ ಮಂಡಳಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈ ಆದೇಶವು ಎಲ್ಲಾ ಖಾಸಗಿ ಶಾಲೆಗಳಿಗೆ ಅನ್ವಯವಾಗಲಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.